ಜಿಲ್ಲೆ

ಧರ್ಮಸ್ಥಳ ಭಜನಾ ಪರಿಷತ್ತಿನ ಸಮಾಲೋಚನಾ ಸಭೆ

ಗೋಪಾಲಕೃಷ್ಣ ಪಾದೂರ್

ಉಡುಪಿ: ವಿಶ್ವಗಿತಾ ಪರ್ಯಾಯದಲ್ಲಿ ನ. 28ರಂದು ಲಕ್ಷ ಕಂಠ ಗೀತಾ ಪಾರಾಯಣಕ್ಕೆ ಆಗಮಿಸುತ್ತಿರುವ ವಿಶ್ವ ನಾಯಕ ಪ್ರಧಾನ ಮಂತ್ರಿ ನರೇಂದ್ರ ಮೋದಿ ಜೊತೆ ಜಗದೊಡೆಯ ಕೃಷ್ಣನ ಸನ್ನಿಧಾನದಲ್ಲಿ ಗೀತಾ ಪಾರಾಯಣ ಮತ್ತು ಭಜನೆ ಮಾಡುವುದರ ಮೂಲಕ ಧರ್ಮ ಜಾಗೃತಿ ಕಾರ್ಯದಲ್ಲಿ ತೊಡಗಿಸಿಕೊಳ್ಳುವಂತೆ ಪರ್ಯಾಯ ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಕರೆಯಿತ್ತರು.

ಬೃಹತ್​ ಗೀತೋತ್ಸವದ ಪ್ರಯುಕ್ತ ನ. 28 ಮತ್ತು 30ರಂದು ನಡೆಯಲಿರುವ ಲಕ್ಷ ಕಂಠ ಗೀತಾ ಪಾರಾಯಣ ಮತ್ತು ಭಜನೋತ್ಸವ ಅಂಗವಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಭಜನಾ ಪರಿಷತ್ತು, ಗ್ರಾಮಾಭಿವೃದ್ಧಿ ಯೋಜನೆ, ಜನಜಾಗೃತಿ ವೇದಿಕೆ ಪದಾಧಿಕಾರಿಗಳ ಸಮಾಲೋಚನಾ ಸಭೆಯಲ್ಲಿ ಮಾತನಾಡಿದರು.

ಉಡುಪಿ ಹಾಗೂ ಧರ್ಮಸ್ಥಳ ಕ್ಷೇತ್ರದ ಅವಿನಾಭಾವ ಸಂಬಂಧವಿದ್ದು, ಧರ್ಮಸ್ಥಳ ಕ್ಷೇತ್ರದ ಎಲ್ಲಾ ಸಂಘಟನೆಗಳು ಸಕ್ರಿಯವಾಗಿ ಗೀತೋತ್ಸವದಲ್ಲಿ ಭಾಗವಹಿಸಬೇಕು ಎಂದು ತಿಳಿಸಿದರು. ಉಡುಪಿ, ಕುಂದಾಪುರ, ಹೆಬ್ರಿ, ಕಾರ್ಕಳ, ಭಟ್ಕಳ, ಬೈಂದೂರು, ಹೊಸನಗರ, ತೀರ್ಥಹಳ್ಳಿ, ಕಾಪು ವಲಯಗಳ ಸುಮಾರು 200 ಕ್ಕೂ ಹೆಚ್ಚು ಪದಾಧಿಕಾರಿಗಳು ಮತ್ತು ಭಜನಾ ಮಂಡಳಿಗಳ ಪ್ರತಿನಿಧಿಗಳು ಭಾಗವಹಿಸಿದ್ದರು. ಮಠದ ದಿವಾನ್​ ನಾಗರಾಜ ಆಚಾರ್ಯ ಮಾಹಿತಿ ನೀಡಿದರು.

ಧರ್ಮಸ್ಥಳ ಭಜನಾ ಪರಿಷತ್ತಿನ ರಾಜ್ಯ ಸಂಚಾಲಕ ಸುಬ್ರಹ್ಮಣ್ಯ ಪ್ರಸಾದ್​ ಹಾಗೂ ಬೃಹತ್​ ಗೀತೋತ್ಸವ ಸಮಿತಿಯ ಸಂಚಾಲಕ ಬೈಕಾಡಿ ಸುಪ್ರಸಾದ್​ ಶೆಟ್ಟಿ ಮಾತನಾಡಿದರು. ಭಜನಾ ಪರಿಷತ್ತಿನ ಉಪಾಧ್ಯಕ್ಷ ರಾಜೇಂದ್ರ ಕುಮಾರ್​, ಅಧ್ಯಕ್ಷ ಚಂದ್ರಶೇಖರ ಸಾಲಿಯಾನ್​, ಗ್ರಾಮಾಭಿವೃದ್ಧಿ ಸಂದ ಆನಂದ ಸುವರ್ಣ, ನಾಗರಾಜ್​ ಶೆಟ್ಟಿ, ಗೀತಾ ತರಬೇತುದಾರೆ ಉಷಾ ಹೆಬ್ಬಾರ್​, ಪ್ರಮೋದ್​ ಸಾಗರ್​, ರವೀಂದ್ರಾಚಾರ್ಯ, ರಮೇಶ್​ ಭಟ್​ ಉಪಸ್ಥಿತರಿದ್ದರು. ವಿಕ್ರಮ್​ ಕುಂಟಾರ್​ ಸ್ವಾಗತಿಸಿದರು, ಕೆ.ವಿ ರಮಣ್​ ವಂದಿಸಿದರು.