ಅಳವಂಡಿ: ಸಮೀಪದ ಕವಲೂರು ಗ್ರಾಮದಲ್ಲಿ ಶ್ರಾವಣ ಮಾಸದಾದ್ಯಂತ ನಡೆದ ಆರಾದ್ಯದೇವ ಶ್ರೀಗುರುಬಸವೇಶ್ವರ ಭಜನಾ ಮಂಗಲ ಕಾರ್ಯಕ್ರಮದ ಅಂಗವಾಗಿ ಸೋಮವಾರ ಶ್ರೀಗುರುಬಸವೇಶ್ವರ ಅಡ್ಡಪಲ್ಲಕ್ಕಿ ಮೆರವಣಿಗೆ ಅದ್ದೂರಿಯಿಂದ ನಡೆಯಿತು.
ಬೆಳಿಗ್ಗೆ ಶ್ರೀಗುರುಬಸವೇಶ್ವರ ಮೂರ್ತಿಗೆ ವಿಶೇಷ ಪೂಜೆ ಪುನಸ್ಕಾರಗಳು ನಡೆದವು. ಭಕ್ತರು ದೇವರಿಗೆ ಪೂಜೆ ಸಲ್ಲಿಸಿ ನೈವೇದ್ಯ, ಕಾಯಿ, ಕರ್ಪೂರ ಸಲ್ಲಿಸಿದರು. ವಿವಿಧ ಹೂಗಳು, ಅಲಂಕಾರಿಕ ವಸ್ತುಗಳಿಂದ ಸಿಂಗರಿಸಿದ ಶ್ರೀಗುರು ಬಸವೇಶ್ವರ ಮೂರ್ತಿಯ ಅಡ್ಡಪಲ್ಲಕ್ಕಿ ಗ್ರಾಮದ ಚೌಕಿಕಟ್ಟಿ,
ಹೇಮರಡ್ಡಿ ಮಲ್ಲಮ್ಮ ದೇವಸ್ಥಾನ, ಯತೀಶ್ವರ ದೇವಸ್ಥಾನ ಹಾಗೂ ಗ್ರಾಮದ ಪ್ರಮುಖ ಬೀದಿಗಳಲ್ಲಿ ಬಿದರಳ್ಳಿಯ ಶ್ರೀದುರ್ಗಾದೇವಿ ಭಜನಾ ಮೇಳ, ಮೋರನಾಳ ಶ್ರೀಗೋಣಿಬಸವೇಶ್ವರ ಭಜನಾ ಸಂಘ, ನೆಲ್ಲೂರು ಶ್ರೀಶಾಂತೇಶ್ವರ ಭಜನಾ ಸಂಘ, ಲಕಮಾಪುರ ಶ್ರೀಶರಣಬಸವೇಶ್ವರ ಭಜನಾ ಸಂಘದೊಂದಿಗೆ ನಡೆದು ಮರಳಿ ದೇವಸ್ಥಾನ ತಲುಪಿತು. ನಂತರ ಅನ್ನ ಸಂತರ್ಪಣೆ ಕಾರ್ಯಕ್ರಮ ನಡೆಯಿತು.
ಪ್ರಮುಖರಾದ ನಾಗರಾಜ ಕಗ್ಗಲ್, ಮುತ್ತಣ್ಣ ಬಿಸರಳ್ಳಿ, ಅಜಯ ಕುರವತ್ತಿಮಠ, ಸುರೇಶ, ಹನುಮಂತ, ಶಿವಯ್ಯ, ನಿಂಗಪ್ಪ, ಬಸವರಾಜ, ಮಲ್ಲಿಕಾರ್ಜುನ ಹಾಗೂ ಇತರರು ಇದ್ದರು.