ಉಪ್ಪಳ: ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮ ಮಠದಲ್ಲಿ ಫೆ.22ರಂದು ಆರಂಭವಾದ 19ನೇ ವರ್ಷದ ಅಖಂಡ ಭಜನಾ ಸಪ್ತಾಹ ಮಾ.1ರಂದು ಸೂರ್ಯಾಸ್ತ 6.37ಕ್ಕೆ ಭಜನಾ ಮಂಗಳಾಚರಣೆಯೊಂದಿಗೆ ಸಂಪನ್ನಗೊಳ್ಳಲಿದೆ.
2ರಂದು ಬೆಳಗ್ಗೆ 7.30ಕ್ಕೆ ಶ್ರೀಕ್ಷೇತ್ರ ಕಟೀಲಿನ ಆನುವಂಶಿಕ ಪ್ರಧಾನ ಅರ್ಚಕ ಕಮಲಾದೇವಿ ಪ್ರಸಾದ ಆಸ್ರಣ್ಣ ಆಚಾರ್ಯತ್ವದಲ್ಲಿ, ಶ್ರೀ ಲಕ್ಷ್ಮೀನಾರಾಯಣ ಹೃದಯ ಹೋಮ ಆರಂಭಗೊಂಡು, ಬೆಳಗ್ಗೆ 10.30ಕ್ಕೆ ಪೂರ್ಣಾಹುತಿಯಾದ ಬಳಿಕ ಮಹಾಪೂಜೆ ನಡೆಯಲಿದೆ.
ಶ್ರೀಯೋಗಾನಂದ ಸರಸ್ವತೀ ಸ್ವಾಮೀಜಿ ಉಪಸ್ಥಿತಿಯಲ್ಲಿ ಧಾರ್ಮಿಕ ಸಭಾಕಾರ್ಯಕ್ರಮದಲ್ಲಿ ಕೇರಳದ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ನೂತನ ಅತಿಥಿಗೃಹ ಲೋಕಾರ್ಪಣೆ ಮಾಡಲಿರುವರು. ಕೇಂದ್ರ ಸಚಿವ ಶ್ರೀಪಾದ ಯಸ್ಸೋ ನಾಯಕ್ ಅಧ್ಯಕ್ಷತೆ ವಹಿಸುವರು. ಮಾಜಿ ಸಚಿವ ಪ್ರತಾಪ್ ಚಂದ್ರ ಸಾರಂಗಿ, ರಾಜ್ಯಸಭಾ ಸದಸ್ಯೆ, ಭಾರತೀಯ ಒಲಿಂಪಿಕ್ಸ್ ಸಂಘದ ಅಧ್ಯಕ್ಷೆ ಪಿ.ಟಿ.ಉಷಾ, ರಾಜ್ಯಸಭಾ ಸದಸ್ಯ ಕೆ.ನಾರಾಯಣ ಬೆಂಗಳೂರು, ಸಿಎಂಆರ್‌ಎಲ್ ವಿವಿ ಚೇರ್ಮನ್ ಡಾ.ಕೆ.ಸಿ.ರಾಮಮೂರ್ತಿ, ರಮೇಶ್ ರಾಜು, ರಘುರಾಮ ಶೆಟ್ಟಿ, ಎ.ಜೆ.ಶೇಖರ್ ಉಪಸ್ಥಿತರಿರುವರು. ಸದಾಶಿವ ಶೆಟ್ಟಿ ಕುಳೂರು ಕನ್ಯಾನ, ಕೆ.ಕೆ.ಶೆಟ್ಟಿ ಮತ್ತು ವಿಶ್ವನಾಥ್ ವೇಂಗರೆ ಅವರನ್ನು ಸನ್ಮಾನಿಸಲಾಗುವುದು.
ಮಧ್ಯಾಹ್ನ 2ರಿಂದ ಸವಿಜೀವನಂ ನೃತ್ಯಕಲಾ ಕ್ಷೇತ್ರ ಕೊಂಡೆವೂರು ಅವರಿಂದ ನೃತ್ಯ ವೈಭವ ನಡೆಯಲಿರುವುದು. ಸಂಜೆ 6ಕ್ಕೆ ನಕ್ಷತ್ರನವದಲ್ಲಿ ನವಗ್ರಹ ಪೂಜೆ ಮತ್ತು ದೀಪೋತ್ಸವ ನಡೆಯಲಿದೆ ಎಂದು ಶ್ರೀಮಠದ ಪ್ರಕಟಣೆ ತಿಳಿಸಿದೆ.