ವಿಜಯವಾಣಿ ಸುದ್ದಿಜಾಲ ಧಾರವಾಡ
ಭಗವಂತನನ್ನು ಆರಾಧಿಸಲು ಇರುವ ಏಕೈಕ ಶ್ರೇಷ್ಠ ಮಾರ್ಗ ಭಜನೆ. ಆತನ ಸ್ತುತಿಯಿಂದ ಜೀವನ ಪಾವನವಾಗಿಸಿಕೊಳ್ಳಬೇಕು ಎಂದು ಉಡುಪಿ ಭಂಡಾರಕೇರಿ ಮಠದ ಶ್ರೀ ವಿದ್ಯೇಶತೀರ್ಥ ಶ್ರೀಪಾದರು ಹೇಳಿದರು.
ಇಲ್ಲಿನ ಹನುಮಂತನಗರದ ಶ್ರೀ ಕೃಷ್ಣ, ಶ್ರೀ ರಾಘವೇಂದ್ರ, ಮಹಾಗಣಪತಿ ದೇವತಾ ಸಮುಚ್ಚಯದಲ್ಲಿ ಆಷಾಢ ಏಕಾದಶಿ ನಿಮಿತ್ತ ಬುಧವಾರ ಆಯೋಜಿಸಿದ್ದ "ಭಕ್ತಿಯಿಂದ ಮುಕ್ತಿ' ಅಖಂಡ ಭಜನೆ ಕಾರ್ಯಕ್ರಮ ಉದ್ಘಾಟಿಸಿ ಮತ್ತು ತಪ್ತ ಮುದ್ರಾಧಾರಣೆ ನೆರವೇರಿಸಿ ಆಶೀರ್ವಚನ ನೀಡಿದರು.
ಇಂದಿನಿಂದ 4 ತಿಂಗಳು ಭಗವಂತ ಯೋಗ ನಿದ್ರೆಯಲ್ಲಿರುತ್ತಾನೆ. ಏಕಾದಶಿ ದಿನ ಉಪವಾಸ ಮಾಡಿದರೆ ದೇಹದ ಜತೆಗೆ ಮನಸ್ಸು ಕೂಡ ಶುದ್ಧಿಯಾಗುತ್ತದೆ. ಕಾಮ, ಕ್ರೋಧ ಅಳಿಯುತ್ತದೆ. ದೇವರಲ್ಲಿ ಭಕ್ತಿ ಜಾಗೃತವಾಗುತ್ತದೆ. ಇಂದ್ರಿಯಗಳ ಜತೆಗೆ ಮನಸ್ಸನ್ನು ನಿಗ್ರಹಿಸಿದಾಗ ಶರೀರ ಹಾಗೂ ಜೀವನ ಸಮತೋಲಿತವಾಗುತ್ತದೆ. ಸದ್ಬುದ್ಧಿ, ಸದ್ವಿಚಾರ, ಸತ್ ಚಿಂತನೆಗಳು ಜಾಗೃತವಾಗುತ್ತವೆ. ಇದರಿಂದ ಮನಸ್ಸಿಗೆ ನೆಮ್ಮದಿ ಹಾಗೂ ಯಶಸ್ಸು ದೊರೆಯುತ್ತದೆ ಎಂದರು.
ಕಲಿಯುಗದಲ್ಲಿ ನಾಮಸ್ಮರಣೆ ಅತ್ಯವಶ್ಯ. ಭಗವಂತನ ಸ್ತುತಿ ಮಾಡುವುದರೊಂದಿಗೆ ಆತನ ಸಾಮೀಪ್ಯ ಹೊಂದಬಹುದು ಎಂದ ಶ್ರೀಗಳು, ಪ್ರತಿಯೊಬ್ಬರೂ ಜ್ಞಾನಾರ್ಜನೆಗೆ ಮುಂದಾಗಬೇಕು. ಮಠ, ಮಂದಿರಗಳಲ್ಲಿ ಜ್ಞಾನ ಸತ್ರಗಳು ಹೆಚ್ಚೆಚ್ಚು ನಡೆಯಬೇಕು. ಪಾಠ, ಪ್ರವಚನಗಳು ನಿರಂತರ ನಡೆಯುತ್ತಿರಬೇಕು ಎಂದರು.
ಬಳಿಕ ನೂರಾರು ಭಕ್ತರಿಗೆ ಶ್ರೀಗಳು ತಪ್ತ ಮುದ್ರಾಧಾರಣೆ ನಡೆಸಿಕೊಟ್ಟರು. ನಾನಾ ಭಜನಾ ಮಂಡಳಿಗಳಿಂದ ಅಖಂಡ ಭಜನೆ ಸೇವೆ ನಡೆಯಿತು.
ದಣ ಕನ್ನಡ ದ್ರಾವಿಡ ಬ್ರಾಹ್ಮಣ ಸಭಾ ಪದಾಧಿಕಾರಿಗಳಾದ ಅನಂತರಾಮ ಆಚಾರ್ಯ, ಅನಂತ ಪದ್ಮನಾಭ ತಂತ್ರಿ, ಶ್ರೀನಿವಾಸ ರೆಂಜಾಳ, ಚಂದ್ರಶೇಖರ ಪುರಾಣಿಕ, ಅನಂತ ಉಡುಪಿ, ಪ್ರಶಾಂತ ತಂತ್ರಿ, ಅನಂತಕೃಷ್ಣ ಕಾರಂತ, ಸವೋರ್ತ್ತಮ ಕಾರಂತ, ಎ.ಜಿ.ರಾವ್, ಗುರುರಾಜ ಭಟ್, ಪ್ರಧಾನ ಅರ್ಚಕ ಶ್ರೀನಾಥ ಭಟ್, ನಟರಾಜ ಉಪಾಧ್ಯಾಯ, ಅನಂತ ಉಡುಪಿ, ಇತರರು ಇದ್ದರು.