ಬೆಂಗಳೂರು:ಬಾಕಿ ಕಾಮಗಾರಿ ಬಿಲ್‌ಗಳಿಗೆ ಹಣ ಪಾವತಿ ಸಂಬಂಧಪಟ್ಟಂತೆ ಕೆಲ ಸಚಿವರು ಸ್ಪಂದಿಸಿದ್ದರೆ, ಇನ್ನೂ ಕೆಲ ಸಚಿವರು ಈವರೆಗೆ ನಮ್ಮ ಮನವಿಗೆ ಕ್ಯಾರೆ ಎನ್ನುತ್ತಿಲ್ಲ. ಜೊತೆಗೆ, ಜು.4ರಂದು ಸಿಎಂ ಸಿದ್ದರಾಮಯ್ಯ ಅವರ ಜೊತೆ ನಿಗದಿಯಾಗಿದ್ದ ಸಭೆ ಮುಂದೂಡಲಾಗಿತ್ತು. ಆದರೆ, ಈವರೆಗೆ ಸಿಎಂ ಅವರಿಂದ ಸಭೆಯ ದಿನಾಂಕ ನಿಗಯಾಗಿಲ್ಲ ಎಂದು ರಾಜ್ಯ ಗುತ್ತಿಗೆದಾರರ ಸಂಘ ಅಸಮಾಧಾನ ವ್ಯಕ್ತಪಡಿಸಿದೆ.
ಜಲಸಂಪನ್ಮೂಲ ಸಚಿವರು ಆಗಿರುವ ಡಿಸಿಎಂ ಡಿ.ಕೆ.ಶಿವಕುಮಾರ್, ಸಚಿವರಾದ ಬೋಸರಾಜ್, ಸತೀಶ್ ಜಾರಕಿಹೊಳಿ, ಜಮೀರ್ ಅಹ್ಮದ್ ಸಭೆ ಕರೆದು ಸಮಸ್ಯೆಗಳನ್ನು ಬಗೆಹರಿಸಲು ಆಶ್ವಾಸನೆ ಕೊಟ್ಟರು. ಇದರಲ್ಲಿ ಕೆಲ ಬೇಡಿಕೆಗಳು ಈಡೇರಿವೆ. ಇನ್ನೂ ಹಲವು ಬೇಡಿಕೆಗಳು ಬಗೆಹರಿದಿಲ್ಲ. ಗುತ್ತಿಗೆದಾರರ ಕುಂದುಕೊರತೆಗಳ ಕುರಿತು ಚರ್ಚಿಸಲು ಸಭೆ ಕರೆಯುವಂತೆ ಸಾಕಷ್ಟು ಬಾರಿ ಮನವಿ ಮಾಡಿದ್ದರೂ ಸಚಿವರಾದ ಪ್ರಿಯಾಂಕ್ ಖರ್ಗೆ ಮತ್ತು ಭೈರತಿ ಸುರೇಶ್ ಸ್ಪಂದಿಸುತ್ತಿಲ್ಲ ಎಂದು ಸಂಘದ ಅಧ್ಯಕ್ಷ ಆರ್. ಮಂಜುನಾಥ್, ಬೇಸರ ವ್ಯಕ್ತಪಡಿಸಿದ್ದಾರೆ.
ಜಲಸಂಪನ್ಮೂಲ ಇಲಾಖೆ 12 ಸಾವಿರ ಕೋಟಿ ರೂ.,ಲೋಕೋಪಯೋಗಿ ಇಲಾಖೆ 9 ಸಾವಿರ ಕೋಟಿ ರೂ., ಸಣ್ಣ ನೀರಾವರಿ ಇಲಾಖೆ 3 ಸಾವಿರ ಕೋಟಿ ರೂ., ಆರ್‌ಡಿಪಿಆರ್ 3,800 ಕೋಟಿ ರೂ., ವಸತಿ ಇಲಾಖೆ ಅಧೀನದ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ 900 ಕೋಟಿ ರೂ ಹಾಗೂ ನಗರಾಭಿವೃದ್ಧಿ ಇಲಾಖೆ 700 ಕೋಟಿ ರೂ.ಸೇರಿ ವಿವಿಧ ಇಲಾಖೆಗಳಿಂದ ಒಟ್ಟು 32 ಸಾವಿರ ಕೋಟಿ ರೂ.ವೆಚ್ಚದ ಬಿಲ್‌ಗಳು ಬಾಕಿ ಉಳಿದಿವೆ. 2021-22ನೇ ಸಾಲಿನಿಂದ 2024-25ನೇ ಸಾಲಿನ ಅವಧಿಯ ಬಿಲ್‌ಗಳಿಗೆ ಹಣ ಪಾವತಿಯಾಗುತ್ತಿಲ್ಲ. ಗುತ್ತಿಗೆದಾರರ ಬಾಕಿ ಇರುವ ಬಿಲ್‌ಗಳಿಗೆ ಶೇ.50 ಹಣ ಬಿಡಗಡೆ ಮಾಡುವ ಕುರಿತು ಸರ್ಕಾರ ಆಶ್ವಾಸನೆ ಕೊಟ್ಟರೂ ಕಾರ್ಯರೂಪಕ್ಕೆ ಬಂದಿಲ್ಲ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಜಿ.ಎಂ.ರವೀಂದ್ರ ತಿಳಿಸಿದರು.
7ಕ್ಕೆ ಸತೀಶ್ ಜಾರಕಿಹೊಳಿ ಜೊತೆ ಸಭೆ:
ಈ ಹಿಂದೆ ಸತೀಶ್ ಜಾರಕಿಹೊಳಿ ಜೊತೆ ನಡೆಸಿದ್ದ ಸಭೆಯಲ್ಲಿ ಜ್ಯೇಷ್ಠತಾ ಆದಾರದ ಮೇಲೆ ಬಿಲ್‌ಗಳಿಗೆ ಹಣ ಬಿಡುಗಡೆ ಸೇರಿ ಇತರೆ ಸಮಸ್ಯೆಗಳ ಬಗ್ಗೆ ಮನವಿ ಮಾಡಿಕೊಂಡಿದ್ದೆವು. ಇದಕ್ಕೆ ಸಚಿವರು ಸ್ಪಂದಿಸಿದ್ದರು. ಈ ಹಿನ್ನೆಲೆಯಲ್ಲಿ ಲೋಕೋಪಯೋಗಿ ಇಲಾಖೆಯಲ್ಲಿ ಜ್ಯೇಷ್ಠತಾ ಮೇರೆಗೆ ಬಿಲ್‌ಗಳಿಗೆ ಹಣ ಬಿಡುಗಡೆಯಾಗುತ್ತಿದೆ. ಇದೀಗ ಆ.7ರಂದು ವಿಕಾಸಸೌಧದಲ್ಲಿ ಸತೀಶ್ ಜಾರಕಿಹೊಳಿ, ಸಂಘದ ಪದಾಧಿಕಾರಿಗಳ ಜೊತೆ ಮತ್ತೆ ಸಭೆ ಕರೆದಿದ್ದಾರೆ. ಈ ಸಭೆಯಲ್ಲಿ ಗುತ್ತಿಗೆದಾರರ ಕುಂದುಕೊರತೆಗಳ ಬಗ್ಗೆ ಚರ್ಚಿಸಲಾಗುತ್ತದೆ. ಲೋಕೋಪಯೋಗಿ ಹೊರತುಪಡಿಸಿ ಇತರೆ ಇಲಾಖೆಗಳಲ್ಲಿ ಬಾಕಿ ಉಳಿದಿರುವ ಬಿಲ್‌ಗಳಿಗೆ ಜೇಷ್ಠತೆ ಆಧಾರದಲ್ಲಿ ಹಣ ಬಿಡುಗಡೆಯಾಗುತ್ತಿಲ್ಲ. ಟೆಂಡರ್‌ನಲ್ಲಿ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿನ ಪಾರದರ್ಶಕತೆ (ಕೆಟಿಪಿಪಿ) ಕಾಯ್ದೆ ಪಾಲನೆಯಾಗುತ್ತಿಲ್ಲ ಆರ್. ಮಂಜುನಾಥ್ ಎಂದು ಹೇಳಿದರು.