ನರಗುಂದದ ಶ್ರೀ ಬಸವೇಶ್ವರ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ವಚನಾಮೃತ ಶ್ರಾವಣ ಪ್ರಾರಂಭೋತ್ಸವಕ್ಕೆ ಶಾಂತಲಿಂಗ ಶ್ರೀ ಗಳು ಗುರುವಾರ ಚಾಲನೆ ನೀಡಿದರು 
ಜಿಲ್ಲೆ

ಶ್ರಾವಣ ಉಪವಾಸದಿಂದ ಆಧ್ಯಾತ್ಮಿಕ ಶಿಸ್ತು

ನರಗುಂದ: ಒಳ್ಳೆಯದನ್ನು ಆಲಿಸುವುದೇ ಶ್ರಾವಣ. ಶ್ರಾವಣದಲ್ಲಿನ ಉಪವಾಸವು ಮನಸಿಗೆ ಶಾಂತಿ, ನೆಮ್ಮದಿ ತಂದುಕೊಡುವುದರ ಜತೆಗೆ ಆಧ್ಯಾತ್ಮಿಕ ಶಿಸ್ತು ಕಾಪಾಡಿಕೊಳ್ಳಲು ಹಾಗೂ ಅಂತರಂಗದ ಶುದ್ಧಿ ಮತ್ತು ಸಮೃದ್ಧಿಗೆ ಕಾರಣವಾಗಿದೆ ಎಂದು ಭೈರನಹಟ್ಟಿ ಶಾಂತಲಿಂಗ ಶ್ರೀಗಳು ಹೇಳಿದರು.

ಪಟ್ಟಣದ ಶ್ರೀ ಬಸವೇಶ್ವರ ಸಮುದಾಯ ಭವನದಲ್ಲಿ ಬಸವಕೇಂದ್ರ, ಶ್ರೀ ಮುರುಘರಾಜೇಂದ್ರ ಫ್ರೀ ಬೋರ್ಡಿಂಗ್ ಟ್ರಸ್ಟ್, ಶರಣ ಸಾಹಿತ್ಯ ಪರಿಷತ್ತು ಹಾಗೂ ಕದಳಿ ಮಹಿಳಾ ವೇದಿಕೆ ಸಹಯೋಗದಲ್ಲಿ ಗುರುವಾರ ಹಮ್ಮಿಕೊಂಡಿದ್ದ 2023ನೇ ಸಾಲಿನ ವಚನಾಮೃತ ಶ್ರಾವಣ ಪ್ರಾರಂಭೋತ್ಸವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

12ನೇ ಶತಮಾನದ ಶಿವಶರಣರು ಕನ್ನಡ ಭಾಷೆಯನ್ನು ದೈವ ಭಾಷೆಯನ್ನಾಗಿಸಿದ್ದಾರೆ. ವಿಶ್ವಕ್ಕೆ ಪರಿಮಳ ಪಸರಿಸಿದ್ದಾರೆ. ಆಧ್ಯಾತ್ಮಿಕ ಚಿಂತನೆಗಳಿಂದ ಆರೋಗ್ಯ ಸುಸ್ಥಿತಿಯಲ್ಲಿರುತ್ತದೆ. ಬಸವಾದಿ ಶಿವಶರಣರ ತತ್ವ, ಸಿದ್ಧಾಂತ ಒಳ್ಳೆಯ ಸಂದೇಶಗಳನ್ನು ನಿತ್ಯವೂ ಆಲಿಸಬೇಕು ಎಂದು ತಿಳಿಸಿದರು.
ಪುರಸಭೆ ವಿರೋಧ ಪಕ್ಷದ ಮುಖಂಡ ಅಪ್ಪಣಗೌಡ ನಾಯ್ಕರ ಮಾತನಾಡಿ, ಶರಣರ ಆಚಾರಗಳನ್ನು ಪಾಲಿಸುವುದರ ಬದಲಾಗಿ ಅನೇಕರು ಕ್ಷುಲ್ಲಕ ವಿಚಾರದಲ್ಲಿ ಮಗ್ನರಾಗಿದ್ದಾರೆ. ಜಗಜ್ಯೋತಿ ಬಸವಣ್ಣನವರ ಕಾಯಕವೇ ಕೈಲಾಸವೆಂಬ ಹಿತವಚನದಂತೆ ಶ್ರಾವಣ ಮಾಸದ ಉಪವಾಸ ವ್ರತಾಚರಣೆ ಕೈಗೊಳ್ಳುವುದರ ಮೂಲಕ ಸುಖಕರ ಜೀವನ ಪಾವನ ಮಾಡಿಕೊಳ್ಳಬೇಕು ಎಂದು ತಿಳಿಸಿದರು. ಬಸವ ಕೇಂದ್ರದ ಅಧ್ಯಕ್ಷ ಚನ್ನಬಸಪ್ಪಬ ಕಂಠಿ ಮಾತನಾಡಿ, ಮನಸು ನಿಯಂತ್ರಣದಲ್ಲಿಟ್ಟುಕೊಂಡರೆ ಸರ್ವಸುಖ ಅನುಭವಿಸಬಹುದು ಎಂದರು.

ಶಿಕ್ಷಕ ಪಿ.ವಿ .ಕೆಂ.ಚನಗೌಡ್ರ ಮಾತನಾಡಿ, ವೈದ್ಯ ಲೋಕವನ್ನೇ ಮೀರಿಸುವ ಅತ್ಯಂತ ವಿಸ್ಮಯಕಾರಿ ಆರೋಗ್ಯ ಸಂಪತ್ತು ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿದೆ. ಪ್ರಕೃತಿ ಮಾತೆಯನ್ನು ಪ್ರತಿಯೊಬ್ಬರೂ ಪ್ರೀತಿಸಿ, ಗೌರವಿಸಬೇಕು ಎಂದರು.

5ಜಿ ಯುಗದಲ್ಲಿ ದೇಶದ ಆಚಾರ, ವಿಚಾರ, ಸಂಸ್ಕೃತಿ ಎಲ್ಲವನ್ನು ಮರೆಯುತ್ತಿದ್ದೇವೆ. ಸೌಲಭ್ಯಗಳು ಹೆಚ್ಚಾದಂತೆ ಮಕ್ಕಳು ಪಾಲಕರ ಮಾತು ಕೇಳದಂತಾಗಿದೆ. ಮನೆಯೊಂದು ಮೂರುಬಾಗಿಲುಗಳಾಗಿವೆ. ಶರಣರ ಹಿತ ವಚನಗಳನ್ನು ಆಲಿಸಿ, ಪಾಲಿಸಿದ್ದಾದರೆ ಜೀವನವು ಪಾವನಗೊಳ್ಳುತ್ತದೆ. ವೇದ, ವಚನ, ಮೃತ್ಯುಂಜಯ ಮಂತ್ರದಿಂದ ಒಬ್ಬ ವ್ಯಕ್ತಿಯನ್ನು ಬದುಕಿಸಬಹುದು. ಅಣು ಬಾಂಬ್‌ನಲ್ಲಿರುವ ಶಕ್ತಿಯನ್ನು ನಿಷ್ಕ್ರಿಯಗೊಳಿಸುವ ಶಕ್ತಿ ಗಾಯತ್ರಿ ಮಂತ್ರಕ್ಕಿದೆ ಎಂದು ತಿಳಿಸಿದರು. ಬಸವ ಕೇಂದ್ರದ ವತಿಯಿಂದ ಭೈರನಹಟ್ಟಿ ಶಾಂತಲಿಂಗ ಶ್ರೀ ಗಳು, ಉಪನ್ಯಾಸಕ ಪಿ.ವಿ. ಕೆಂಚನಗೌಡ್ರ ಅವರನ್ನು ಸತ್ಕರಿಸಲಾಯಿತು.

ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ ಲೀಲಕ್ಕ ಹಸಬಿ, ಟಿ.ಆರ್. ಉಳ್ಳಾಗಡ್ಡಿ, ಎಂ.ಎಸ್. ಯಾವಗಲ್‌, ಎಸ್.ವಿ. ಬ್ಯಾಹಟ್ಟಿ, ಸಿ.ಎಚ್. ಕೋರಿ, ಮಂಗಳಾ ಪಾಟೀಲ, ಎಸ್.ಬಿ. ಭಜಂತ್ರಿ, ಬಿ.ಎಚ್. ಕ್ಯಾರಕೊಪ್ಪ, ಎಸ್.ವಿ. ಗೋವೇಶ್ವರ, ಸುಕನ್ಯಾ ಸಾಲಿ, ಬಿ.ಎಸ್. ನಾಶಿಶೆಟ್ರು, ಎಸ್.ಎಚ್.ಪಾಟೀಲ, ಇತರರಿದ್ದರು.