ಜಿಲ್ಲೆ

ಮಾನವ ಕುಲವೇ ತಲೆ ತಗ್ಗಿಸುವ ಕೃತ್ಯ

ಸೋಮನಾಥ ರೆಡ್ಡಿ

ನರಗುಂದ: ಜೈನಮುನಿ ಕಾಮಕುಮಾರ ಮಹಾರಾಜರ ಹತ್ಯೆ ಪ್ರಕರಣ ಇಡೀ ಮಾನವ ಕುಲವೇ ತಲೆ ತಗ್ಗಿಸುವ ಹೇಯ ಕೃತ್ಯ. ಇಂತಹ ಕ್ರೂರ ಕೃತ್ಯ ಎಸಗಿರುವವರಿಗೆ ಕಠಿಣ ಶಿಕ್ಷೆ ನೀಡಬೇಕು ಎಂದು ಭೈರನಹಟ್ಟಿ ದೊರೆಸ್ವಾಮಿ ವಿರಕ್ತಮಠದ ಶಾಂತಲಿಂಗ ಶ್ರೀಗಳು ಒತ್ತಾಯಿಸಿದರು.

ಜೈನ ಮುನಿಗಳು ಈ ದೇಶಕ್ಕೆ ಶಾಂತಿಯ ಸಂದೇಶ ಸಾರಿದ್ದಾರೆ. ಇಂತಹ ಶಾಂತಿಧೂತರನ್ನು ಹತ್ಯೆಗೈದಿರುವುದು ಖಂಡನೀಯ. ಈ ದೇಶಕ್ಕೆ ಮಠ-ಮಾನ್ಯಗಳು, ಜೈನ ಮುನಿಗಳು ಹಾಗೂ ಅನೇಕ ಮಹಾತ್ಮರು ಅಹಿಂಸಾ ಸಂದೇಶವನ್ನು ಸಾರಿ ವಿಶ್ವವು ಶಾಂತಿಯುತವಾಗಿ ಬೆಳೆಯುವಂತೆ ಮಾಡಿದ್ದಾರೆ.

ಇಂತಹ ಶಾಂತಿಧೂತರ ನಾಡಿನಲ್ಲಿ ಹಿಂಸಾತ್ಮಕ ಕೃತ್ಯ ನಡೆದಿರುವುದು ದುರ್ದೈವದ ಸಂಗತಿ. ದಯವೇ ಧರ್ಮದ ಮೂಲವಯ್ಯ, ಅಹಿಂಸಾ ಪರಮೋ ಧರ್ಮ ಎಂಬ ಪರಿಕಲ್ಪನೆಯನ್ನು ಬಿತ್ತಿರುವ ಕರುನಾಡಿನಲ್ಲಿ ಧರ್ಮ ರಕ್ಷಕರನ್ನು ಹತ್ಯೆಗೈದಿದ್ದು ಧರ್ಮ ವಿನಾಶದ ಮುನ್ಸೂಚನೆ ತೋರಿಸುತ್ತದೆ.

ಇಂತಹ ದುಷ್ಕೃತ್ಯಗಳು ಮುಂದುವರಿಯದಂತೆ ಸರ್ಕಾರ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಭವಿಷ್ಯದಲ್ಲಿಯೂ ಇಂತಹ ದುರ್ಘಟನೆಗಳು ಮತ್ತೆ ಮರುಕಳಿಸದಂತೆ ಎಚ್ಚರವಹಿಸಬೇಕು ಎಂದು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.