ಜಿಲ್ಲೆ

ಭಾಗ್ಯನಗರದ ಭಾಗ್ಯವಂತರಾರು ?

ಕೊಪ್ಪಳ: ನಗರಕ್ಕೆ ಹೊಂದಿಕೊಂಡಿದ್ದರೂ ರಾಜಕೀಯದಲ್ಲಿ ತನ್ನದೇ ಹಿಡಿತ ಹೊಂದಿರುವ ಭಾಗ್ಯನಗರ ಪಟ್ಟಣ ಪಂಚಾಯಿತಿಯಲ್ಲಿ ಅಧಿಕಾರ ನಡೆಸುವ ಭಾಗ್ಯವಂತರಾರು ಎಂಬ ಕುತೂಹಲ ಮೂಡಿದೆ.

ಕ್ಷೇತ್ರದಲ್ಲಿ ಮೂರು ಅವಧಿಗೆ ಕಾಂಗ್ರೆಸ್​ ಶಾಸಕರಿದ್ದು, ಈ ಅವಧಿಗೆ ಸಂಸದ ಸ್ಥಾನವೂ ಕಾಂಗ್ರೆಸ್​ ಪಾಲಾಗಿದೆ. ಆದರೆ, ಭಾಗ್ಯನಗರದಲ್ಲಿ ಯಾವಾಗಲೂ ಬಿಜೆಪಿ ಪರ ಅಲೆಯಿದೆ. 2021ರ ಚುನಾವಣೆಯಲ್ಲೂ ಕಾಂಗ್ರೆಸ್​&ಬಿಜೆಪಿ ನಡುವೆ ತೀವ್ರ ಪೈಪೋಟಿ ಇದ್ದರೂ ಪ್ರಚಾರ ಹಾಗೂ ರಾಜಕೀಯ ತಂತ್ರಗಾರಿಕೆಯಲ್ಲಿ ಕಾಂಗ್ರೆಸ್​ ಮೇಲು ಗೈ ಸಾಧಿಸಿತ್ತು. ಆದರೂ, ಲಿತಾಂಶ ಮಾತ್ರ ಬಿಜೆಪಿಗೆ ಹೆಚ್ಚು ಸ್ಥಾನ ತಂದುಕೊಡುವ ಮೂಲಕ ಶಾಕ್​ ನೀಡಿತ್ತು.

ಅಧ್ಯಕ್ಷ ಸ್ಥಾನ ಹಿಂದುಳಿದ ವರ್ಗ (ಅ) ಮತ್ತು ಉಪಾಧ್ಯಕ್ಷ ಸ್ಥಾಮ ಸಾಮಾನ್ಯ ಮಹಿಳೆಗೆ ಮೀಸಲಾಗಿದೆ. 19 ಸದಸ್ಯ ಬಲದ ಪಪಂನಲ್ಲಿ 8 ಕಾಂಗ್ರೆಸ್​, 9 ಬಿಜೆಪಿ ಹಾಗೂ ಇಬ್ಬರು ಪಕ್ಷೇತರ ಸದಸ್ಯರಿದ್ದಾರೆ. ಪಕ್ಷೇತರರ ಪೈಕಿ ತಲಾ ಒಬ್ಬೊಬ್ಬರು ಒಂದೊಂದು ಪಕ್ಷದಲ್ಲಿ ಗುರುತಿಸಿಕೊಂಡಿದ್ದಾರೆ. ಅದೃಷ್ಟ ಸಂಖ್ಯೆ 10 ಆಗಿದ್ದರೂ ಕಾಂಗ್ರೆಸ್​ಗೆ ಓರ್ವ ಪಕ್ಷೇತರ ಹಾಗೂ ಶಾಸಕ, ಸಂಸದರ ಮತಗಳ ಬೆಂಬಲವಿದ್ದು, 11 ಮತಗಳು ಸಿಗಲಿವೆ. ಸಜಹವಾಗಿಯೇ ಕಾಂಗ್ರೆಸ್​ ಅಧಿಕಾರ ಗದ್ದುಗೆ ಏರಬಹುದೆಂಬ ಲೆಕ್ಕಾಚಾರಗಳಿವೆ. ಅಧ್ಯಕ್ಷ ಹುದ್ದೆಗೆ ಬಹುತೇಕ ಕೈ ಸದಸ್ಯರು ಪೈಪೋಟಿ ನಡೆಸುವ ಸಾಧ್ಯತೆಯಿದೆ. ಅಂತಿಮವಾಗಿ ಯಾರು ಅಧಿಕಾರ ಚಿಕ್ಕಾಣಿ ಹಿಡಿವರೆಂಬ ಕೌತುಕ ಪಟ್ಟಣದ ಜನರಲ್ಲಿ ಮೂಡಿದೆ.