ವಿಜಯಪುರ: ಭಗೀರಥರು ತಮ್ಮ ಕಠಿಣ ತಪಸ್ಸಿನ ಮೂಲಕ ಗಂಗೆಯನ್ನು ಧರೆಗೆ ಇಳಿಸಿದರು. ಅವರ ಕುಗ್ಗದ ಛಲ ಹಾಗೂ ದೃಢಸಂಕಲ್ಪದ ಮೂಲಕ ಕಠಿಣ ಕಾರ್ಯ, ಸಹನೆ, ದೃಢ ನಿಶ್ಚಯದಂತಹ ಅವರ ಜೀವನಾದರ್ಶದ ವಿಚಾರಗಳು ಮಾನವ ಜನಾಂಗಕ್ಕೆ ಪ್ರೇರಣಾದಾಯಕ ಎಂದು ಉಪವಿಭಾಗಾಧಿಕಾರಿ ಗುರುನಾಥ ದಡ್ಡೆ ಹೇಳಿದರು.
ಜಿಲ್ಲಾಡಳಿತ, ಜಿಪಂ ಹಾಗೂ ಕನ್ನಡ ಮತ್ತು ಸಂಸತಿ ಇಲಾಖೆ ಸಂಯುಕ್ತಾಶ್ರಯದಲ್ಲಿ ನಗರದ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಶ್ರೀ ಭಗೀರಥ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಗುರಿ ಸಾಧನೆಯಲ್ಲಿ ಬರುವ ಅಡೆತಡೆಗಳಿಗೆ ಹಿಂಜರಿಯದೆ, ದೃಢ ನಿಶ್ಚಯದ ಮೂಲಕ ಕಠಿಣ ಪರಿಶ್ರಮ ಹಾಗೂ ಶ್ರದ್ಧೆಯಿಂದ ಗುರಿ ಸಾಧಿಸಬಹುದು ಎಂಬ ಭಗೀರಥರ ಜೀವನದ ತತ್ವಾದರ್ಶ, ಅವರ ಜೀವನ ಚರಿತ್ರೆಯನ್ನು ಯುವಜನತೆ ಅರ್ಥೈಸಿಕೊಳ್ಳಬೇಕು. ಸತ್ಪುರುಷರು, ದಾರ್ಶನಿಕರು ನಡೆದು ಬಂದ ದಾರಿ, ಅವರು ಜನಾಂಗಕ್ಕೆ ನೀಡಿದ ಸಂದೇಶ, ಅವರ ವಿಚಾರಧಾರೆ ಮೈಗೂಡಿಸಿಕೊಳ್ಳುವ ಮೂಲಕ ನಮ್ಮ ಜೀವನ ಸುಂದರವಾಗಿಸಿಕೊಳ್ಳೋಣ ಎಂದು ಸಲಹೆ ನೀಡಿದರು.
ಉಪನ್ಯಾಸ ನೀಡಿದ ಸರಸ್ವತಿ ಚಿಮ್ಮಲಗಿ, ಭಗೀರಥರು ಕಠಿಣ ತಪಸ್ಸಿನ ಮೂಲಕ ಗಂಗಾ ಮಾತೆಯನ್ನು ಧರೆಗಿಳಿಸಿದವರು. ದೃಢ ಸಂಕಲ್ಪದಿಂದ ಎಂತಹ ಅಸಾಧ್ಯವಾದದ್ದನ್ನು ಕೂಡ ಸಾಧ್ಯವಾಗಿಸಬಹುದೆಂಬ ಸಂದೇಶ ಭಗೀರಥರು ಜಗತ್ತಿಗೆ ನೀಡಿದ್ದಾರೆ. ಭಗೀರಥರ ಜೀವನ ಗಾಥೆ ಅತ್ಯಂತ ಸ್ಫೂರ್ತಿದಾಯಕ ಎಂದರು.
ಜಗದ್ಗುರು ಶಿವಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು. ಜಿಪಂ. ಸಹಾಯಕ ಕಾರ್ಯದರ್ಶಿ ಅನಸೂಯಾ ಚಲವಾದಿ, ಪಾಲಿಕೆಯ ವಲಯ ಆಯುಕ್ತ ಮಹಾವೀರ ಬೋರಣ್ಣವರ, ಕನ್ನಡ ಮತ್ತು ಸಂಸತಿ ಇಲಾಖೆ ಸಹಾಯಕ ನಿರ್ದೇಶಕ ಸಂತೋಷ ಭೋವಿ ಮತ್ತಿತರರಿದ್ದರು.
ಅದಕ್ಕೂ ಮುನ್ನ ನಗರದ ಸಿದ್ಧೇಶ್ವರ ದೇವಸ್ಥಾನದ ಬಳಿ ಭಗೀರಥರ ಭಾವಚಿತ್ರದ ಮೆರವಣಿಗೆಗೆ ಉಪ ವಿಭಾಗಾಧಿಕಾರಿ ಗುರುನಾಥ ದಡ್ಡೆ ಚಾಲನೆ ನೀಡಿದರು. ವಿವಿಧ ಜಾನಪದ ಕಲಾತಂಡದೊಂದಿಗೆ ಆರಂಭಗೊಂಡ ಮೆರವಣಿಗೆ ನಗರದ ಗಾಂಧಿ ವೃತ್ತ, ಬಸವೇಶ್ವರ ವೃತ್ತ, ಡಾ. ಬಿ.ಆರ್. ಅಂಬೇಡ್ಕರ್ ವೃತ್ತದ ಮೂಲಕ ಸಾಗಿ ರಂಗಮಂದಿರದಲ್ಲಿ ಸಮಾವೇಶಗೊಂಡಿತು.