ವಿಜಯವಾಣಿ ಸುದ್ದಿಜಾಲ ಕಡಬ
ಸಮಾಜದಲ್ಲಿ ಅಶಾಂತಿ ನಿರ್ಮಾಣ ಮಾಡುವ ಉದ್ದೇಶದಿಂದಲೇ ಯಾವುದೇ ಅನುಮತಿ ಪಡೆಯದೆ ರಸ್ತೆಯಲ್ಲಿ ನಮಾಜ್ ಮಾಡಿದ್ದಾರೆ, ಇವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸುಳ್ಯ ಶಾಸಕಿ ಬಾಗೀರಥಿ ಮುರುಳ್ಯ ಹೇಳಿದರು.
ಸೋಮವಾರ ಕಡಬದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಯಾವುದೇ ಅನುಮತಿ ಪಡೆಯದೆ ರಸ್ತೆಯಲ್ಲಿಯೇ ನಮಾಜ್ ಮಾಡಿ ರಸ್ತೆ ಬಂದ್ ಮಾಡಿದ್ದಾರೆ. ಈ ಬಗ್ಗೆ ಪೊಲೀಸರು ಸುಮೋಟೊ ಕೇಸು ದಾಖಲಿಸಿಕೊಂಡಿದ್ದರೂ ಅದನ್ನು ಹಿಂತೆಗೆಯುವ ಹುನ್ನಾರ ನಡೆದು ಕೇಸು ದಾಖಲಿಸಿದ ಠಾಣಾಧಿಕಾರಿಯನ್ನು ರಜೆಯ ಮೇಲೆ ಕಳಿಸುವ ಈ ಸರ್ಕಾರದ ಬಗ್ಗೆ ಏನು ಹೇಳಬೇಕು? ಯಾರನ್ನೂ ಬೇಕಾದರೂ ಓಲೈಕೆ ಮಾಡಲಿ, ಆದರೆ ಬಹುಸಂಖ್ಯಾತ ಹಿಂದುಗಳಿಗೆ ರಕ್ಷಣೆ ನೀಡದ ಸರ್ಕಾರದ ನಡೆಯನ್ನು ನಾವು ಖಂಡಿಸುತ್ತೇವೆ ಎಂದ ಶಾಸಕಿ, ರಸ್ತೆಯಲ್ಲಿ ನಮಾಜ್ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಲು ಆಗ್ರಹಿಸಿದ ಹಿಂದು ಸಂಘಟನೆಯ ಮುಖಂಡರ ವಿರುದ್ಧ ಕೇಸು ದಾಖಲಿಸಿದ ಸರ್ಕಾರದ ಕ್ರಮವನ್ನು ಖಂಡಿಸಿದರು.
ಮಾಜಿ ಜಿ.ಪಂ.ಸದಸ್ಯ ಕೃಷ್ಣ ಶೆಟ್ಟಿ ಕಡಬ ಮಾತನಾಡಿ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ರಾಕೇಶ್ ರೈ ಕೆಡೆಂಜಿ ಮಾತನಾಡಿದರು. ತಾ.ಪಂ.ಮಾಜಿ ಅಧ್ಯಕ್ಷೆ ಪುಲಸ್ತ್ಯ ರೈ, ಮಾಜಿ ತಾ.ಪಂ.ಉಪಾಧ್ಯಕ್ಷೆ ಜಯಂತಿ ಆರ್.ಗೌಡ, ಸುಳ್ಯ ಮಂಡಲ ಪ್ರಧಾನ ಕಾರ್ಯದರ್ಶಿ ಪ್ರದೀಪ್ ರೈ ಮನವಳಿಕೆ, ಕೊಯಿಲ ಗ್ರಾ.ಪಂ.ಅಧ್ಯಕ್ಷೆ ಪುಷ್ಪಾಸುಭಾಶ್ ಶೆಟ್ಟಿ ಉಪಸ್ಥಿತರಿದ್ದರು.
ಆಡಳಿತ ವ್ಯವಸ್ಥೆಯೇ ನಗೆಪಾಟಲಿಗೆ ಈಡಾಗಿದೆ, ಭ್ರಷ್ಟಾಚಾರ ಮಾಡಿ ಕರ್ನಾಟಕದ ಮಾನ ಹರಾಜು ಹಾಕಿದ್ದಾರೆ. ಭಾಗ್ಯಗಳಿಗೆ ಹಣ ಹೊಂದಿಸಲು ಎಸ್.ಸಿ, ಎಸ್.ಟಿ. ನಿಗಮದ ಹಣವನ್ನೆ ಬಳಕೆ ಮಾಡಿದ್ದಾರೆ, ವಾಲ್ಮೀಕಿ ನಿಗಮದಲ್ಲಿ ಭ್ರಷ್ಟಚಾರ ನಡೆದರೂ ಸಚಿವರ ರಾಜಿನಾಮೆ ಪಡೆದುಕೊಳ್ಳಲು ಇದುವರೆಗೆ ಸಾಧ್ಯವಾಗದ ದುರ್ಬಲ ಮುಖ್ಯಮಂತ್ರಿ, ರಸ್ತೆಯಲ್ಲಿ ನಮಾಜ್ ಮಾಡಿರುವವರ ಪರ, ಅದನ್ನು ವಿರೋಧಿಸುವವರ ವಿರುದ್ಧ ಕೇಸು ದಾಖಲಿಸುವ ಕೆಲಸ ಮಾಡುತ್ತಿರುವ ಈ ಕಾಂಗ್ರೆಸ್ ಸರ್ಕಾರದ ಇಬ್ಬಗೆ ನೀತಿಯನ್ನು ಖಂಡಿಸುತ್ತೇವೆ.- ರಾಕೇಶ್ ರೈ ಕೆಡೆಂಜಿ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ