ಜಿಲ್ಲೆ

ಭಗೀರಥ ಜನರು ಕೊಟ್ಟ ಬಿರುದು

ಗಂಗಾಧರ ಬಿ ವಿ

ಎನ್​ಡಿಎ ಮೈತ್ರಿಯ ಬಿಜೆಪಿ ಟಿಕೆಟ್​ಗಾಗಿ ಕೊನೇ ಕ್ಷಣದವರೆಗೂ ಕಾದು, ಕಾಂಗ್ರೆಸ್​ಗೆ ಜಿಗಿದ ಸಿ.ಪಿ.ಯೋಗೇಶ್ವರ್​ ಚನ್ನಪಟ್ಟಣ ಉಪಚುನಾವಣಾ ಕಣದಲ್ಲಿದ್ದಾರೆ. ಕ್ಷೇತ್ರದ ಅಭಿವೃದ್ಧಿಗಾಗಿ ಪಾಂತರ ಮಾಡುತ್ತೇನೆ ಎಂದು ನಿರ್ಧಾರವನ್ನು ಸಮರ್ಥಿಸಿಕೊಳ್ಳುವ ಅವರು, ತಾನೇಕೇ ಪಾಂತರ ಮಾಡಿದೆ, ನೀರಾವರಿ ಯೋಜನೆಗಳ ಬಗೆಗಿನ ಅಭಿಪ್ರಾಯವನ್ನು "ವಿಜಯವಾಣಿ' ಜಿಲ್ಲಾ ವರದಿಗಾರ "ಗಂಗಾಧರ್​ ಬೈರಾಪಟ್ಟಣ' ಜತೆಗಿನ ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ.

ಟಿಕೆಟ್​ ಕೊಡುತ್ತಿದ್ದೋ, ಅವರೇ ಕಾಂಗ್ರೆಸ್​ಗೆ ಸೇರಿದ್ರು ಎಂದು ಎಚ್ಡಿಕೆ ಆರೋಪ ಮಾಡ್ತಾರಲ್ಲಾ?

* ನಾನು ಪ್ರಬಲ ಆಕಾಂಕ್ಷಿ ಆಗಿದ್ದೆ. ಬಿಜೆಪಿ ಟಿಕೆಟ್​ ಬೇಕಿತ್ತು. ಆದರೆ, ಅವರು ಕೊಡುವ ಮನಸ್ಸು ಮಾಡಲಿಲ್ಲ. ಕೊನೇ ಕ್ಷಣದವರೆಗೂ ಕಾದೆ. ನಿಜವಾಗಲೂ ನನ್ನ ಸ್ಪರ್ಧೆಗೆ ಸಹಮತವಿದ್ದರೆ ಬಿಜೆಪಿ ನನ್ನ ಹೆಸರು ಘೋಷಣೆ ಮಾಡಬೇಕಿತ್ತು. ಆದರೆ, ಕುಮಾರಸ್ವಾಮಿ ಅವರೊಟ್ಟಿಗೆ ಸೇರಿ ನನ್ನ ಹೆಸರು ಮುಂದಿಟ್ಟುಕೊಂಡು ನನ್ನನ್ನು ಕಣದಲ್ಲಿ ಇಲ್ಲದಂತೆ ಮಾಡುವ ಯತ್ನ ನಡೆದಿತ್ತು. ಟಿಕೆಟ್​ ವಿಚಾರದಲ್ಲಿ ಆರಂಭದಿಂದಲೂ ಭರವಸೆ ಹುಟ್ಟಿಸುತ್ತಲೇ ಬಂದ ಕುಮಾರಸ್ವಾಮಿ, ನನ್ನನ್ನು ಅತಂತ್ರ ಮಾಡಲು ಬಲೆ ಹೆಣೆದಿದ್ದರು. ಅದಕ್ಕಾಗಿಯೇ ಕೊನೆಯವರೆಗೆ ಟಿಕೆಟ್​ ವಿಷಯವನ್ನು ಎಳೆದಾಡಿದರು. ಅವರೇ ಆ ಬಲೆಯಲ್ಲಿ ಸಿಲುಕಿದರು. ನನ್ನ ರಾಜಕೀಯ ಬದುಕಿನ ದೃಷ್ಟಿಯಿಂದ ಅತಂತ್ರವಾಗಬಾರದೆಂದು ಪಕ್ಷಾಂತರ ಮಾಡಿದೆ.

ಟಿಕೆಟ್​ ನೀಡುವ ಜೆಡಿಎಸ್​ ಆಹ್ವಾನ ತಿರಸ್ಕರಿಸಿದ್ದೇಕೆ?

* ಚನ್ನಪಟ್ಟಣದಲ್ಲಿ ನಾನು ಮಾಡಿರುವ ಚುನಾವಣೆ ಎಲ್ಲವೂ ಜೆಡಿಎಸ್​ ವಿರುದ್ಧವೇ. ನನ್ನ ಬೆಂಬಲಿಗರು ಕಾರ್ಯಕರ್ತರೂ ಈ ಚಿಹ್ನೆಗೆ ವಿರುದ್ಧವಾಗಿಯೇ ಹೋರಾಟ ಮಾಡಿಕೊಂಡು ಬಂದಿದ್ದಾರೆ. ಜೆಡಿಎಸ್​ನಿಂದ ನಾನು ಸ್ಪರ್ಧೆ ಮಾಡುವುದಕ್ಕೆ ಆತ್ಮ ಸಾಕ್ಷಿ ಒಪ್ಪಲಿಲ್ಲ.

ನಿಮ್ಮ ರಾಜಕೀಯ ಶತ್ರು ಡಿ.ಕೆ. ಶಿವಕುಮಾರ್​ ಇರುವ ಕಾಂಗ್ರೆಸ್​ಗೆ ಹೋಗಿದ್ದೇಕೆ?

* ನಾನು ಇಷ್ಟು ವರ್ಷದ ರಾಜಕಾರಣದಲ್ಲಿ ನಡೆದಿರುವ ಪಾಕ್ಷಾಂತರವೆಲ್ಲ, ಕ್ಷೇತ್ರದ ಅಭಿವೃದ್ಧಿ ದೃಷ್ಟಿಯಿಂದಲೇ ಹೊರತು, ವೈಯಕ್ತಿಕ ಹಿತಾಸಕ್ತಿಗಾಗಿ ಅಲ್ಲ. ನನ್ನ ಕ್ಷೇತ್ರದ ಜನರ ಒಳಿತಿಗಾಗಿ, ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ. ಡಿ.ಕೆ. ಶಿವಕುಮಾರ್​ ಉಪ ಮುಖ್ಯಮಂತ್ರಿಯಾಗಿದ್ದು, ಅಭಿವೃದ್ಧಿ ಬದ್ಧತೆ ಅವರಿಗಿದೆ. ಅಂತಿಮವಾಗಿ ಕಾಂಗ್ರೆಸ್​ಗೆ ಹೋಗಲು ಕಾರಣ ಕ್ಷೇತ್ರದ ಅಭಿವೃದ್ಧಿ ಹಾಗೂ ನೀರಾವರಿಗೆ ಅಂತಿಮ ರೂಪ ನೀಡುವುದೇ ಆಗಿದೆ.

ಈ ಚುನಾವಣೆಗೆ ನಿಮ್ಮ ರಾಜಕೀಯ ಬದುಕಿಗೆ ಎಷ್ಟು ಮಹತ್ವದ್ದಾಗಿದೆ?

*ಪ್ರತಿ ಚುನಾವಣೆಯೂ ಮಹತ್ವದ್ದಾಗಿಯೇ ಇರುತ್ತದೆ. ಈ ಚುನಾವಣೆಯೂ ಅಷ್ಟೇ ಮಹತ್ವದ್ದಾಗಿದೆ. ಹಾಗೆಂದು ಇದು ನನ್ನ ರಾಜಕೀಯ ಜೀವನದ ಅಳಿವು ಉಳಿವನ್ನು ನಿರ್ಧಾರ ಮಾಡುವುದಿಲ್ಲ. ಅದನ್ನು ಮೀರಿಯೂ ಅನೇಕ ಅವಕಾಶಗಳಿರುತ್ತವೆ. ನಾನೆಂದೂ ಕ್ಷೇತ್ರ ಬಿಟ್ಟು ರಾಜಕೀಯ ಮಾಡಿದವನಲ್ಲ. ಜೆಡಿಎಸ್​ ಜತೆ ಕೈ ಜೋಡಿಸಿದ ಬಳಿಕ ಕ್ಷೇತ್ರದಲ್ಲಿ ಎದುರಾದ ಉಪ ಚುನಾವಣೆಯ ರಾಜಕೀಯ ಸ್ಥಿತಿ ನನಗೆ ಪೂರಕವಾಗಿದ್ದರಿಂದ ಸ್ಪರ್ಧೆಗೆ ಮನಸ್ಸು ಮಾಡಿದೆ. ಆದರೆ, ನನ್ನನ್ನು ತುಳಿಯಲು ಯತ್ನಿಸಿದಾಗ ಸೆಟೆದು ನಿಲ್ಲಲೇಬೇಕಾಯಿತು.

* ಕಾಂಗ್ರೆಸ್​ ಸೇರ್ಪಡೆ ಮೊದಲೇ ನಿರ್ಧಾರವಾಗಿತ್ತಂತೆ?

ನನ್ನ ರಾಜಕೀಯ ಜೀವನವನ್ನು ಬಿಜೆಪಿಯಲ್ಲಿ ಕಳೆಯುವ ನಿರ್ಧಾರ ಮಾಡಿದ್ದೆ. ಈ ಚುನಾವಣೆಯಲ್ಲಿ ನನಗೆ ಟಿಕೆಟ್​ ಸಿಗುತ್ತದೆ ಎನ್ನುವ ಕಾರಣ ಕೊನೇ ಕ್ಷಣದವರೆಗೂ ಕಾದೆ. ಕುಮಾರಸ್ವಾಮಿ ಕ್ಷೇತ್ರ ಬಿಟ್ಟುಕೊಡುವುದಿಲ್ಲ ಎಂಬ ಮಾಹಿತಿ ಸ್ಪಷ್ಟವಾದ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಈ ನಿರ್ಧಾರ ಕೈಗೊಂಡಿದ್ದೇನೆ. ಈ ಮೊದಲೇ ನಾನು ಕಾಂಗ್ರೆಸ್​ಗೆ ಹೋಗುವ ನಿರ್ಧಾರ ಮಾಡಿರಲಿಲ್ಲ.

ಜಂಪಿಂಗ್​ ಸ್ಟಾರ್​ ಎಂದು ನಿಮ್ಮ ವಿರೋಧಿಗಳು ಕರೆಯುತ್ತಾರಲ್ಲಾ?

* ಯಾವುದೇ ರಾಜಕಾರಣಿಗೂ ಪಕ್ಪಾಂತರ ಅಷ್ಟು ಸುಲಭಕ್ಕೆ ಅರಗಿಸಿಕೊಳ್ಳಲು ಸಾಧ್ಯವಾಗಿಲ್ಲ. ಪ್ರತಿ ಬಾರಿ ನಾನು ಪಕ್ಷಾಂತರ ಮಾಡಿದಾಗಲೂ ಜನತೆ ನನ್ನ ಕೈ ಹಿಡಿದು ಆಶೀರ್ವಾದ ಮಾಡಿದ್ದಾರೆ. ಕಾರಣ ಪಕ್ಷಾಂತರ ಉದ್ದೇಶ ಸ್ಪಷ್ಟವಾಗಿದ್ದರಿಂದ. ಎದುರಾಳಿಗಳು ಮಾತನಾಡುವುದು ಸಾಮಾನ್ಯ, ಆದರೆ, ಅವರ ಅಪಪ್ರಚಾರ ಎಂದೂ ಫಲಿಸುವುದಿಲ್ಲ.

ನೀವು ಸ್ವಯಂ ಘೋಷಿತ ಭಗೀರಥ ಎನ್ನುತ್ತಾರಲ್ಲ ದೇವೇಗೌಡರು?

* ಭಗೀರಥ ಎನ್ನುವ ಬಿರುದು ನನ್ನದಲ್ಲ, ನನ್ನ ಕ್ಷೇತ್ರದ ಜನತೆ ನೀಡಿರುವುದು. ಅವರ ಕಷ್ಟ ನೀಗಿಸಿದ್ದಕ್ಕೆ ಪ್ರೀತಿಯಿಂದ ನೀಡಿರುವುದು. ಚನ್ನಪಟ್ಟಣ ನೀರಾವರಿಗೂ ದೇವೇಗೌಡರಿಗೂ ಸಂಬಂಧ ಇಲ್ಲ. ಪ್ರಧಾನಿಯಾದರು ಎನ್ನುವ ಅಭಿಮಾನದಿಂದ ಆಗ ಶಾಸಕರಾಗಿದ್ದ ವರದೇಗೌಡರು ದೇವೇಗೌಡರನ್ನು ಕರೆಸಿ ಅವರ ಹೆಸರನ್ನೇ ಬ್ಯಾರೇಜ್​ಗೆ ಇಟ್ಟರು. ಜನಸಂಪರ್ಕಕ್ಕೆ ಅಗತ್ಯವಿದ್ದ ಕಾರಣ ಅಂದಿನ ಸರ್ಕಾರ ಇಗ್ಗಲೂರಿನಲ್ಲಿ ಬ್ಯಾರೇಜ್​ ಕಟ್ಟುತ್ತದೆ. ಇದರಲ್ಲಿ ದೇವೇಗೌಡರ ಪಾತ್ರವಿಲ್ಲ. ಈ ಕುರಿತು ನನ್ನಲ್ಲಿ ದಾಖಲೆಗಳಿವೆ. ಬ್ಯಾರೇಜ್​ ಕಟ್ಟಿದಾಗ ಅಲ್ಲಿಂದ ನೀರು ತಂದು ನೀರಾವರಿ ಮಾಡಬಹುದೆಂಬ ಕಲ್ಪನೆ ಯಾರಿಗೂ ಇರಲಿಲ್ಲ. ದೇವೇಗೌಡರಿಗೆ ಅಂತಹ ಇಚ್ಛಾಶಕ್ತಿ ಇದ್ದಿದ್ದರೆ ಚನ್ನಪಟ್ಟಣ ಸೇರಿ ರಾಮನಗರ ಜಿಲ್ಲೆಗೆ ನೀರಾವರಿ ಮಾಡಬಹುದಿತ್ತಲ್ಲವೆ? ಎರಡು ಬಾರಿ ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿ ಅವರೇಕೆ ಮಾಡಲಿಲ್ಲ? ಕುಮಾರಸ್ವಾಮಿ ಕ್ಷೇತ್ರಕ್ಕೆ ಬರುವುದಕ್ಕೆ ಮುಂಚೆಯೇ ಕೆರೆಗಳು ತುಂಬಿದ್ದವು. ಯಶಸ್ಸಿಗೆ ನಾನೇ ವಾರಸುದಾರ ಎಂದು ಹಲವರು ಬರುತ್ತಾರೆ. ಸೋತಾಗ ಯಾರೂ ಬರುವುದಿಲ್ಲ.

ಕ್ಷೇತ್ರದಲ್ಲಿ ನೀವೇನೂ ಅಭಿವೃದ್ಧಿ ಮಾಡಿಲ್ಲ ಅಂತಾ ಎಚ್ಡಿಕೆ ಹೇಳುತ್ತಿದ್ದಾರೆ?

* ಕ್ಷೇತ್ರದ ಬಗ್ಗೆ ಕುಮಾರಸ್ವಾಮಿ ಅವರ ಬಗ್ಗೆ ಎಷ್ಟು ನಿರ್ಲಕ್ಷ್ಯವಿತ್ತು  ಎನ್ನುವುದು ತಾಲೂಕನ್ನು ಗಮನಿಸಿದರೆ ಎಲ್ಲರಿಗೂ ತಿಳಿಯುತ್ತದೆ. ಕುಮಾರಸ್ವಾಮಿ ಅವರು ನಮ್ಮ ಕ್ಷೇತ್ರದ ಅಸಮರ್ಥ ಶಾಸಕ. ಅವರೇನು ಬಹುಮತದ ಜನಾಭಿಪ್ರಾಯ ಪಡೆದು ಮುಖ್ಯಮಂತ್ರಿ ಆದವರಲ್ಲ. ರಾಜಕೀಯ ಹೊಂದಾಣಿಕೆಯ ಲಾಭ ಪಡೆದು ಎರಡು ಬಾರಿ ಮುಖ್ಯಮಂತ್ರಿ ಆದವರು. ಮುಖ್ಯಮಂತ್ರಿಯಾಗಿ ಚನ್ನಪಟ್ಟಣವನ್ನು ಅಭಿವೃದ್ಧಿಯಲ್ಲಿ ಎಲ್ಲಿಗೋ ಕೊಂಡೊಯ್ಯಬಹುದಾಗಿತ್ತು.

ಕ್ಷೇತ್ರದ ಬಗೆಗಿನ ನಿಮ್ಮ ಕನಸೇನು?

*ಕುಮಾರಸ್ವಾಮಿ ಅವರು ಕ್ಷೇತ್ರದಲ್ಲಿ ಶಾಸಕರಾದ ದಿನದಿಂದಲೂ ಅಭಿವೃದ್ಧಿ ಕಾರ್ಯ ಪೂರ್ಣವಾಗಿ ಸ್ಥಗಿತಗೊಂಡಿದೆ. ಇದನ್ನು ಸರಿಪಡಿಸಲು ಕನಿಷ್ಠ 2-3 ವರ್ಷಗಳು ಬೇಕು. ಈಗಾಗಲೇ ಸಾಕಷ್ಟು ನೀರಾವರಿ ಮಾಡಲಾಗಿದ್ದು, ಬಾಕಿ ಇರುವ ಯೋಜನೆಗಳನ್ನು ಕಾರ್ಯಗತಗೊಳಿಸುವುದು. ನಮ್ಮದೇ ಸರ್ಕಾರ ಇರುವ ಕಾರಣ ಚನ್ನಪಟ್ಟಣವನ್ನು ಉನ್ನತ ಮಟ್ಟದಲ್ಲಿ ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯುವುದು ನನ್ನ ಮುಂದಿರುವ ಸವಾಲು. ಇದನ್ನು ಮಾಡುತ್ತೇನೆ ಎನ್ನುವ ವಿಶ್ವಾಸ ನನ್ನಲ್ಲಿ ಇದೆ.