ಜಿಲ್ಲೆ

ಭಗೀರಥರ ಆದರ್ಶ ಸಮಾಜಕ್ಕೆ ಮಾದರಿ: ತಹಸೀಲ್ದಾರ್ ಡಾ.ಶಿವಕುಮಾರ್ ಬಿರಾದರ್ ಅಭಿಮತ

ಕೆ.ಎನ್.ರಾಘವೇಂದ್ರ

ಮಂಡ್ಯ: ಭಗೀರಥರ ತತ್ವ, ಸಿದ್ಧಾಂತ, ಮೌಲ್ಯ ಆದರ್ಶ ಸಮಾಜಕ್ಕೆ ಮಾದರಿ. ಇಂತಹ ಮಹನೀಯರಂತೆ ಗುಣವನ್ನು ಎಲ್ಲರೂ ಅಳವಡಿಸಿಕೊಳ್ಳಬೇಕು ಎಂದು ತಹಸೀಲ್ದಾರ್ ಡಾ.ಶಿವಕುಮಾರ್ ಬಿರಾದರ್ ಹೇಳಿದರು.

ನಗರದ ಜಿಲ್ಲಾ ಪಂಚಾಯಿತಿ ಕಚೇರಿಯ ಕಾವೇರಿ ಸಭಾಂಗಣದಲ್ಲಿ ಜಿಲ್ಲಾಡಳಿತದಿಂದ ಆಯೋಜಿಸಿದ್ದ ಭಗೀರಥ ಜಯಂತ್ಯುತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಏಕಾಗ್ರತೆ ಮತ್ತು ದೃಢತೆ ಭಗೀರಥ ಮಹರ್ಷಿಗೆ ಅಗಾಧವಾಗಿತ್ತು. ಅದರಿಂದಲೇ ಅವರು ಆಗಸದಿಂದ ಧರೆಗೆ ವರುಣನನ್ನು ತಂದರು. ಶೈಕ್ಷಣಿಕವಾಗಿ ಹಿಂದುಳಿದ ಸಮುದಾಯದ ಅಭಿವೃದ್ಧಿಗೆ ಶಾಲೆ, ವಿದ್ಯಾರ್ಥಿ ನಿಲಯ, ಸಮುದಾಯ ಭವನ ಸ್ಥಾಪನೆ ಮಾಡಲು ಸರ್ಕಾರ ಸದಾ ಚಿಂತಿಸುತ್ತದೆ ಎಂದರು.

ನಿವೃತ್ತ ಸಮಾಜ ಕಲ್ಯಾಣ ಇಲಾಖಾ ಅಧಿಕಾರಿ ಎನ್.ನರಸಿಂಹಮೂರ್ತಿ ಮಾತನಾಡಿ, ಸೂರ್ಯವಂಶದ ಭಗೀರಥ ಮಹರ್ಷಿ ತನ್ನ ಪೂರ್ವಜರ ಆತ್ಮಗಳ ಸದ್ಗತಿಗಾಗಿ ಹಾಗೂ ಗುರುಗಳ ಸೂಚನೆ ಮೇರೆಗೆ ಬ್ರಹ್ಮ ದೇವರ ಕುರಿತು ತಪಸ್ಸಿಗೆ ಕುಳಿತುಕೊಳ್ಳುತ್ತಾರೆ. ಬ್ರಹ್ಮ ದೇವರು ಭಗೀರಥರ ತಪಸ್ಸಿಗೆ ಮಣಿದು ಪ್ರತ್ಯಕ್ಷವಾಗಿ ತನ್ನ ಕಮಂಡಲದಿಂದ ಧರೆಗೆ ಬೀಳುವ ಗಂಗೆಯ ರಭಸವನ್ನು ಭೂಮಿಯಿಂದ ತಡೆಯಲು ಸಾಧ್ಯವಿಲ್ಲ, ಆದರಿಂದ ನೀನು ಶಿವನನ್ನು ಪ್ರಾರ್ಥಿಸು ಎಂದು ಹೇಳುತ್ತಾರೆ. ಅದರಂತೆ ಭಗೀರಥ ಮಹರ್ಷಿ ಶಿವನನ್ನು ಕುರಿತು ತಪಸ್ಸಿಗೆ ಕುಳಿತುಕೊಳ್ಳುತ್ತಾರೆ. ಭಗೀರಥರ ಭಕ್ತಿ ಮೆಚ್ಚಿ ಪರಶಿವ ತನ್ನ ಜಡೆಯನ್ನು ಭೂ ಮಂಡಲದ ಸುತ್ತಿ ಗಂಗೆಯ ರಭಸವನ್ನು ತಡೆದು ಭೂಮಿಗೆ ಗಂಗೆಯನ್ನು ಕರೆಸುವ ಮೂಲಕ ತನ್ನ ಪೂರ್ವಜರ ಆತ್ಮಗಳಿಗೆ ಸದ್ಗತಿ ಸಿಗುವಂತೆ ಮಾಡುತ್ತಾರೆ. ನಾವೆಲ್ಲರೂ ಭಗೀರಥ ಮಹರ್ಷಿಗಳ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು. ಗಂಗೆಯನ್ನು ಧರೆಗೆ ಹರಿಸುವ ಮೂಲಕ ಜನ ಜೀವಿಗಳ ದಾಹ ತಣಿಸಿದರು. ಜನಸಾಮಾನ್ಯರ ಬದುಕು ಹಸನ್ನಾಗಿಸಿದರು ಎಂದು ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಬಿ.ವಿ.ನಂದೀಶ್, ಕೌಶಲ ಅಭಿವೃದ್ಧಿ ಇಲಾಖೆಯ ಜಿಲ್ಲಾ ಅಧಿಕಾರಿ ನಾಗಾನಂದ, ಉಪ್ಪಾರ ಸಮುದಾಯದ ಜಿಲ್ಲಾಧ್ಯಕ್ಷೆ ನಾಗರತ್ನಾ, ರಾಷ್ಟ್ರೀಯ ಯುವ ಪ್ರಶಸ್ತಿ ಪುರಸ್ಕೃತೆ ಬಿ.ಎಸ್.ಅನುಪಮಾ, ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ವೇದಿಕೆ ಅಧ್ಯಕ್ಷ ಎಲ್.ಸಂದೇಶ್, ಮುಖಂಡರಾದ ಡಾ.ಎಂ.ವೆಂಕಟೇಶ್, ಟಿ.ಡಿ.ನಾಗರಾಜ್, ಅಮ್ಜದ್ ಪಾಷಾ, ಬಿ.ಟಿ.ಗುರುರಾಜ್, ಎಸ್.ನಾರಾಯಣ್, ಪೂರ್ಣಚಂದ್ರ, ನರಸಿಂಹಮೂರ್ತಿ ಇತರರಿದ್ದರು.

ಮೆರವಣಿಗೆ: ಕಾರ್ಯಕ್ರಮದ ಅಂಗವಾಗಿ ವರ್ಣರಂಜಿತ ರಥದ ಮೇಲೆ ಇರಿಸಲಾಗಿದ್ದ ಭಗೀರಥರ ಭಾವಚಿತ್ರಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ ಬಿ.ವಿ.ನಂದೀಶ್ ಅವರು ಪುಷ್ಪಾರ್ಚನೆ ನೆರವೇರಿಸಿ ಡಿಸಿ ಕಚೇರಿಯಿಂದ ಮೆರವಣಿಗೆ ಚಾಲನೆ ನೀಡಿದರು. ಡೊಳ್ಳುಕುಣಿತದ ಮೂಲಕ ಮೆರವಣಿಗೆ ಜಿಪಂ ಕಚೇರಿಯಲ್ಲಿ ಅಂತ್ಯಗೊಂಡಿತು.