ವಿಜಯವಾಣಿ ಸುದ್ದಿಜಾಲ ಉಡುಪಿ
ಧಾರ್ಮಿಕ ಜ್ಞಾನದ ಕೊರತೆಯಿಂದಾಗಿಯೇ ಸಮಾಜದಲ್ಲಿ ಕೊಲೆ-ಸುಲಿಗೆ, ಅನ್ಯಾಯ ಹಾಗೂ ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚತೊಡಗಿದೆ. ಹೀಗಾಗಿ ಯುವಸಮುದಾಯ ಸನ್ಮಾರ್ಗದಲ್ಲಿ ಸಾಗುವಂತೆ ಪೂರಕವಾಗಿ ಧಾರ್ಮಿಕ ಪ್ರಜ್ಞೆ ಮೂಡಿಸಲು ಭಗವದ್ಗೀತಾ ಡಿಪ್ಲೊಮಾ ಕೋರ್ಸ್ ಪ್ರಾರಂಭಿಸಲಾಗಿದೆ ಎಂದು ಪರ್ಯಾಯ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಶ್ರೀಪಾದರು ತಿಳಿಸಿದರು.
ಉಡುಪಿಯ ರಾಜಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಿಪ್ಲೊಮಾ ಕೋರ್ಸ್ನ ಪಠ್ಯ ಗೀತಾಮೃತಸಾರ ಪುಸ್ತಕ ಬಿಡುಗಡೆಗೊಳಿಸಿ ಆಶೀರ್ವಚನ ನೀಡಿದರು.
ಪುತ್ತಿಗೆ ಮಠದ ಮಾರ್ಗದರ್ಶನದಲ್ಲಿ ನಿಟ್ಟೆ ವಿವಿಯ ಭಾರತೀಯ ಜ್ಞಾನ ವ್ಯವಸ್ಥಾ ಕೇಂದ್ರ (ಐಕೆಎಸ್)ದಲ್ಲಿ ಡಿಸೆಂಬರ್ನಿಂದ ಒಂದು ವರ್ಷ ಅವಧಿಯ ಗೀತಾ ಡಿಪ್ಲೊಮಾ ಕೋರ್ಸ್ ಆರಂಭಗೊಳ್ಳಲಿದೆ. ಒಟ್ಟು ಐದು ಪತ್ರಿಕೆ ಇರಲಿದ್ದು, ಕೋರ್ಸ್ನ ಪಾಠದ ವ್ಯವಸ್ಥೆ ಹಾಗೂ ಪರೀಕ್ಷೆಯೂ ಸಹ ಅಂತಾರಾಷ್ಟ್ರೀಯ ಮಟ್ಟದಲ್ಲಿ ಆನ್ಲೈನ್ ಮೂಲಕವೇ ನಡೆಯಲಿದೆ. ಈ ಕೋರ್ಸ್ ಮೂಲಕ ಕೃಷ್ಣಜ್ಞಾನ ಪಸರಿಸುವಂತಾಗಲಿ ಎಂದು ಹಾರೈಸಿದರು.
ನಿಟ್ಟೆ ವಿವಿಯ ಕುಲಪತಿ ಡಾ. ಎಂ.ಎಸ್. ಮೂಡಿತ್ತಾಯ ಮಾತನಾಡಿ, ವಿಶ್ವವಿದ್ಯಾಲಯ ಹಮ್ಮಿಕೊಂಡಿರುವ ಭಾರತೀಯ ಶಿಕ್ಷಣ ವ್ಯವಸ್ಥೆ, ಭಗವದ್ಗೀತಾ ಡಿಪ್ಲೊಮಾ ಕೋರ್ಸ್ನ ಆವಶ್ಯಕತೆ ಹಾಗೂ ಹಿನ್ನೆಲೆ ವಿವರಿಸಿದರು. ಆಸಕ್ತರು ಮೊ.ಸಂ. 9945912075 ಸಂಪರ್ಕಿಸಬಹುದು ಎಂದರು.
ಪುತ್ತಿಗೆ ಮಠದ ಕಿರಿಯ ಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದರು ಆಶೀರ್ವಚನ ನೀಡಿದರು.
ಪುರಾತತ್ವದ ಖ್ಯಾತ ಶಾಸ್ತ್ರಜ್ಞ ಪದ್ಮಶ್ರೀ ಕೆ.ಕೆ. ಮೊಹಮ್ಮದ್, ಟೆಂಪ್ಲೆಕ್ಸ್ ಸಿಟಿ ಖ್ಯಾತ ಬರಹಗಾರ ಸುರೇಂದ್ರನಾಥ್ ಬೊಪ್ಪರಾಜು, ಹಿರಿಯ ವಿದ್ವಾಂಸ ಪ್ರೊ. ಶ್ರೀಪತಿ ತಂತ್ರಿ ಉಡುಪಿ, ಶ್ರೀ ವಾದಿರಾಜ ಸಂಶೋಧನಾ ಪ್ರತಿಷ್ಠಾನದ ಸಂಚಾಲಕ ಪ್ರಸನ್ನ ಆಚಾರ್ಯ, ಮಠದ ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಚಾಲಕ ರಮೇಶ ಭಟ್ ಉಪಸ್ಥಿತರಿದ್ದರು.
ನಿಟ್ಟೆ ವಿವಿಯ ಭಾರತೀಯ ಜ್ಞಾನ ವ್ಯವಸ್ಥಾ ಕೇಂದ್ರದ ನಿರ್ದೇಶಕ ಡಾ. ಸುಧೀರರಾಜ್ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿದ್ವಾನ್ ಡಾ. ಬಿ.ಗೋಪಾಲ ಆಚಾರ್ಯ ಕಾರ್ಯಕ್ರಮ ನಿರ್ವಹಿಸಿದರು.