ಜಿಲ್ಲೆ

'ತುಳುವೆರೆ ದಂಡ್​' ದಿಬ್ಬಣ ನ.16ರಂದು

ಪುತ್ತಿಗೆ ಮಠದ ರಮಣ ಆಚಾರ್ಯ ಮಾಹಿತಿ

ಶ್ರೀಕೃಷ್ಣನಿಗೆ ತುಳು ಲಿಪಿಯಲ್ಲಿ ಬರೆದ ಗೀತೆ ಸಮರ್ಪಣೆ

ವಿಜಯವಾಣಿ ಸುದ್ದಿಜಾಲ ಉಡುಪಿ

ಪರ್ಯಾಯ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಶ್ರೀಪಾದರ ಆಶಯ ಹಾಗೂ ಸಂಕಲ್ಪದಂತೆ ಅವರ ಪ್ರಸ್ತುತ ಚತುರ್ಥ ಪರ್ಯಾಯದಲ್ಲಿ ಕೋಟಿ ಗೀತಾ ಲೇಖನ ಯಜ್ಞ ನಡೆದಿದ್ದು, 8 ಭಾಷೆಗಳಲ್ಲಿ ಭಕ್ತರು ಬರೆದು ಶ್ರೀಕೃಷ್ಣನಿಗೆ ಸಮರ್ಪಿಸುತ್ತಿದ್ದಾರೆ. ಇದೀಗ ತುಳು ಲಿಪಿಯಲ್ಲಿ ಬರೆದ ಗೀತೆಯ ಸಮರ್ಪಣೆಗಾಗಿ 'ಜೈ ತುಳುನಾಡ್​ (ರಿ.)' ಸಂಘಟನೆ ಆಶ್ರಯದಲ್ಲಿ ನ.16ರಂದು ತುಳುವೆರೆ ದಂಡ್​ ದಿಬ್ಬಣ (ಮೆರವಣಿಗೆ) ಆಯೋಜಿಸಲಾಗಿದೆ ಎಂದು ಪುತ್ತಿಗೆ ಮಠದ ಕೋಟಿ ಗೀತಾ ಲೇಖನ ಯಜ್ಞದ ಪೂರ್ಣಾವಧಿ ಪ್ರಚಾರಕ ರಮಣ ಆಚಾರ್ಯ ಮಾಹಿತಿ ನೀಡಿದರು.

ಉಡುಪಿಯ ಪ್ರೆಸ್​ಕ್ಲಬ್​ನಲ್ಲಿ ಮಂಗಳವಾರ (ನ.11) ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 400ಕ್ಕೂ ಅಧಿಕ ಜನರು ತುಳು ಲಿಪಿಯಲ್ಲೇ ಭಗವದ್ಗೀತೆ ಬರೆದಿರುವುದು ತುಳುನಾಡಾಗಿರುವ ಉಡುಪಿ ಜಿಲ್ಲೆಗೆ ಹೆಮ್ಮೆಯ ಸಂಗತಿಯಾಗಿದೆ. ಈಗಾಗಲೇ 200ಕ್ಕೂ ಅಧಿಕ ಜನರು ತುಳುವಿನಲ್ಲಿ ಗೀತೆಯನ್ನು ಬರೆದು ಮುಗಿಸಿದ್ದಾರೆ ಎಂದರು.

ಬೃಹತ್​ ಮೆರವಣಿಗೆ

ಅಂದು ಬಳಗ್ಗೆ 9 ಗಂಟೆಗೆ ಉಡುಪಿಯ ಜೋಡುಕಟ್ಟೆಯಿಂದ ಮೆರವಣಿಗೆ ಆರಂಭಗೊಂಡು 10:30ಕ್ಕೆ ಶ್ರೀಕೃಷ್ಣ ಮಠದ ಬಳಿ ಮುಕ್ತಾಯಗೊಳ್ಳಲಿದೆ. ಬಳಿಕ ಗೀತಾ ಮಂದಿರದಲ್ಲಿ ಶ್ರೀಕೃಷ್ಣನಿಗೆ ತುಳುವಿನಲ್ಲಿ ಭಕ್ತರು ಬರೆದ ಗೀತಾ ಪುಸ್ತಕವನ್ನು ಪರ್ಯಾಯ ಸುಗುಣೇಂದ್ರ ಶ್ರೀಗಳು ಸಮರ್ಪಿಸಲಿದ್ದಾರೆ. ಎಲ್ಲ ಪುಸ್ತಕಗಳನ್ನು ಪೂಜಿಸಿ, ಮರಳಿ ಅವರಿಗೇ ಹಸ್ತಾಂತರಿಸಲಾಗುವುದು. ಆ ಪುಸ್ತಕವನ್ನು ಮತ್ತೆ ಮನೆಗೆ ಕೊಂಡೊಯ್ದು ದೇವರ ಪೀಠದ ಬಳಿ ಇಡಬೇಕು. ನಿತ್ಯವೂ ಅದನ್ನು ಓದುವಂತಾಗಲು ಹಾಗೂ ಪ್ರತಿಯೊಬ್ಬರ ಮನೆಯಲ್ಲೂ ಭಗವದ್ಗೀತೆ ಪುಸ್ತಕ ಇರಬೇಕು ಎನ್ನುವುದು ಪುತ್ತಿಗೆ ಶ್ರೀಗಳ ಆಶಯವಾಗಿದೆ ಎಂದರು.

ತುಳು ಸಂಸ್ಕೃತಿಯ ಅನಾವರಣ

ಜೈ ತುಳುನಾಡ್​ ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿ ಸಂತೋಷ ಕಟಪಾಡಿ ಮಾತನಾಡಿ, ನಮ್ಮ ಸಂಘಟನೆಯು 11 ವರ್ಷದಿಂದ ತುಳು ಭಾಷೆಯ ಏಳಿಗೆ ಹಾಗೂ ಲಿಪಿಯ ರಕ್ಷಣೆಗಾಗಿ ಅನೇಕ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದೇವೆ. 300ಕ್ಕೂ ಅಧಿಕ ತುಳು ಲಿಪಿ ಶಿಕ್ಷಕರನ್ನು ಹಾಗೂ 50 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ತುಳು ಲಿಪಿ ಕಲಿಸಿದ್ದೇವೆ. ಆಸಕ್ತರಿಗೆ ಉಚಿತವಾಗಿ ತುಳು ಭಾಷೆ-ಲಿಪಿ ಕಲಿಸಿಕೊಡುತ್ತೇವೆ. ಇದೀಗ ತುಳುವಿನಲ್ಲೇ ಬರೆದ ಗೀತೆಯ ಸಮರ್ಪಣಾ ಮೆರವಣಿಗೆಯಲ್ಲಿ ತುಳು ಸಂಸ್ಕೃತಿ ಬಿಂಬಿಸುವ ಸ್ತಬ್ಧಚಿತ್ರ, ತುಳುವಿನ ಭಜನೆಯೊಂದಿಗೆ ಕುಣಿತ ಭಜನೆ, ವಾದ್ಯ ಘೋಷಗಳೊಂದಿಗೆ ತೆರಳಲಿದ್ದೇವೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಜೈ ತುಳುನಾಡ್​ ಉಡುಪಿ ಘಟಕದ ಅಧ್ಯಕ್ಷೆ ಸುಶೀಲಾ ಜಯಕರ್​, ಉಪಾಧ್ಯಕ್ಷ ಕಿರಣ ಭಂಡಾರಿ, ಸಹ ಕಾರ್ಯದರ್ಶಿ ಸುಪ್ರೀತಾ ಪುತ್ರನ್​, ಕೋಶಾಧಿಕಾರಿ ಸುಪ್ರಿಯಾ ದೇವಾಡಿಗ ಇದ್ದರು.