oplus_131074 
ಜಿಲ್ಲೆ

ಸಂಸ್ಕಾರ ನೀಡುವಲ್ಲಿ ಭಗವದ್ಗೀತೆ ಪಾತ್ರ ಮಹತ್ವದ್ದು

ವಿಜಯವಾಣಿ ಸುದ್ದಿಜಾಲ ಧಾರವಾಡ

ವಿದ್ಯಾರ್ಥಿಗಳಿಗೆ ಜೀವನದ ಮೌಲ್ಯ ಮತ್ತು ಸಂಸ್ಕಾರ ನೀಡುವಲ್ಲಿ ಭಗವದ್ಗೀತೆ ಪಾತ್ರ ಬಹಳ ಇದೆ. ಇಂದಿನ ಯುವ ಸಮುದಾಯ ಭಗವದ್ಗೀತೆ ಓದಬೇಕಲ್ಲದೆ, ಅದರಲ್ಲಿನ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಪ್ರಯತ್ನಿಸಬೇಕು ಎಂದು ಆಕಾಶವಾಣಿ ನಿವೃತ್ತ ಉದ್ಘೋಷಕ ಡಾ. ಶಶಿಧರ ನರೇಂದ್ರ ಹೇಳಿದರು.

ನಗರದ ಕರ್ನಾಟಕ ಕಲಾ ಮತ್ತು ವಾಣಿಜ್ಯ ಕಾಲೇಜು ಸೋಮವಾರ ಆಯೋಜಿಸಿದ್ದ ಗೀತಾ ಜಯಂತಿ ಆಚರಣೆ ಹಾಗೂ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ವಿದ್ಯಾರ್ಥಿಗಳಿಗೆ ಅತ್ಯಂತ ಅವಶ್ಯವಾದ ಯುಕ್ತಿ-ಭಕ್ತಿ ಹಾಗೂ ಶಕ್ತಿಗಳನ್ನು ಹೇಗೆ ರೂಪಿಸಿಕೊಳ್ಳಬೇಕು ಎಂಬುದನ್ನು ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಹೇಳಿದ್ದಾನೆ. ಭಗವದ್ಗೀತೆಯು ವಿದ್ಯಾರ್ಥಿಗಳ ಭವಿಷ್ಯ ನಿರ್ಮಾಣದಲ್ಲಿ ಅತ್ಯಂತ ಮಹತ್ವದ ಪಾತ್ರ ವಹಿಸಿದೆ. ಸಮಯ ವ್ಯರ್ಥ ಮಾಡದೆ ಸದ್ಬಳಕೆ ಮಾಡಿಕೊಳ್ಳಬೇಕು. ಭಗವದ್ಗೀತೆಯನ್ನು ಅವಶ್ಯವಾಗಿ ಓದಬೇಕು ಹಾಗೂ ವ್ಯಕ್ತಿತ್ವ ನಿರ್ಮಾಣಕ್ಕೆ ಭಗವದ್ಗೀತೆ ನೀಡಿದ ಸಂದೇಶವನ್ನು ಪಾಲಿಸಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಕಲಾ ಕಾಲೇಜಿನ ಪ್ರಾಚಾರ್ಯ ಡಾ. ಡಿ.ಬಿ. ಕರಡೋಣಿ ಮಾತನಾಡಿ, ಭಗವದ್ಗೀತೆಯು ಯಾವುದೇ ಒಂದು ಜಾತಿ, ಮತ ಹಾಗೂ ಪಂಥಕ್ಕೆ ಸೀಮಿತವಾಗದೆ, ಇಡೀ ಮಾನವ ಕುಲಕ್ಕೆ ಶ್ರೇಷ್ಠ ಸಂದೇಶ ನೀಡಿದೆ ಎಂದರು.

ಡಾ. ಜ್ಯೋತಿ ಗೋಕಾವಿ, ಡಾ. ಗೀತಾ ಕುಮಶೀಕರ, ಡಾ. ಅಂಜನ ಮಠದ, ಗುರುಪ್ರಸಾದ ಹೆಗಡೆ, ಇತರರು ಇದ್ದರು. ಡಾ. ರಜನಿ.ಎಚ್​ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀಗೌರಿ ನಿರೂಪಿಸಿದರು. ಡಾ. ಚಂದ್ರು ಲಮಾಣಿ ವಂದಿಸಿದರು.