Bhagavad Gita mythological drama nelamagala 
ಜಿಲ್ಲೆ

ಪೌರಾಣಿಕ ನಾಟಕಗಳಿಗೆ ದೊರಕಲಿ ಪ್ರೋತ್ಸಾಹ

ಕಲಾವಿದರ ಬಳಗದ ಅಧ್ಯಕ್ಷ ಡಾ.ಜಿ.ಗಂಗರಾಜು ಆಶಯ

ನೆಲಮಂಗಲದಲ್ಲಿ ಕುರುಕ್ಷೇತ್ರ ನಾಟಕ ಪ್ರದರ್ಶನ

ವಿಜಯವಾಣಿ ಸುದ್ದಿಜಾಲ ನೆಲಮಂಗಲ
ಆಧುನಿಕ ಯುಗದಲ್ಲಿ ಕಲೆ ನಶಿಸಿತ್ತಿರುವ ಸನ್ನಿವೇಶದಲ್ಲಿ ಅತಿಹೆಚ್ಚು ಪೌರಾಣಿಕ ನಾಟಕ ಪ್ರದರ್ಶಿಸುವ ಮೂಲಕ ಕಲೆಯನ್ನು ಪೋಷಿಸಬೇಕು ಎಂದು ತಾಲೂಕು ಕಲಾವಿದರ ಬಳಗದ ಅಧ್ಯಕ್ಷ ಡಾ.ಜಿ.ಗಂಗರಾಜು ತಿಳಿಸಿದರು.
ನಗರದ ಶ್ರೀನಿವಾಸ ಸಮುದಾಯ ಭವನ ಮುಂಭಾಗದಲ್ಲಿ ಜ್ಞಾನಭಾರತಿ ಚಾರಿಟಬಲ್ ಟ್ರಸ್ಟ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಕುರುಕ್ಷೇತ್ರ ಅಥವಾ ಭಗವದ್ಗೀತೆ ಪೌರಾಣಿಕ ನಾಟಕ ಪ್ರದರ್ಶನದಲ್ಲಿ ಮಾತನಾಡಿದರು.
ನಾಟಕದಲ್ಲಿನ ಮಾನವೀಯ ಮೌಲ್ಯಗಳನ್ನು ಜೀವನದಲ್ಲಿ ಆಳವಡಿಸಿಕೊಂಡು, ಸಹಬಾಳ್ವೆಯಿಂದ ಬದುಕು ಸಾಗಿಸಬೇಕು. ಪೂರ್ವಜರ ಕಾಲದಿಂದಲೂ ಬೆಳೆದುಕೊಂಡು ಬಂದಿರುವ ನಾಟಕ ಕಲೆ ಮುಂದಿನ ತಲೆಮಾರಿಗೂ ಉಳಿಸಿ, ಬೆಳೆಸುವ ಕೆಲಸ ಮಾಡಬೇಕಿದೆ ಎಂದರು.
ಸಾಹಿತಿ ಡಾ.ಸಮತಾ ಬಿ.ದೇಶಮಾನೆ ಮಾತನಾಡಿ, ಒಂದು ಕಾಲದಲ್ಲಿ ಪೌರಾಣಿಕ ನಾಟಕಗಳು ಗ್ರಾಮೀಣ ಜನರಿಗೆ ಮನರಂಜನೆಯ ಮುಖ್ಯ ಮಾಧ್ಯಮಗಳಾಗಿದ್ದವು. ನಾಟಕಗಳ ಮೂಲಕ ಹಿರಿಯರು ಜೀವನ ಮೌಲ್ಯಗಳನ್ನು ಮಕ್ಕಳಿಗೆ ತಿಳಿಸಿಕೊಡುವ ಜತೆಗೆ ಬದುಕಿನ ಸನ್ಮಾರ್ಗ ತೋರಿಸುತ್ತಿದ್ದರು. ಪ್ರಸ್ತುತ ಸಮಾಜದಲ್ಲೂ ಪುರಾಣ ಪಾತ್ರಗಳ ಬದುಕಿನ ಆದರ್ಶಗಳ ಬಗ್ಗೆ ತಿಳಿಹೇಳಬೇಕು ಎಂದರು.
ಜ್ಞಾನಭಾರತಿ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ರಂಗನಾಥ್ ಮಾತನಾಡಿ, ಪೌರಾಣಿಕ ನಾಟಕಗಳ ಪ್ರದರ್ಶನಗಳಿಂದ ಯುವಕರಿಗೆ ದೇಶದ ಸಾಂಸ್ಕೃತಿ ಶ್ರೀಮಂತಿಕೆ ತಿಳಿಸಿಕೊಡಲು ಸಹಕಾರಿಯಾಗಿದೆ ಎಂದ ಅವರು, ಜಿಲ್ಲೆಯ 4 ತಾಲೂಕಿನ ಪೈಕಿ 3 ತಾಲೂಕಿನಲ್ಲಿ ನಾಟಕ ಪ್ರದರ್ಶನಕ್ಕೆ ರಂಗಮಂದಿರಗಳಿದ್ದು, ನಮ್ಮ ತಾಲೂಕಿನಲ್ಲಿ ಇಲ್ಲದಿರುವುದು ಬೇಸರದ ಸಂಗತಿ. ತಾಲೂಕಿನಾದ್ಯಂತ ಸಾಕಷ್ಟು ಮಂದಿ ಹಿರಿಯ ಕಲಾವಿದರು ನಾಟಕಗಳನ್ನು ಪ್ರದರ್ಶನ ಮಾಡುತ್ತಿದ್ದು, ಕೂಡಲೇ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ನಗರದಲ್ಲಿ ಕಲಾಮಂದಿರ ನಿರ್ಮಾಣಕ್ಕೆ ಜಾಗವನ್ನು ಗುರುತಿಸಿ ಸುಸಜ್ಜಿತ ರಂಗ ಮಂದಿರ ನಿರ್ಮಾಣ ಮಾಡಿಕೊಡಬೇಕು ಎಂದರು.
ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ್, ಸಾಹಿತಿ ಡಾ.ಜಿ.ವೈ.ಪದ್ಮನಾಗರಾಜು, ಪ್ರಾಧ್ಯಾಪಕಿ ಡಾ.ಸಿದ್ಧಗಂಗಮ್ಮಕಲ್ಪನ, ಬ್ಲಾಕ್ ಕಾಂಗ್ರೆಸ್ ಮಹಿಳಾ ಅಧ್ಯಕ್ಷೆ ನಾಗರತ್ನಮ್ಮ, ಕಲಾವಿದರಾದ ಗಂಗರಾಜು, ಕೃಷ್ಣಪ್ಪ, ದೊಡ್ಡರಾಮಯ್ಯ, ಹನುಮಂತಮ್ಮ ಮತ್ತಿತರರು ಇದ್ದರು.