ಕುಮಟಾ: ಜೀವನದಲ್ಲಿ ಉನ್ನತಿಗಾಗಿ ಚತುರ್ವಿಧ ಪುರುಷಾರ್ಥಗಳು, ಚತುರ್ವಿಧ ಆಶ್ರಮಗಳು ಹಾಗೂ ಭಗವದ್ಗೀತೆಯ ಸೂತ್ರ ಅಳವಡಿಸಿಕೊಳ್ಳುವುದು ಬಹಳ ಮುಖ್ಯ ಎಂದು ಭಾರತೀಯ ಸೇನೆಯ ಮೇಜರ್ ಜನರಲ್ ಆನಂದ ಸಕ್ಸೇನ ಹೇಳಿದರು.
ತಾಲೂಕಿನ ಗೋರೆಯ ಕೆನರಾ ಎಕ್ಸಲೆನ್ಸ್ ಪಿಯು ಕಾಲೇಜಿಗೆ ಇತ್ತೀಚೆಗೆ ಭೇಟಿ ನೀಡಿದ ಸಂದರ್ಭದಲ್ಲಿ ವಿದ್ಯಾರ್ಥಿಗಳೊಂದಿಗೆ ಅವರು ಸಂವಾದ ನಡೆಸಿದರು. ಜೀವನದ ಉನ್ನತಿ ಸಾಧಿಸುವ ಬಗೆ ಧರ್ಮ, ಅರ್ಥ, ಕಾಮ, ಮೋಕ್ಷ ಹಾಗೂ ಬಾಲ್ಯ, ಯೌವನ, ಸನ್ಯಾಸ ಹಾಗೂ ವಾನಪ್ರಸ್ಥ ಎಂಬ ನಾಲ್ಕರ ಸೂತ್ರದಲ್ಲಿದೆ. ಹಾಗೆಯೇ ಭಗವದ್ಗೀತೆಯ ಅಂತರಂಗವನ್ನು ಅರಿತು ಬದುಕಿಗೆ ಅನ್ವಯಿಸಿದಾಗ ಜೀವನ ಸರಳವಾಗುತ್ತದೆ. ಯಾವುದೇ ಸಂದರ್ಭವನ್ನೂ ಎದುರಿಸುವ ಶಕ್ತಿ-ಸಾಮರ್ಥ್ಯ ಪ್ರಾಪ್ತವಾಗುತ್ತದೆ. ಸ್ವಸ್ಥ-ಸುಂದರ ಬದುಕಿಗೆ ಭಗವದ್ಗೀತೆ ಬಹಳ ಮುಖ್ಯ ಎಂದರು.
ಕಾಲೇಜಿನ ಸಂಸ್ಥಾಪಕ ಅಧ್ಯಕ್ಷ ಡಾ. ಜಿ.ಜಿ. ಹೆಗಡೆ, ಪ್ರಾಚಾರ್ಯ ರಾಮ ಭಟ್ಟ, ಆಡಳಿತಾಧಿಕಾರಿ ಶಶಾಂಕ ಶಾಸ್ತ್ರಿ, ಇತರರು ಉಪಸ್ಥಿತರಿದ್ದರು. ಪೂಜಾ ಭಟ್ಟ ಹಾಗೂ ಪ್ರಾಧ್ಯಾಪಕ ಶಂಕರನಾರಾಯಣ ಉಪಾಧ್ಯಾಯ ಕಾರ್ಯಕ್ರಮ ನಿರ್ವಹಿಸಿದರು.