ವಿಜಯಪುರ: ಶ್ರೀ ಭಗವದ್ಗೀತಾ ಅಭಿಯಾನ ಕರ್ನಾಟಕ-2024ರ ಅಂಗವಾಗಿ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ನೇತೃತ್ವ ನಡೆಯುತ್ತಿರುವ ಭಗವದ್ಗೀತಾ ಅಭಿಯಾನದ ಮಹಾಸಮರ್ಪಣೆಯ ರಾಜ್ಯ ಮಟ್ಟದ ಕಾರ್ಯಕ್ರಮ ಡಿ. 14 ರಂದು ಅದ್ದೂರಿಯಾಗಿ ನಡೆಯಲಿದೆ ಎಂದು ಅಭಿಯಾನದ ಜಿಲ್ಲಾ ಸಮಿತಿಯ ಕಾರ್ಯಾಧ್ಯಕ್ಷ ಅರುಣ ಶಹಾಪುರ ತಿಳಿಸಿದರು.
ನಗರದ ಸಾಯಿ ಗಾರ್ಡನ್‌ದಲ್ಲಿ ಅಂದು ಬೆಳಗ್ಗೆ 10.30ಕ್ಕೆ ನಡೆಯಲಿರುವ ಮಹಾಸಮರ್ಪಣೆ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ಪರಮ ಪೂಜ್ಯ ಶ್ರೀ ಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀಮದ್ ಗಂಗಾಧರೇಶ್ವರ ಸರಸ್ವತಿ ಮಹಾಸ್ವಾಮೀಜಿ, ಹುಬ್ಬಳ್ಳಿಯ ಮೂರು ಸಾವಿರ ಮಠದ ಗುರುಸಿದ್ದರಾಜಯೋಗೀಂದ್ರ ಮಹಾಸ್ವಾಮಿ, ಚಿತ್ರದುರ್ಗದ ಮಾದಾರ ಚೆನ್ನಯ್ಯ ಗುರುಪೀಠದ ಬಸವಲಿಂಗ ಮಹಾಸ್ವಾಮಿ, ವಿಜಯಪುರದ ಜ್ಞಾನಯೋಗಾಶ್ರಮದ ಬಸವಲಿಂಗ ಮಹಾಸ್ವಾಮಿ, ಸಿಂದಗಿಯ ಸಾರಂಗಮಠದ ಪ್ರಭುಸಾರಂಗದೇವ ಶಿವಾಚಾರ್ಯರು ವಹಿಸುವರು. ಜತೆಗೆ 30ಕ್ಕೂ ಹೆಚ್ಚು ಸ್ವಾಮೀಜಿಗಳು ಪಾಲ್ಗೊಳ್ಳುವರು. ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ್, ಸಚಿವ ಶಿವಾನಂದ ಪಾಟೀಲ್, ಸಂಸದರಾದ ರಮೇಶ ಜಿಗಜಿಣಗಿ, ಗೋವಿಂದ ಕಾರಜೋಳ, ವಿಶ್ವೇಶ್ವರ ಹೆಗಡೆ ಕಾಗೇರಿ, ಡಾ.ಸುಧಾಮೂರ್ತಿ ಹಾಗೂ ಬಸವನಗೌಡ ಪಾಟೀಲ ಯತ್ನಾಳ ಸೇರಿದಂತೆ ಜಿಲ್ಲೆಯ ಶಾಸಕರು ಉಪಸ್ಥಿತರಿರಲಿದ್ದಾರೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.
ಅಭಿಯಾನದ ಅಂಗವಾಗಿ ಡಿ.13ರಂದು ರಾಜ್ಯಮಟ್ಟದ ಗೀತಾ ಕಂಠಪಾಠ, ಗೀತಾ ಭಾಷಣ ಮತ್ತು ಗೀತಾ ರಸಪ್ರಶ್ನೆ ಸ್ಪರ್ಧೆಗಳು ನಡೆಯಲಿದೆ. ಹಿರಿಯ ಪ್ರಾಥಮಿಕ ಶಾಲೆ ಮತ್ತು ಪ್ರೌಢಶಾಲೆಯ ಎರಡು ಭಾಗಗಳಲ್ಲಿ ಈ ಸ್ಪರ್ಧೆಗಳು ಜರುಗಲಿದ್ದು, ಡಿ.14ರ ಮಹಾಸಮರ್ಪಣೆಯ ಮಹಾ ವೇದಿಕೆಯಲ್ಲಿ ವಿಜೇತರಿಗೆ ಬಹುಮಾನ ವಿತರಣೆ ನಡೆಯಲಿದೆ. ಸಭಾ ಕಾರ್ಯಕ್ರಮದ ನಂತರ ರಾಜವಿದ್ಯಾ - ಜ್ಞಾನಯಜ್ಞ ಎಂಬ ನೃತ್ಯ ರೂಪಕ ಪ್ರದರ್ಶನಗೊಳ್ಳಲಿದೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ವಿವಿಧ ತಾಲೂಕು ಕೇಂದ್ರಗಳಿಂದ ಹಾಗೂ ವಿಜಯಪುರದ ನಗರದ ಪ್ರಮುಖ ಕೇಂದ್ರಗಳಿಂದ ಅಂದು ಜನರಿಗೆ ಪ್ರತ್ಯೇಕ ಬಸ್ ವ್ಯವಸ್ಥೆ ಇರಲಿದೆ ಎಂದು ತಿಳಿಸಿದರು.
ಗಂಗಾಧರೇಶ್ವರ ಸರಸ್ವತಿ ಮಹಾಸ್ವಾಮಿ ನೇತೃತ್ವದಲ್ಲಿ ಜಿಲ್ಲೆಯಲ್ಲಿ ಇದುವರೆಗೆ ಭಗವದ್ಗೀತೆ ಮತ್ತು ಆಯುರ್ವೇದ ಎಂಬ ಕಾರ್ಯಕ್ರಮ, ಭಗವದ್ಗೀತೆ ಮತ್ತು ಸಾಮರಸ್ಯ ಎಂಬ ಒಂದು ದಿನದ ಕಾರ್ಯಾಗಾರ, ಜಿಲ್ಲಾ ನ್ಯಾಯಾಲಯದಲ್ಲಿ ಭಗವದ್ಗೀತೆ ಮತ್ತು ಕಾನೂನು ಎಂಬ ವಿಚಾರ ಸಂಕಿರಣ, ಜಿಲ್ಲಾ ಕೇಂದ್ರ ಕಾರಾಗೃಹದಲ್ಲಿ ಬಂಧಿತರಾಗಿರುವವರಿಗೆ ಒಂದು ವಾರಗಳ ಕಾಲ ಭಗವದ್ಗೀತೆಯನ್ನು ಕಲಿಸಲಾಗಿದೆ. ಕೊನೆಯ ದಿನ ಸ್ವಾಮೀಜಿಗಳೇ ಪ್ರವಚನ ನೀಡಿ, ಜೈಲಿನ ಬಂಧಿಗಳು, ಸಿಬ್ಬಂದಿಗೆ ಪುಸ್ತಕ ವಿತರಣೆ ಮಾಡಿದ್ದಾರೆ. ಜತೆಗೆ ಹಿಂದುಳಿದವರ ವಸತಿ ಪ್ರದೇಶಗಳಲ್ಲಿ ಭಗವದ್ಗೀತೆಯ ಜಾಗೃತಿ ಪಾದಯಾತ್ರೆ ಮತ್ತು ಮನೆ ಮನೆಗಳಿಗೆ ಭಗವದ್ಗೀತೆಯ ಪುಸ್ತಕಗಳನ್ನು ವಿತರಿಸುವ ಕಾರ್ಯಕ್ರಮ ಜರುಗಿದೆ ಎಂದು ವಿವರಿಸಿದರು.
ಸಮಿತಿಯ ಜಿಲ್ಲಾಧ್ಯಕ್ಷ ಉಮೇಶ ಕಾರಜೋಳ, ಪಾಲಿಕೆ ಸದಸ್ಯರಾದ ರಾಹುಲ ಜಾಧವ, ರಾಜಶೇಖರ ಮಗಿಮಠ, ಪ್ರೇಮಾನಂದ ಬಿರಾದಾರ, ಮುಖಂಡರಾದ ಶ್ರೀಹರಿ ಗೊಳಸಂಗಿ, ಸಂಗನಗೌಡ ಪಾಟೀಲ, ಚಂದ್ರಶೇಖರ ಕವಟಗಿ, ವಿನೋದ ಮಣೂರ, ಮಹೇಶ ದೇಶಪಾಂಡೆ, ವಿಜಯ ಜೋಶಿ ಮತ್ತಿತರರಿದ್ದರು.