ಮುದ್ದೇಬಿಹಾಳ ತಾಲೂಕಿನ ಹಡಲಗೇರಿಯಲ್ಲಿ ಭಗವದ್ಗೀತೆ, ಸಂತ ಕನಕದಾಸರ ಜಯಂತಿ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿ ಅಪ್ಸರಾ ಅವಟಿಯನ್ನು ಸನ್ಮಾನಿಸಲಾಯಿತು. ರಾಮಚಂದ್ರ ಹೆಗಡೆ, ಪ್ರಾಣೇಶ ಜೋಶಿ, ಸಿದ್ದಣ್ಣ ಕುಂಟೋಜಿ, ಎಚ್.ಬಿ.ಪಾಟೀಲ, ಎಸ್.ಎಚ್.ಮುದ್ನಾಳ ಇತರರಿದ್ದರು.  
ಜಿಲ್ಲೆ

ಭಗವದ್ಗೀತೆ ಮಹತ್ವ ತಿಳಿಸಿದ ಅಪ್ಸರಾ ಅವಟಿಗೆ ಸನ್ಮಾನ

ಮುದ್ದೇಬಿಹಾಳ: ಎಂಜಿಎಂಕೆ ಪ್ರೌಢಶಾಲೆ ವಿದ್ಯಾರ್ಥಿನಿ, ಮುಸ್ಲಿಂ ಸಮುದಾಯಕ್ಕೆ ಸೇರಿದ ಅಪ್ಸರಾ ಅವಟಿ ಭಗವದ್ಗೀತೆ ಮಹತ್ವ, ಪಠ್ಯಪುಸ್ತಕದಲ್ಲಿ ಮಾನವೀಯ, ಮೌಲ್ಯಾಧಾರಿತ ಪಠ್ಯ ಅಳವಡಿಕೆ ಕುರಿತು ಮೌಲ್ಯಾಧಾರಿತ ಮಾತುಗಳನ್ನಾಡಿ ಸಂಘಟಕರಿಂದ ಸನ್ಮಾನಿಸಿಕೊಂಡು ಸಮಾಜಕ್ಕೆ ಮಾದರಿಯಾದ ಘಟನೆ ಮುದ್ದೇಬಿಹಾಳ ತಾಲೂಕಿನ ಹಡಲಗೇರಿ ಗ್ರಾಮದ ಬೀರಲಿಂಗೇಶ್ವರ ದೇವಸ್ಥಾನದಲ್ಲಿ ಭಗವದ್ಗೀತಾ ಅಭಿಯಾನ ಸಮಿತಿ ಏರ್ಪಡಿಸಿದ್ದ ಭಗವದ್ಗೀತೆ ಮತ್ತು ಸಂತ ಕನಕದಾಸ ಜಯಂತಿ ಕಾರ್ಯಕ್ರಮದಲ್ಲಿ ನಡೆಯಿತು.

ಜಾತಿಗಿಂತ ನೀತಿ ಪ್ರಧಾನವಾದುದು, ಮಗುವಿಗೆ ಬುದ್ಧಿ ಬಲಿಯುವ ಹಂತದಲ್ಲೇ ಸಾಮರಸ್ಯದ ಬದುಕು ಕಲಿಸಿಕೊಡಬೇಕು. ಭಗವದ್ಗೀತೆಯಲ್ಲಿನ ಉತ್ತಮ ಅಂಶಗಳನ್ನು ಎಲ್ಲರೂ ಅನುಸರಿಸುವಂತಾಗಬೇಕು. ಭಗವದ್ಗೀತೆ ಅಭಿಯಾನ ಜನರಲ್ಲಿ ಸಾಮರಸ್ಯ, ದೇಶದ ಸಮಗ್ರತೆ ಬೆಳೆಸುವಂತಿದೆ. ಪಠ್ಯಕ್ರಮದಲ್ಲಿ, ಪಠ್ಯಪುಸ್ತಕದ ರಚನೆಯಲ್ಲಿ ಮಾನವೀಯ ಮತ್ತು ಮೌಲ್ಯಾಧಾರಿತ ಶಿಕ್ಷಣಕ್ಕೆ ಒತ್ತು ಕೊಡಬೇಕು. ಶಾಂತಿಯುತ ಸಹಬಾಳ್ವೆಯ ದೇಶ ನಿರ್ಮಾಣದ ಉದ್ದೇಶ ಎತ್ತಿ ಹಿಡಿಯಲು ಸ್ವಾಮೀಜಿ ಅವರು ಅಭಿಯಾನ ಪ್ರಾರಂಭಿಸಿರುವುದು ಹೆಚ್ಚು ಪ್ರಸ್ತುತವಾಗಿದೆ ಎಂದು ಪ್ರಬುದ್ಧ ಭಾಷಣ ಮಾಡಿ ಗಮನ ಸೆಳೆದದ್ದು ವಿಶೇಷವಾಗಿತ್ತು.

ಸುಜ್ಞಾನ ಪಬ್ಲಿಕ್ ಶಾಲೆಯ ಅಧ್ಯಕ್ಷ ಪ್ರಾಣೇಶ ಜೋಶಿ, ಗ್ರಾಮದ ಹಿರಿಯರಾದ ಸಿದ್ದಣ್ಣ ಕುಂಟೋಜಿ, ಅಧ್ಯಕ್ಷತೆ ವಹಿಸಿದ್ದ ಮುಖ್ಯಶಿಕ್ಷಕ ಎಚ್.ಬಿ.ಪಾಟೀಲ, ನಿವೃತ್ತ ಶಿಕ್ಷಕ ಎಸ್.ಎಚ್.ಮುದ್ನಾಳ ಅವರು ಭಗವದ್ಗೀತೆ, ಸಂತ ಕನಕದಾಸರ ಕುರಿತು ಮಾತನಾಡಿದರು. ಅಭಿಯಾನ ಸಂಚಾಲಕ ರಾಮಚಂದ್ರ ಹೆಗಡೆ, ಎಂ.ಬಿ.ಪಾಟೀಲ, ಎಸ್.ಜಿ.ಹರಿಂದ್ರಾಳ, ನಾಗರಾಜ ಕುಲಕರ್ಣಿ, ಎ.ಕೆ.ಪಡೇಕನೂರ, ಎಸ್.ಎಸ್.ಹೆಬ್ಬಾರ, ವಿಠ್ಠಲ ಕಿಲಾರಟ್ಟಿ, ಬಿ.ಎಸ್.ಬಿರಾದಾರ, ಭೀಮಣ್ಣ ಪಡೇಕನೂರ, ಸಂಗಣ್ಣ ಮುದ್ನಾಳ, ಎಸ್.ವೈ.ಹರಿಂದ್ರಾಳ ಇದ್ದರು. ಬಿಆರ್‌ಪಿ ಎಂ.ಎ.ತಳ್ಳಿಕೇರಿ ಸ್ವಾಗತಿಸಿದರು. ಪ್ರಶಿಕ್ಷಕಿ ಪ್ರಭಾ ಹೆಬ್ಬಾರ ಗೀತೆಯ ಸಾಮೂಹಿಕ ಪಠಣ ನೆರವೇರಿಸಿದರು. ವಿದ್ಯಾರ್ಥಿ ಅಭಿರಾಮ ಹೆಗಡೆ ಮಂಗಲ ಗೀತೆಯೊಂದಿಗೆ ವಂದಿಸಿದರು.