ಹುಬ್ಬಳ್ಳಿ: ಭಗವದ್ಗೀತಾ ಅಭಿಯಾನದ ಮಹಾಸಮರ್ಪಣೆ ಕಾರ್ಯಕ್ರಮ ವಿಜಯಪುರ ಜಿಲ್ಲೆಯಲ್ಲಿ ಡಿ. 14ರಂದು ನೆರವೇರಲಿದೆ. ಈ ಕಾರ್ಯಕ್ರಮದಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ಮೂಲಕ ಭಗವಂತನ ಕೃಪೆಗೆ ಪಾತ್ರರಾಗಬೇಕು ಎಂದು ಸೋಂದಾ ಸ್ವರ್ಣವಲ್ಲೀ ಸಂಸ್ಥಾನ ಮಠದ ಶ್ರೀಮಜ್ಜಗದ್ಗುರು ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಕರೆ ನೀಡಿದರು.
ಇಲ್ಲಿಯ ಗೋಕುಲ ರಸ್ತೆಯ ಹವ್ಯಕ ಭವನದಲ್ಲಿ ಸೋಮವಾರ ಶ್ರೀಮದ್ ಭಗವದ್ಗೀತೆಯ 9ನೇ ಅಧ್ಯಾಯದ ಅಭಿಯಾನಕ್ಕೆ ಚಾಲನೆ ನೀಡಿ ಅವರು ಆಶೀರ್ವಚನ ನೀಡಿದರು.
ಹುಬ್ಬಳ್ಳಿಯಿಂದಲೇ ಆರಂಭವಾಗಿರುವ ಶ್ರೀಮದ್ ಭಗವದ್ಗೀತಾ ಅಭಿಯಾನ, ಹೂಬಳ್ಳಿಯಂತೆ ರಾಜ್ಯಾದ್ಯಂತ ವಿಸ್ತರಿಸಿದೆ. ಭಗವದ್ಗೀತೆಯ ಕಂಪನ್ನು ನಾಡಿಗೆ ಹರಡುತ್ತಿದೆ. ಕಾರ್ತಿಕ ಮಾಸದಲ್ಲಿ ಪಠಿಸುವ ಮಂತ್ರ, ಮಾಡುವ ಜಪ ಹಾಗೂ ಸಮರ್ಪಿಸುವ ಪೂಜೆ-ಪುನಸ್ಕಾರಗಳು ದ್ವಿಗುಣ ಫಲ ನೀಡುತ್ತವೆ. ಹೀಗಾಗಿಯೇ ಸದ್ಯ ವಿಜಯಪುರ ಜಿಲ್ಲೆಯನ್ನು ಕೇಂದ್ರೀಕರಿಸಿಕೊಂಡು ಗೀತಾಭಿಯಾನ ಮಾಡುತ್ತಿದ್ದೇವೆ ಎಂದು ವಿವರಿಸಿದರು.
ಕೋವಿಡ್ ಪರಿಸ್ಥಿತಿ ಬಳಿಕ ಜನರ ಮಾನಸಿಕ ಸ್ಥಿತಿ ದಿನದಿಂದ ದಿನಕ್ಕೆ ಹದಗೆಡುತ್ತಿದೆ. ಸಣ್ಣ ಕಾಯಿಲೆಗಳಿಗೂ ಹೆದರುವಂತಾಗಿದೆ. ಅನೇಕರು ಖಿನ್ನತೆಗೆ ಒಳಗಾಗಿ ತಮ್ಮ ಜೀವನವನ್ನೇ ಹಾಳು ಮಾಡಿಕೊಳ್ಳುತ್ತಿದ್ದಾರೆ. ಅಂಥವರಿಗೆ ಮಾನಸಿಕ ಧೈರ್ಯ ತುಂಬುವಲ್ಲಿ ಭಗವದ್ಗೀತೆ ಸಹಕಾರಿಯಾಗಲಿದೆ. ಭಗವದ್ಗೀತೆಯನ್ನು ಕೇಳುವುದು, ಪಠಿಸುವುದು ಮತ್ತು ಅದರ ಸಾರವನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದರಿಂದ ಮನಸ್ಸು ಪ್ರಫುಲ್ಲಗೊಂಡು, ಜೀವನವು ಧೈರ್ಯ, ಚೈತನ್ಯದಿಂದ ಕೂಡಿರಲಿದೆ ಎಂದರು.
ದಿನ ಕಳೆದಂತೆ ಅಧೈರ್ಯ, ಚಿಂತೆ ಎಂಬ ಕಸ ಮಸ್ಸಿನಲ್ಲಿ ತುಂಬಿಕೊಳ್ಳುತ್ತದೆ. ಅದನ್ನು ನಿತ್ಯವೂ ಜಪ, ತಪ, ಪೂಜೆ-ಪುನಸ್ಕಾರಗಳಿಂದ ಹೊರ ಹಾಕಬೇಕು. ಮನದ ಕಸವನ್ನು ಹೊರ ಹಾಕುವುದರಿಂದ ಆಯಸ್ಸು ಹೆಚ್ಚಾಗಿ, ಸಾಧನೆಗೆ ಪ್ರೇರಣೆಯಾಗುತ್ತದೆ. ಭಗವದ್ಗೀತೆಯನ್ನು ಪಠಿಸುವುದಿರಲಿ, ಅದನ್ನು ಕೇಳದ ದೊಡ್ಡ ಸಮುದಾಯವೇ ಇದೆ. ಆ ಸಮುದಾಯಕ್ಕೆ ಶ್ರೀಮದ್ ಭಗವದ್ಗೀತೆಯ ಉಪಾಸನೆ ಮಾಡ ಹಚ್ಚುವುದೇ ಭಗವದ್ಗೀತಾ ಅಭಿಯಾನದ ಮುಖ್ಯ ಉದ್ದೇಶ ಎಂದರು.
ಸುದರ್ಶನ ಹೇಮಾದ್ರಿ, ಶ್ರೀಕಾಂತ ಹೆಗಡೆ, ವಿ.ಎಂ. ಭಟ್ಟ, ಎ.ಸಿ. ಗೋಪಾಲ, ಶಾಂತಾರಾಮ ಭಟ್ಟ, ಗೋಪಾಲಕೃಷ್ಣ ಹೆಗಡೆ, ವೀಣಾ ಹೆಗಡೆ, ಅರುಣಕುಮಾರ ಹಬ್ಬು, ಜಿ.ಆರ್. ಭಟ್ಟ, ಮನೋಹರ ಪರ್ವತಿ ಇತರರು ಇದ್ದರು.