ಜಿಲ್ಲೆ

ಕಮಿಷನ್ ಹಗರಣ ಲೋಕಾಯುಕ್ತಕ್ಕೆ ಆಗ್ರಹ

reportermys

ಅಜ್ಜಮಾಡ ರಮೇಶ್ ಕುಟ್ಟಪ್ಪ ಭಾಗಮಂಡಲ
ಕೊಡಗು ಪ್ರಗತಿಪರ ಜೇನು ಕೃಷಿಕರ ಸಹಕಾರ ಸಂಘದ ಜೇನು ಖರೀದಿಯಲ್ಲಿ ನಡೆದಿರುವ ಕಮಿಷನ್ ಹಗರಣ ಕರ್ನಾಟಕ ಲೋಕಾಯುಕ್ತ ತನಿಖೆಗೆ ಒಪ್ಪಿಸುವಂತೆ ಸದಸ್ಯರು ಆಗ್ರಹಿಸಿದರು.

ಭಾಗಮಂಡಲ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ಭಾನುವಾರ ಜೇನು ಕೃಷಿಕರ ಸಹಕಾರ ಸಂಘದ ಅಧ್ಯಕ್ಷ ಹೊಸೂರು ಸತೀಶ್‌ಕುಮಾರ್ ಜೋಯಪ್ಪ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಜೇನು ಖರೀದಿ ಅವ್ಯವಹಾರದ ಕುರಿತು ಚರ್ಚೆ ನಡೆಯಿತು.

ಜೇನು ಖರೀದಿ ಅವ್ಯವಹಾರಕ್ಕೆ ಸಂಬಂಧಿಸಿದ್ದಂತೆ ಠರಾವು ಮಂಡಿಸಿದ ನಿವೃತ್ತ ಜೇನು ಕೃಷಿ ಅಭಿವೃದ್ಧಿ ಅಧಿಕಾರಿ ಬಾರಿಕೆ ವೆಂಕಟರಮಣ, ಕೊಡಗು ಜಿಲ್ಲಾ ಪಂಚಾಯಿತಿ ಭಾಗಮಂಡಲ ಕ್ಷೇತ್ರದ ಮಾಜಿ ಸದಸ್ಯ ಪಿ.ಎಂ. ರಾಜೀವ್ ವಿಷಯ ಪ್ರಸ್ತಾಪಿಸಿದರು. ಇದಕ್ಕೆ ಬೆಂಬಲವಾಗಿ ಬಿಜೆಪಿ ಹಿರಿಯ ಮುಖಂಡ ಕೋಡಿ ಪೊನ್ನಪ್ಪ, ಭಾಗಮಂಡಲ ಬಿಜೆಪಿ ಸ್ಥಾನೀಯ ಸಮಿತಿ ಮಾಜಿ ಅಧ್ಯಕ್ಷ ಅಮೆ ಬಾಲಕೃಷ್ಣ ಮತ್ತಿತರರು ಮಾತನಾಡಿದರು.

ಕೊಡಗಿನ ಹಿರಿಯರು ದೂರದೃಷ್ಟಿಯಿಟ್ಟುಕೊಂಡು ಭಾಗಮಂಡಲದಲ್ಲಿ ಕೊಡಗು ಪ್ರಗತಿಪರ ಜೇನು ಕೃಷಿಕರ ಸಹಕಾರ ಸಂಘ ಸ್ಥಾಪಿಸಿದ್ದಾರೆ. ಜೇನು ಕೃಷಿಕರಿಗೆ ಹೆಚ್ಚು ಪ್ರಯೋಜನ ತಂದುಕೊಟ್ಟಿರುವ ಸಂಸ್ಥೆ ಮೇಲೆ ಎಲ್ಲರಿಗೂ ಗೌರವ ಇದೆ. ಆದರೆ, ಜೇನು ಖರೀದಿಯಲ್ಲಿ ಅವ್ಯವಹಾರ ನಡೆದಿರುವ ಸಂಸ್ಥೆಗೆ ಕೆಟ್ಟು ಹೆಸರು ತಂದಿದೆ ಎಂದು ಅಸಮಾಧಾನ ವ್ಯಕ್ತ ಪಡಿಸಿದರು.

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ಎಂ.ಎಚ್. ದೇವರಾಜ್ ಮಾಲೀಕತ್ವದ ಶ್ರೀ ದುರ್ಗಾಶಕ್ತಿ ಇಂಡಸ್ಟ್ರೀಸ್ ಸಂಸ್ಥೆಯಿಂದ ಕಚ್ಛಾ ಜೇನು ಪೂರೈಕೆ ಸಂದರ್ಭ ಈ ಹಿಂದೆ ಕಾರ್ಯದರ್ಶಿಯಾಗಿದ್ದ ಅಶೋಕ್ ಕಮಿಷನ್ ಪಡೆದುಕೊಳ್ಳುತ್ತಿದ್ದ ಬಗ್ಗೆ ಗಂಭೀರ ದೂರು ವ್ಯಕ್ತವಾಗಿದೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಲು ಕರ್ನಾಟಕ ಲೋಕಾಯುಕ್ತಕ್ಕೆ ಒಪ್ಪಿಸಬೇಕೆಂದು ಪಟ್ಟುಹಿಡಿದರು.

ಜೇನು ಖರೀದಿ ಅವ್ಯವಹಾರವನ್ನು ಸಂಘದ ನಿರ್ದೇಶಕರಾಗಿರುವ ಕೋಡಿ ಮೋಟಯ್ಯ ಬೆಳಕಿಗೆ ತಂದಿದ್ದಾರೆ. ಅವರು ಸಭೆಯಲ್ಲಿ ಉತ್ತರ ನೀಡಬೇಕೆಂದು ಸದಸ್ಯರು ಆಗ್ರಹಿಸಿದರು. ಖರೀದಿ ವಿಷಯಕ್ಕೆ ಸಂಬಂಧಿಸಿದ್ದಂತೆ ಮಾತನಾಡಲು ಕೋಡಿ ಮೋಟಯ್ಯ ಎದ್ದು ನಿಲ್ಲುತ್ತಿದ್ದಂತೆ ಅಧ್ಯಕ್ಷರು ಮಾತನಾಡಲು ಅವಕಾಶ ನೀಡಲಿಲ್ಲ.

ನಮ್ಮ ಸಂಸ್ಥೆಯಲ್ಲಿನ ವ್ಯವಹಾರ ಎಲ್ಲಾ ಪಕ್ಕಾ ಇದೆ. ಜೇನು ಖರೀದಿ, ಹಣ ಪಾವತಿಗೆ ಸಂಬಂಧಿಸಿದ್ದಂತೆ ಪ್ರತಿಯೊಂದು ದಾಖಲಾತಿಯೂ ಸಮರ್ಪಕವಾಗಿಯೇ ಇದೆ. ಸಂಸ್ಥೆಯಿಂದ ಹೊರಗೆ ನಡೆದಿದೆ ಎನ್ನಲಾಗಿರುವ ಕಮಿಷನ್ ವ್ಯವಹಾರಕ್ಕೂ ನಮಗೂ ಸಂಬಂಧವಿಲ್ಲ ಎಂದು ಅಧ್ಯಕ್ಷ ಹೊಸೂರು ಸತೀಶ್‌ಕುಮಾರ್ ಜೋಯಪ್ಪ ಸ್ಪಷ್ಟ ಪಡಿಸಿದರು.

ಕರ್ನಾಟಕ ಲೋಕಾಯುಕ್ತ ತನಿಖೆಗೆ ಒಪ್ಪಿಸುವಂತೆ ಇಂದಿನ ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳುವ ಅಗತ್ಯತೆ ಇಲ್ಲ ಎಂದು ಮಾಜಿ ನಿರ್ದೇಶಕರಾದ ಜೆ.ಎಸ್. ನಂಜುಂಡಪ್ಪ ಹೇಳಿದರು. ಇದಕ್ಕೆ ಪೂರಕವಾಗಿ ಕೆಲವು ಸದಸ್ಯರು ಬೆಂಬಲ ವ್ಯಕ್ತ ಪಡಿಸಿದರು. ವಾರ್ಷಿಕ ಮಹಾಸಭೆಯಲ್ಲಿ ಕರ್ನಾಟಕ ಲೋಕಾಯುಕ್ತಕ್ಕೆ ತನಿಖೆಗೆ ಒಪ್ಪಿಸಲು ನಿರ್ಣಯ ತೆಗೆದುಕೊಳ್ಳಲು ಸಾಧ್ಯವಿಲ್ಲ. ಅವ್ಯವಹಾರ ನಡೆದಿರುವ ಅನುಮಾನ ವ್ಯಕ್ತ ಪಡಿಸುತ್ತಿರುವವರು ನೇರೌಆಗಿ ದೂರು ನೀಡಬಹುದೆಂದು ಅಧ್ಯಕ್ಷರು ಹೇಳಿದರು.

**
ಜೇನು ಖರೀದಿಗೆ ಸಂಬಂಧಿಸಿದ್ದಂತೆ ಮಾಜಿ ಕಾರ್ಯದರ್ಶಿ ಅಶೋಕ್ ಮೇಲೆ ಬಂದಿರುವ ಆರೋಪದ ಬಗ್ಗೆ ಸತ್ಯಾಂಶ ಅರಿತುಕೊಳ್ಳಲು ಲೋಕಾಯುಕ್ತ ತನಿಖೆಗೆ ಒಪ್ಪಿಸಲು ಮಹಾಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಬೇಕಾಗಿತ್ತು. ಠರಾವು ಮಂಡಿಸಿದವರೇ ಲೋಕಾಯುಕ್ತಕ್ಕೆ ದೂರು ನೀಡುವಂತೆ ಹೇಳಿದ್ದರು. ಈ ಬಗ್ಗೆ ಶೀಘ್ರ ನಿರ್ಧಾರ ತೆಗೆದುಕೊಳ್ಳಲಾಗುವುದು. ಜೇನು ಗ್ರಾಹಕರಿಗೂ ಅನ್ಯಾಯವಾಗಿದೆ. ಬಾರಿಕೆ ವೆಂಕಟರಮಣ್ಣ, ನಿವೃತ್ತ ಜೇನು ಕೃಷಿ ಅಭಿವೃದ್ಧಿ ಅಧಿಕಾರಿ, ಭಾಗಮಂಡಲ.

**
ಹಿರಿಯರು ಕಟ್ಟಿ ಬೆಳೆಸಿದ ಸಂಸ್ಥೆ ಮೇಲೆ ಕೆಟ್ಟ ಹೆಸರು ಬಂದಿದೆ. ಪುಣ್ಯಭೂಮಿ ಭಾಗಮಂಡಲ, ಕೊಡಗಿಗೆ ಅಗೌರವವಾಗಿದೆ. ಎಂ.ಎಚ್. ದೇವರಾಜ್ ಬರೆದಿರುವ ಎರಡು ಪತ್ರದಲ್ಲಿ ಮಹತ್ವದ ವಿಚಾರ ಬಹಿರಂಗ ಪಡಿಸಿದ್ದಾರೆ. ಮಡಿಕೇರಿಯಲ್ಲಿ ಅಶೋಕ್ ಹಾಗೂ ಸಂಸ್ಥೆ ಪ್ರಮುಖರೊಬ್ಬರನ್ನು ಭೇಟಿ ಮಾಡಿದ್ದ ಮಾಹಿತಿ ನೀಡಿದ್ದಾರೆ. ಕರ್ನಾಟಕ ಲೋಕಾಯುಕ್ತಕ್ಕೆ ದೂರು ನೀಡಲು ಶೀಘ್ರ ನಿರ್ಧಾರ ತೆಗೆದುಕೊಳ್ಳ ಲಾಗುವುದು. ಕೋಡಿ ಪೊನ್ನಪ್ಪ, ಬಿಜೆಪಿ ಹಿರಿಯ ಮುಖಂಡರು, ಕರಿಕೆ.

**
ಕೊಡಗು ಪ್ರಗತಿಪರ ಜೇನು ಕೃಷಿಕರ ಸಹಕಾರ ಸಂಘದಿಂದ ಕರ್ನಾಟಕ ಲೋಕಾಯುಕ್ತ ತನಿಖೆಗೆ ಒಪ್ಪಿಸಲು ನಿರ್ಣಯ ತೆಗೆದುಕೊಳ್ಳಬೇಕಾ ಗಿತ್ತು. ಠರಾವು ಮಂಡಿಸಿದ ನಮಗೆ ದೂರು ನೀಡುವಂತೆ ಹೇಳಿದ್ದಾರೆ. ಕಮಿಷನ್ ಅವ್ಯವಹಾರ ದಾಖಲೆ ಸಹಿತ ಬಯಲು ಮಾಡುವ ಉದ್ದೇಶದಿಂದ ಕರ್ನಾಟಕ ಲೋಕಾಯುಕ್ತಕ್ಕೆ ದೂರು ನೀಡಲಾಗುವುದು. ಪಿ.ಎಂ. ರಾಜೀವ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ, ಭಾಗಮಂಡಲ.

**
ಕೊಡಗು ಪ್ರಗತಿಪರ ಜೇನು ಕೃಷಿಕರ ಸಹಕಾರ ಸಂಘದಲ್ಲಿ ನಡೆದಿರುವ ಬಹುಕೋಟಿ ಹಗರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು. ರಾಜಕೀಯ ಪ್ರಭಾವದಿಂದ ಹಗರಣ ಮುಚ್ಚಿ ಹೋಗದ್ದಂತೆ ನೋಡಿಕೊಳ್ಳಬೇಕು. ಕೊಡಗಿನ ಜೇನು ಖರೀದಿಸುತ್ತಿರುವ ಗ್ರಾಹಕರಿಗೂ ಮೋಸ ಆಗಬಾರದು. ನಂದಿನೆರವಂಡ ಯು. ನಾಚಪ್ಪ ಕೊಡವ, ಅಧ್ಯಕ್ಷರು, ಕೊಡವ ನ್ಯಾಷನಲ್ ಕೌನ್ಸಿಲ್.