ಭಾಗಮಂಡಲ:
೨೦೧೯ರಲ್ಲಿ ಭಾಗಮಂಡಲ ಸಮೀಪದ ಕೋರಂಗಲದಲ್ಲಿ ಭಾರಿ ಮಳೆಗೆ ಭೂಕುಸಿತದಿಂದಾಗಿ ಮೃತರಾದ ಬೋಳನ ಬಾಲಕೃಷ್ಣ ಮತ್ತು ಯಮುನಾ ದಂಪತಿ ಪುತ್ರ ಬಿ.ಬಿ. ನಿತಿನ್ ಅವರ ವ್ಯಾಸಂಗಕ್ಕೆ ಭಾಗಮಂಡಲ ನಾಡು ಯುವ ಒಕ್ಕೂಟದ ಪ್ರಾಯೋಜಕತ್ವದಲ್ಲಿ ನೆರವು ಕಲ್ಪಿಸಲಾಗಿದೆ. ಭಾಗಮಂಡಲದ ಕಾವೇರಿ ಪದವಿಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಓದುತ್ತಿರುವ ನಿತಿನ್ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದ್ದು ಅವರ ದ್ವಿತೀಯ ಪಿಯುಸಿ ಕಾಲೇಜು ಶುಲ್ಕವನ್ನು ಭರಿಸಿ ಪುಸ್ತಕಗಳನ್ನು ಭಾಗಮಂಡಲ ನಾಡು ಯುವ ಒಕ್ಕೂಟದ ಪ್ರಾಯೋಜಕತ್ವದಲ್ಲಿ ವಿತರಿಸಲಾಯಿತು.
ಕಾಲೇಜು ಪ್ರಾಂಶುಪಾಲ ಕುಂದಲಪಾಡಿ ದಿವಾಕರ್ ಸಮ್ಮುಖದಲ್ಲಿ ದಾನಿ ಮುಕ್ಕಾಟಿ ಲಲಿತಾ ಕರುಣಾಕರ ವಿದ್ಯಾರ್ಥಿಗೆ ನೆರವು ಹಸ್ತಾಂತರಿಸಿದರು. ಈ ಸಂದರ್ಭ ಮಾತನಾಡಿದ ದಿವಾಕರ್, ಶಿಕ್ಷಣ ಹಾಗೂ ಕ್ರೀಡಾ ಕ್ಷೇತ್ರಕ್ಕೆ ಭಾಗಮಂಡಲ ನಾಡು ಯುವ ಒಕ್ಕೂಟ ಸಹಕಾರ ನೀಡುತ್ತಿರುವುದು ಶ್ಲಾಘನೀಯ ಎಂದು ಹೇಳಿ ಒಕ್ಕೂಟದ ಉತ್ತಮ ಕಾರ್ಯಕ್ಕೆ ಸಂತಸ ವ್ಯಕ್ತಪಡಿಸಿ ಧನ್ಯವಾದ ಸಮರ್ಪಿಸಿದರು. ಈ ಸಂದರ್ಭ ಭಾಗಮಂಡಲ ನಾಡು ಗೌಡ ಯುವ ಒಕ್ಕೂಟದ ಅಧ್ಯಕ್ಷ ಕುದುಕುಳಿ ಕಿಶೋರ್, ಕಾರ್ಯದರ್ಶಿ ನಿಡ್ಯಮಲೆ ಚಲನ್, ನಿರ್ದೇಶಕರಾದ ಬಾರಿಕೆ ಶೈಲಜ, ಕುಯ್ಯಮುಡಿ ಸುನಿಲ್, ನಂಗಾರು ಪುನೀತ್, ಕೋಳಿಬೈಲು ಸುರೇಂದ್ರ, ಉಪನ್ಯಾಸಕರಾದ ಪೂಣಚ್ಚ, ಹನುಮಂತ ನಾಯಕ್ ಇದ್ದರು.