ಜಿಲ್ಲೆ

ಭದ್ರಾವತಿಯಲ್ಲಿ ಹಾವಿಗೆ ಮುತ್ತಿಕ್ಕಲು ಹೋಗಿ ಕಚ್ಚಿಸಿಕೊಂಡ !

ಶಿವಮೊಗ್ಗ: ಭದ್ರಾವತಿಯ ಮದುವೆ ಮನೆಯಲ್ಲಿ ಸೆರೆಹಿಡಿದಿದ್ದ ನಾಗರಹಾವಿನ ಎಡೆಗೆ ಮುತ್ತಿಕ್ಕಲು ಹೋದ ಯುವಕನೊಬ್ಬ ಅದೇ ಹಾವಿನಿಂದ ತುಟಿಗೆ ಕಚ್ಚಿಸಿಕೊಂಡಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಭದ್ರಾವತಿಯ ಅಲೆಕ್ಸ್ ನಾಗರಹಾವನ್ನು ಹಿಡಿದು ಮುತ್ತಿಡುವಾಗ ಹಾವು ಏಕಾಏಕಿ ತಿರುಗಿ ಆತನ ತುಟಿಗೆ ಕಚ್ಚಿರುವ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.

ಭದ್ರಾವತಿಯ ಬೊಮ್ಮನಕಟ್ಟೆಯ ಮದುವೆ ಮನೆಯಲ್ಲಿ ಒಟ್ಟಿಗೆ ಎರಡು ನಾಗರ ಹಾವು ಕಾಣಿಸಿಕೊಂಡಿತ್ತು. ಅಲೆಕ್ಸ್ ಹಾಗೂ ರೋನಿ ಅವರು ಹಾವುಗಳನ್ನು ಹಿಡಿದು ಸಂರಕ್ಷಣೆ ಮಾಡಿದ್ದರು. ಈ ವೇಳೆ ಒಂದು ಹಾವಿಗೆ ಗಾಯವಾಗಿತ್ತು. ಸೆರೆ ಹಿಡಿದಿದ್ದ ಹಾವುಗಳನ್ನು ಪ್ರತ್ಯೇಕ ಬಾಟಲಿಯಲ್ಲಿ ಹಾಕಿದ್ದರಿಂದ ಯಾವ ಹಾವಿಗೆ ಗಾಯವಾಗಿತ್ತು ಎಂಬುದು ತಿಳಿದಿರಲಿಲ್ಲ.

ಹಾಗಾಗಿ ಅಲೆಕ್ಸ್ ಮೈದಾನದಲ್ಲಿ ಬಾಟಲಿಯಲ್ಲಿದ್ದ ಒಂದು ಹಾವನ್ನು ಹೊರಗೆ ಬಿಟ್ಟಿದ್ದ. ಈ ವೇಳೆ ನಾಗರಹಾವು ಎಡೆಎತ್ತಿ ಬುಸುಗುಟ್ಟುತ್ತಿತ್ತು. ಸ್ವಲ್ಪ ಹೊತ್ತು ಹಾವಿನ ಜತೆ ಆಟ ಕೂಡ ಆಡಿದ್ದ. ಈ ವೇಳೆ ಹಾವಿನ ಎಡೆಗೆ ಮುತ್ತಿಕ್ಕಲು ಹೋದಾಗ ಹಾವು ತಿರುಗಿ ಕಚ್ಚಿತ್ತು. ಹಾವು ಕಚ್ಚಿದರೂ ಸುರಕ್ಷಿತವಾಗಿ ಎರಡೂ ಹಾವುಗಳನ್ನು ಕಾಡಿಗೆ ಬಿಟ್ಟು ನಂತರ ಭದ್ರಾವತಿಯ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದ. ಬಳಿಕ ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಾಗಿದ್ದು, ಸದ್ಯ ಚಿಕಿತ್ಸೆ ಪಡೆದು ಅಲೆಕ್ಸ್ ಮನೆಗೆ ಮರಳಿದ್ದಾನೆ.