ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಸಚಿವ ರಮೇಶ ಜಾರಕಿಹೊಳಿ ಮಾತನಾಡಿದರು. ಮಹಾಂತೇಶ ಕವಟಗಿಮಠ, ರಮೇಶ ದೇಶಪಾಂಡೆ, ಸಂಜಯ ಪಾಟೀಲ ಇತರರಿದ್ದರು. 
ಜಿಲ್ಲೆ

‘ಭದ್ರಾ’ ರಾಷ್ಟ್ರೀಯ ಯೋಜನೆಯನ್ನಾಗಿಸಲು ಸಿದ್ಧತೆ

ಬೆಳಗಾವಿ: ಭದ್ರಾ ಯೋಜನೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಮಾಡಲು ಈಗಾಗಲೇ ಎಲ್ಲ ಸಿದ್ಧತೆ ನಡೆಸಿದ್ದು, ಈ ಕುರಿತು ಫೆ. 21 ಹಾಗೂ ಫೆ. 22ರಂದು ದೆಹಲಿಗೆ ಭೇಟಿ ನೀಡಿ ಕೇಂದ್ರ ಸರ್ಕಾರದೊಂದಿಗೆ ಚರ್ಚೆ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಹಾಗೂ ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಹೇಳಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಷ್ಟ್ರೀಯ ಯೋಜನೆಯಾದರೆ ಶೇ. 90 ಕೇಂದ್ರ ಮತ್ತು ರಾಜ್ಯ ಸರ್ಕಾರ ಶೇ. 10 ಅನುದಾನ ನೀಡಲಿದೆ.ಕೃಷ್ಣಾ ಮೇಲ್ದಂಡೆ ಯೋಜನೆಯನ್ನೂ ರಾಷ್ಟ್ರೀಯ ಯೋಜನೆ ಮಾಡಲು ಪ್ರಯತ್ನ ಮಾಡುತ್ತಿದ್ದೇವೆ. ಹೊಸ ಯೋಜನೆಗಳಿಗೆ ಕೇಂದ್ರ ಶೇ.60 ಹಾಗೂ ರಾಜ್ಯ ಸರ್ಕಾರ ಶೇ.40 ಅನುದಾನ ನೀಡಲಿದೆ ಎಂದು ತಿಳಿಸಿದರು.

ತಜ್ಞರ ಸಭೆ ನಡೆಸಿ ತೀರ್ಮಾನ: ಮಹದಾಯಿ ವಿಷಯದಲ್ಲಿ ಗೋವಾ ಕ್ಯಾತೆ ತೆಗೆಯುತ್ತಿರುವ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಈಗಾಗಲೇ ನ್ಯಾಯಾಧಿಕರಣದಲ್ಲಿ ಇತ್ಯರ್ಥವಾಗಿರುವ ಪ್ರಕರಣಕ್ಕೆ ಪ್ರಧಾನಮಂತ್ರಿ ಮಧ್ಯಸ್ಥಿಕೆ ವಹಿಸುವಂತೆ ಗೋವಾದವರು ಆಗ್ರಹಿಸುತ್ತಿದ್ದಾರೆ. ಈಗಾಗಲೇ 13 ಟಿಎಂಸಿ ನೀರನ್ನೂ ಕೊಟ್ಟಿದ್ದಾರೆ. ಪ್ರಧಾನಿ ಮೋದಿ ಮಧ್ಯಸ್ಥಿಕೆ ವಹಿಸಿ ಇನ್ನೂ ಹೆಚ್ಚಿನ ನೀರು ಕೊಡುವುದಾದರೆ ಕೊಡಲಿ ಎಂದರು. ಅಂತಾರಾಜ್ಯ ವಿಷಯವಾಗಿದ್ದರಿಂದ ಕೇಂದ್ರ ಜಲ ಆಯೋಗದ (ಸಿಡಬ್ಲ್ಯುಸಿ) ಅನುಮತಿ ಬೇಕು. ಕರೊನಾ ಹಿನ್ನೆಲೆಯಲ್ಲಿ ಕೆಲಸ ವಿಳಂಬವಾಗಿದ್ದು, ಮಹದಾಯಿ ಯೋಜನೆ ಆರಂಭ ಕುರಿತು ದೆಹಲಿಯಲ್ಲಿ ತಜ್ಞರ ಸಭೆ ನಡೆಸಿ, ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.

ಕಾಮಗಾರಿ ಪೂರ್ಣಗೊಳಿಸಲು ಆದ್ಯತೆ: ಮುಂಬರುವ ಬಜೆಟ್‌ನಲ್ಲಿ ಬೆಳಗಾವಿ ಅಭಿವೃದ್ಧಿಗೆ ಯಾವೆಲ್ಲ ಯೋಜನೆಗಳನ್ನು ರೂಪಿಸಿದ್ದೀರಿ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವ ಜಾರಕಿಹೊಳಿ, ಯೋಜನೆಗಳನ್ನು ಬಜೆಟ್ ಮುಂಚೆ ಬಹಿರಂಗಪಡಿಸಲು ಸಾಧ್ಯವಿಲ್ಲ. ಯೋಜನೆಗಳ ಬಗ್ಗೆ ಮುಖ್ಯಮಂತ್ರಿ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಪ್ರಗತಿಯಲ್ಲಿರುವ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸಲು ಆದ್ಯತೆ ನೀಡಲಾಗುವುದು ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಸಚಿವ ಉಮೇಶ ಕತ್ತಿ, ವಿಧಾನ ಪರಿಷತ್ ಆಡಳಿತ ಪಕ್ಷದ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ, ರಮೇಶ ದೇಶಪಾಂಡೆ, ಸಂಜಯ ಪಾಟೀಲ, ಎಫ್.ಎಸ್. ಸಿದ್ಧನಗೌಡರ ಇತರರಿದ್ದರು.

ಹೆಬ್ಬಾಳ್ಕರ್ ಗೋಕಾಕ ವಿಧಾನಸಭೆ ಕ್ಷೇತ್ರದಲ್ಲಿ ನನ್ನ ವಿರುದ್ಧ ಸ್ಪರ್ಧಿಸುವುದಾದರೆ ಸ್ವಾಗತಿಸುತ್ತೇನೆ. ಆದರೆ, ಶಾಸಕಿ ಹತಾಶೆಯಿಂದಲೇ ಈ ರೀತಿ ಹೇಳಿಕೆ ಕೊಡುತ್ತಿದ್ದಾರೆ. ಲಕ್ಷ್ಮೀ ಹೆಬ್ಬಾಳ್ಕರ್ ಮೈಂಡ್ ಔಟ್ ಆಗಿದೆ. ಇನ್ಮುಂದೆ ಅವರನ್ನು ಬಸ್ ನಿಲ್ದಾಣದಲ್ಲಿ ಹುಡುಕಬೇಕಾಗುತ್ತದೆ. | ರಮೇಶ ಜಾರಕಿಹೊಳಿ ಜಲಸಂಪನ್ಮೂಲ ಸಚಿವ