ಜಿಲ್ಲೆ

ಬಿಜಿಎಸ್ ನರ್ಸಿಂಗ್ ಕಾಲೇಜು ಪದವಿ ಪ್ರದಾನ

ಬಿಜಿಎಸ್ ಇಂಟರ್‌ನ್ಯಾಷನಲ್ ಫೌಂಡೇಷನ್ ಫಾರ್ ಹೆಲ್ತ್ ಸೈನ್ಸ್‌ನ ಪದವಿ ಪ್ರದಾನ ಸಮಾರಂಭ ಬುಧವಾರ ಮೈಸೂರಿನ ಕುವೆಂಪುನಗರದ ಜಯಮ್ಮ ಗೋವಿಂದೇಗೌಡ ಸಭಾಂಗಣದಲ್ಲಿ ನಡೆಯಿತು. ಬಿಎಸ್‌ಸಿ ನರ್ಸಿಂಗ್‌ನ 80, ಎಂಎಸ್‌ಸಿ ನರ್ಸಿಂಗ್‌ನ 8 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು.

ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ ಎಂಎಸ್ಸಿ ನರ್ಸಿಂಗ್‌ನಲ್ಲಿ ನಿಖಿತಾ ಫ್ರಾನ್ಸಿಸ್ (ಪ್ರಥಮ), ಎಸ್. ಜ್ಯೋತಿ ಮತ್ತು ರಮೇಶ್ ನಂದ್ಗಾನ್ (ದ್ವಿತೀಯ), ಆರ್. ಅಂಜಲಿ (ತೃತೀಯ), ಬಿಎಸ್‌ಸಿ ನರ್ಸಿಂಗ್‌ನಲ್ಲಿ ತನುಷಾ (ಪ್ರಥಮ), ಮಣಿಕಂಠ (ದ್ವಿತೀಯ), ಸಜಿನಾ ಸಜಿ (ತೃತೀಯ) ಅವರನ್ನು ಗೌರವಿಸಲಾಯಿತು.

ಸೇವಾ ಮನೋಭಾವ ಅವಶ್ಯಕ

ಮೈಸೂರು ವೈದ್ಯಕೀಯ ಕಾಲೇಜಿನ ಡಾ.ಕೆ.ಆರ್. ದಾಕ್ಷಾಯಿಣಿ ಮಾತನಾಡಿ, ರೋಗಿಗಳೊಂದಿಗೆ ವೈದ್ಯರಿಗಿಂತ ಹೆಚ್ಚಿನ ಸಮಯವನ್ನು ನರ್ಸ್‌ಗಳು ಕಳೆಯುತ್ತಾರೆ. ಹಾಗಾಗಿ ರೋಗಿಗಳ ಕುರಿತು ನರ್ಸ್‌ಗಳು ಹೆಚ್ಚಿನ ಕಾಳಜಿ ತೋರಬೇಕು. ರೋಗಿಗಳಿಗೆ ಸಲ್ಲಿಸುವ ಸೇವೆಯನ್ನು ನಮಗೆ ದೊರೆತ್ತಿರುವ ಭಾಗ್ಯ ಎಂದು ಭಾವಿಸಿ. ನರ್ಸಿಂಗ್‌ಗೆ ಉತ್ತಮ ಭವಿಷ್ಯವಿದ್ದು, ದೇಶ, ವಿದೇಶದಲ್ಲಿ ಉದ್ಯೋಗಾವಕಾ ಶಗಳು ಹೆಚ್ಚು ಇವೆ. ಎಲ್ಲೇ ಉದ್ಯೋಗ ಮಾಡಿದರೂ ಸೇವಾ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.

ಕೋವಿಡ್ ಸಂದರ್ಭ ನರ್ಸ್‌ಗಳ ಸೇವೆ ಅನನ್ಯ

ಮೈಸೂರು ವಿಶ್ವ ವಿದ್ಯಾಲಯದ ಕುಲಸಚಿವೆ ವಿ.ಆರ್. ಶೈಲಜಾ ಮಾತನಾಡಿ, ಕೋವಿಡ್ ಸಂದರ್ಭದಲ್ಲಿ ರೋಗಿಗಳ ಜೀವ ಉಳಿಸಲು ನರ್ಸ್‌ಗಳು ನೀಡಿದ ಕೊಡುಗೆಗಳನ್ನು ಮರೆಯಲು ಸಾಧ್ಯವಿಲ್ಲ. ಆ ಸಂದರ್ಭ ಅವರು ನೀಡಿದ ಸೇವೆಯನ್ನು ಯಾವ ಸೇವೆಯೊಂದಿಗೂ ಹೋಲಿಕೆ ಮಾಡಲು ಸಾಧ್ಯವಿಲ್ಲ ಎಂದರು.

ಶ್ರೀ ಆದಿಚುಂಚನಗಿರಿ ಮಠದ ಮೈಸೂರು ಶಾಖೆಯ ಶ್ರೀ ಸೋಮೇಶ್ವರನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಕಾಲೇಜು ಪ್ರಾಂಶುಪಾಲೆ ಎಂ.ಟಿ. ಅರುಣಾದೇವಿ, ಜಿಲ್ಲಾ ನರ್ಸಿಂಗ್ ಅಧಿಕಾರಿ ಇಂದ್ರಾಣಿ, ಅಪೋಲೋ ಬಿಜಿಎಸ್ ಆಸ್ಪತ್ರೆಯ ರಕ್ತನಿಧಿ ಕೇಂದ್ರದ ಅಧಿಕಾರಿ ಅಂಜಲಿ ಅರುಣ್, ಚೀಫ್ ರೇಡಿಯಾಲಜಿಸ್ಟ್ ಡಾ. ಶಿವಪ್ರಸಾದ್, ಅರವಳಿಕೆ ತಜ್ಞೆ ಡಾ. ಸೀತಾಲಕ್ಷ್ಮಿ, ಮೈಸೂರು ವೈದ್ಯಕೀಯ ಕಾಲೇಜಿನ ನಿವೃತ್ತ ವೈದ್ಯಕೀಯ ದಾಖಲೆ ಅಧಿಕಾರಿ ಶ್ಯಾಮ್ ಸುಂದರ್, ಚೆಲುವಾಂಬ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕಿ ವಿ. ಸಾಕಮ್ಮ ಹಾಗೂ ಇತರರು ಇದ್ದರು.