ಜಿಲ್ಲೆ

ಇಲ್ಲಿ ಕಾಡಾನೆಗಳ ಸಂಚಾರವಿದೆ ಎಚ್ಚರ

ಜಿ.ಹೆಚ್. ಧನ್ಯಕುಮಾರ್

ಎನ್.ಆರ್.ಪುರ: ಸೀತೂರು ಗ್ರಾಮದಲ್ಲಿ ರೈತನೊರ್ವ ಕಾಡಾನೆ ದಾಳಿಯಿಂದ ಮೃತಪಟ್ಟ ಬೆನ್ನಲ್ಲೇ ತಾಲೂಕಿನಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು, ಜನರು ಜೀವ ಭಯದಲ್ಲಿ ಸಂಚರಿಸುವಂತಾಗಿದೆ.

ತಾಲೂಕಿನ ಶೆಟ್ಟಿಕೊಪ್ಪದ ಚೆನ್ನಮಣಿ ಎಂಬ ಗ್ರಾಮದಲ್ಲಿ ಒಂಟಿ ಸಲಗ ತೋಟಕ್ಕೆ ನುಗ್ಗಿ ಬಾಳೆ, ಅಡಕೆ ಮರಗಳನ್ನು ನೆಲಮ ಮಾಡಿದೆ. ಸೀತೂರು ಆಸುಪಾಸಿನಲ್ಲೂ ಮತ್ತೆ ಒಂಟಿ ಸಲಗ ಓಡಾಡುತ್ತಿರುವ ಮಾಹಿತಿ ಇದೆ. ದೊಡ್ಡಿನತಲೆ ಸಾತ್ಕೋಳಿ ರಸ್ತೆಯಲ್ಲಿ ಮೂರು ಆನೆಗಳು ಕಾಣಿಸಿವೆ ಇದರಿಂದಾಗಿ ಸಾತ್ಕೋಳಿ, ದೊಡ್ಡಿನತಲೆ,ಕುಸುಬೂರು, ಹೊಸಕೊಪ್ಪ, ಮಡಬೂರು, ಕಡಹಿನಬೈಲು,ಹಾಗಲ್‌ಮನೆ, ಆರಂಬಳ್ಳಿ, ದೇವಾಲೆಕೊಪ್ಪ, ಮಾಕೋಡಿನ ಚೆನ್ನಮಣಿ, ಕೆಸವಿ, ಆಲ್ದಾರ, ಬೈರಾಪುರ, ಮರಾಠಿ ಕ್ಯಾಂಪ್, ಹೊನ್ನೇಕುಡಿಗೆ ಗ್ರಾಪಂ. ಲಕ್ಕುಂದ, ಹೆಬ್ಬೆ, ಮೋರಿಮಠ, ಬಾಳೆ ಗ್ರಾಪಂ ಹಾಗೂ ಆಡುವಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ಜನರು ಭಯ ಭೀತರಾಗಿ ರಸ್ತೆಯಲ್ಲಿ ಓಡಾಡುವುದನ್ನು ನಿಲ್ಲಿಸಿದ್ದಾರೆ. ಇದರಿಂದ ತೋಟಗಳಿಗೆ ನೀರು ಹಾಯಿಸಲು ತೊಂದರೆಉಂಟಾಗಿದೆ. ಆನೆಗಳ ಉಪಟಳ ಹೆಚ್ಚಾದರೂ ಅರಣ್ಯ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳದಿರುವುದಕ್ಕೆ ಸಾರ್ವಜನಿಕರು ಆಕ್ರೋಶವ್ಯಕ್ತಪಡಿಸಿದ್ದಾರೆ.

ಕಾಡಾನೆಗಳ ಹಿಂಡಿನಿಂದ ಜನರು ಭಯಗೊಂಡಿದ್ದು, ಭದ್ರಾ ಹಿನ್ನೀರಿನಲ್ಲಿ ಕೃಷಿ ಮಾಡಿಕೊಂಡಿರುವ ರೈತರು, ತಮ್ಮ ತಮ್ಮ ಜಮೀನು, ತೋಟ,ಗದ್ದೆಗಳಿಂದ ಸಂಜೆ ಆಗುವಷ್ಟರಲ್ಲಿ ಮನೆ ಸೇರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇಲ್ಲವಾದಲ್ಲಿ ಆನೆಗಳ ಹಿಂಡು ಸಂಚಾರ ಪ್ರಾರಂಭವಾಗುತ್ತದೆ. ಇದರಿಂದ ರಾತ್ರಿ ವೇಳೆಯಲ್ಲಿ ತೋಟ, ಗದ್ದೆಗಳಿಗೆ ನೀರು ಹಾಯಿಸಲು ಹೋಗಲು ಹೆದರುತ್ತಿದ್ದಾರೆ. ಆನೆ ಜತೆಗೆ ಮಂಗಗಳ ಹಾವಳಿಯೂ ರೈತರಿಗೆ ಸಂಕಷ್ಟ ತಂದೊಡ್ಡಿದೆ. ಕೇವಲ ತೋಟ, ಜಮೀನು, ಗದ್ದೆಗಳಲ್ಲದೆ ಪಟ್ಟಣದಲ್ಲೂ ಮಂಗಗಳ ಹಾವಳಿ ಹೆಚ್ಚಾಗಿದೆ.