ಜಿಲ್ಲೆ

ಸುಧಾರಿತ ಬೇಸಾಯ ಕ್ರಮದಿಂದ ಉತ್ತಮ ಇಳುವರಿ

ತುಮಕೂರು ಡೆಸ್ಕ್

 ತರಬೇತಿ ಕಾರ್ಯಕ್ರಮದಲ್ಲಿ ರೈತರಿಗೆ ಶಾಸಕ ಕೆ.ಷಡಕ್ಷರಿ ಸಲಹೆ

 ತಿಪಟೂರು: ಕೃಷಿಯಲ್ಲಿ ಸುಧಾರಿತ ಬೇಸಾಯ ಕ್ರಮಗಳನ್ನು ಅಳವಡಿಸಿಕೊಂಡು ಉತ್ತಮ ಇಳುವರಿ ಪಡೆಯಿರಿ ಎಂದು ಶಾಸಕ ಕೆ.ಷಡಕ್ಷರಿ ಹೇಳಿದರು.

ತಾಲೂಕು ಕೃಷಿ ಇಲಾಖೆಯಿಂದ ತಾಲೂಕಿನ ನೆಲಗೊಂಡನಹಳ್ಳಿದಲ್ಲಿ ಆಹಾರ ಮತ್ತು ಪೌಷ್ಟಿಕ ಭದ್ರತಾ ಯೋಜನೆಯಡಿ ಉಚಿತ ಬಿತ್ತನೆ ಬೀಜ ವಿತರಣೆ, ಬೀಜೋಪಚಾರ ಆಂದೋಲನ ಮತ್ತು ಪೀಡೆನಾಶಕಗಳ ಸಮರ್ಪಕ ಮತ್ತು ಸುರತ ಬಳಕೆ ಕುರಿತು ತರಬೇತಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ, ಸ್ವಾತಂತ್ರ$್ಯ ಬಂದಾಗ ದೇಶದ ಜನಸಂಖ್ಯೆ ಮೂವತ್ತೊಂದು ಕೋಟಿ ಇತ್ತು ಮತ್ತು ಆಹಾರ ಧಾನ್ಯಗಳ ಉತ್ಪಾದನೆ ಐವತ್ತೊಂದು ಮಿಲಿಯನ್​ ಟನ್​ ಇತ್ತು. ಕಾಲ ಕಳೆದಂತೆ ಜನಸಂಖ್ಯೆ ಹೆಚ್ಚಾದಂತೆ ಕೃಷಿ ಮಾಡಲು ಯೋಗ್ಯವಾದ ಭೂಮಿ ಕಡಿಮೆಯಾಗಿದೆ. ಹೆಚ್ಚುತ್ತಿರುವ ಜನಸಂಖ್ಯೆಗೆ ಆಹಾರ ನೀಡುವ ಸದುದ್ದೇಶದಿಂದ ಆಹಾರ ಮತ್ತು ಪೌಷ್ಟಿಕ ಭದ್ರತಾ ಯೋಜನೆಯನ್ನು ಸರ್ಕಾರ ಜಾರಿಗೊಳಿಸಿದೆ. ಆಹಾರ ಬೆಳೆಗಳ ವಿಸ್ತೀರ್ಣ, ಉತ್ಪಾದನೆ ಮತ್ತು ಉತ್ಪಾದಕತೆಯನ್ನು ಹೆಚ್ಚಿಸುವುದು ಈ ಯೋಜನೆಯ ಗುರಿಗಳಾಗಿವೆ. ಕೃಷಿಯಲ್ಲಿ ಸುಧಾರಿತ ಬೇಸಾಯ ಕ್ರಮಗಳನ್ನು ಅಳವಡಿಸಿಕೊಂಡು ಉತ್ತಮ ಇಳುವರಿಯನ್ನು ಪಡೆಯಬಹುದು ಎಂದು ತಿಳಿಸಿದರು.

ಸಹಾಯಕ ಕೃಷಿ ನಿರ್ದೇಶಕ ಡಾ.ಎಂ.ಪಿ.ಪವನ್​ ಮಾತನಾಡಿ, ತಿಪಟೂರು ತಾಲೂಕಿನಲ್ಲಿ 200 ಹೆಕ್ಟೇರ್​ ಪ್ರದೇಶದಲ್ಲಿ ಆಹಾರ ಮತ್ತು ಪೌಷ್ಟಿಕ ಭದ್ರತಾ ಯೋಜನೆಯಡಿ ಹೆಸರು ಬೆಳೆಯ ಸಾಲು ಬಿತ್ತನೆ ಪ್ರಾತ್ಯಕೆ ಕೈಗೊಳ್ಳಲಾಗಿದೆ. ಭೂಮಿಯನ್ನ ಹದ ಮಾಡಿದ ನಂತರ ಶಿಫಾರಸು ಮಾಡಿದ ಪೂರ್ಣ ಪ್ರಮಾಣದ ರಸಗೊಬ್ಬರಗಳನ್ನು ಮಣ್ಣಿನಲ್ಲಿ ಬೆರೆಸಿ ಸಾಲಿನಿಂದ ಸಾಲಿಗೆ ಹನ್ನೆರಡು ಅಂಗುಲ ಹಾಗೂ ಬೀಜದಿಂದ ಬೀಜಕ್ಕೆ ನಾಲ್ಕು ಅಂಗುಲ ಅಂತರದಲ್ಲಿ ಬಿತ್ತನೆ ಮಾಡುವುದು. ಇದರಿಂದ ಸಸ್ಯಗಳ ನಡುವೆ ನೀರು ಮತ್ತು ಪೋಷಕಾಂಶಗಳನ್ನು ಪಡೆಯುವ ಸ್ಪರ್ಧೆ ಕಡಿಮೆಯಾಗುವುದರಿಂದ ಬೆಳೆಗಳ ಬೆಳವಣಿಗೆಗೆ ಅಗತ್ಯವಾಗಿರುವ ಸೂರ್ಯನ ಬೆಳಕು, ಗಾಳಿ, ನೀರು, ಪೋಷಕಾಂಶಗಳು ಪ್ರತಿಯೊಂದು ಗಿಡಕ್ಕೆ ಸಮರ್ಪಕವಾಗಿ ದೊರೆಯುತ್ತದೆ. ಬಿತ್ತಿದ ನಲವತ್ತು ದಿವಸಗೊಳಗಾಗಿ ಎರಡು ಬಾರಿ ಅಂತರ ಬೇಸಾಯ ಮಾಡಿ ಕಳೆ ನಿಯಂತ್ರಣ ಮಾಡಬಹುದು ಎಂದರು.

ತಾಲೂಕಿನ ಕೊನೇಹಳ್ಳಿಯ ಕೆ.ವಿ.ಕೆ ಕೃಷಿ ವಿಜ್ಞಾನಿ ಡಾ.ಪದ್ಮನಾಭ್​ ಮಾತನಾಡಿ, ಆಧುನಿಕ ಕೃಷಿಯಲ್ಲಿ ರಾಸಾಯನಿಕ ಕೀಟನಾಶಕಗಳು, ರೋಗನಾಶಕಗಳ ಬಳಕೆ ಅನಿವಾರ್ಯವಾಗಿದೆ. ಅವುಗಳ ಅಸಮರ್ಪಕ ಬಳಕೆಯಿಂದ ಮನುಷ್ಯ, ಹಾಗೂ ಪರಿಸರದ ಮೇಲೆ ದುಷ್ಪರಿಣಾಮಗಳಾಗುವ ಸಾಧ್ಯತೆಗಳಿವೆ ಎಂದರು.

ಹೊನ್ನವಳ್ಳಿ ಕೃಷಿ ಅಧಿಕಾರಿ ಕಿರಣ್​ ಬೀಜೋಪಚಾರದ ಪ್ರಾತ್ಯಕೆಯನ್ನು ರೈತರಿಗೆ ತೋರಿಸಿದರು.

ತಿಪಟೂರು ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಎಂ.ಎಸ್​.ಯೋಗೀಶ್​ ಕೃಷಿ ಇಲಾಖೆಯ ತಾಂತ್ರಿಕತೆಗಳನ್ನು ರೈತರು ಆಳವಡಿಸಿಕೊಂಡು ಉತ್ತಮ ಇಳುವರಿ ಪಡೆಯುವಂತೆ ರೈತರಿಗೆ ಸಲಹೆ ನೀಡಿದರು.

ಸಾರ್ಥವಳ್ಳಿ ಗ್ರಾಪಂ ಸದಸ್ಯರಾದ ಪ್ರಕಾಶ್​ಯಾದವ್​, ಶಶಿಧರ್​, ಪಿಡಿಒ ಲತಾ, ಕಾರ್ಯದರ್ಶಿ ಸತೀಶ್​, ನಿವೃತ್ತ ಸಹಾಯಕ ಕೃಷಿ ಅಧಿಕಾರಿ ಲೋಹಿತ್​ ಕುಮಾರ್​ ಎನ್​.ಸಿ ಇತರರು ಇದ್ದರು.