ಜಿಲ್ಲೆ

ದತ್ತಪೀಠ ವಿವಾದ ನ್ಯಾಯಾಲಯದಲ್ಲೇ ಬಗೆಹರಿಯುವುದು ಸೂಕ್ತ: ಸಿ.ಟಿ.ರವಿ

ಚಿಕ್ಕಮಗಳೂರು: ದತ್ತಪೀಠ ವಿವಾದಕ್ಕೆ ಸಂಬಂಧಿಸಿದಂತೆ ದಾಖಲೆಗಳ ಆಧಾರದಲ್ಲಿ ನ್ಯಾಯಾಲಯಕ್ಕೆ ವಾಸ್ತವ ಸ್ಥಿತಿ ಮನವರಿಕೆ ಮಾಡಿಕೊಟ್ಟಲ್ಲಿ ಅದು ಹೆಚ್ಚು ಲಾಭವಾಗಲಿದೆ. ಈ ವಿಚಾರದಲ್ಲಿ ಸರ್ಕಾರ ಏನೇ ತೀರ್ಮಾನ ತೆಗೆದುಕೊಂಡರೂ ಮತ್ತೆ ನ್ಯಾಯಾಲಯದ ಅಂಗಳಕ್ಕೇ ಬರುತ್ತದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಶಾಸಕ ಸಿ.ಟಿ.ರವಿ ವಿಶ್ಲೇಷಿಸಿದರು.

ನಗರದಲ್ಲಿ ಶನಿವಾರ ದತ್ತಜಯಂತಿ ಪ್ರಯುಕ್ತ ಮಾಲಾಧಾರಣೆ ಮಾಡಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ರಾಮ ಮಂದಿರದ ವಿವಾದ ಸಹ ನ್ಯಾಯಾಲಯದಿಂದಲೇ ಬಗೆಹರಿಯಿತು. ಹಾಗಾಗಿ ಈ ವಿಚಾರದಲ್ಲಿ ಕೆಲವು ದತ್ತ ಭಕ್ತರ ಹೇಳಿಕೆಯನ್ನು ಗಮನಿಸಿದ್ದೇನೆ. ಅದು ಏನೇ ಮಾಡಿದರೂ ನ್ಯಾಯಾಲಯಕ್ಕೆ ಹೋಗುತ್ತದೆ. ಹಾಗೇನಾದರೂ ಆದರೆ ಮತ್ತೆರಡು ದಶಕಗಳ ಕಾಲ ನ್ಯಾಯಾಲಯದಲ್ಲೇ ಮುಂದುವರಿಯುತ್ತದೆ ಎಂದರು.

ಅಂಗೈ ಹುಣ್ಣಿನಷ್ಟು ಸ್ಪಷ್ಟ:
ಈ ಹಿಂದೆ ಪಕ್ಷದ ಪ್ರಮುಖರ ಜತೆ ಸಮಾಲೋಚಿಸಿದಾಗ ದಾಖಲೆಗಳು ಅಂಗೈ ಹುಣ್ಣಿನಷ್ಟು ಸ್ಪಷ್ಟವಾಗಿವೆ. ಆ ಗ್ರಾಮದ ಹೆಸರೇ ದತ್ತಾತ್ರೇಯ ಪೀಠ. ಗ್ರಾಮದ ಸರ್ವೇ ನಂ.198ರಲ್ಲಿ ದತ್ತಾತ್ರೇಯ ದೇವರು ಇರುವುದು. ಮುಜರಾಯಿ ದಾಖಲೆಗಳಲ್ಲಿ ತಸ್ತೀಕ್ ಹಣ ಸಹ ದತ್ತಾತ್ರೇಯ ದೇವರ ಹೆಸರಿಗೆ ಬಿಡುಗಡೆಯಾಗುತ್ತಿದೆ. ಇಷ್ಟೆಲ್ಲ ಇರುವಾಗ ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡಬೇಕು. ನ್ಯಾಯಾಲಯ ಒಪ್ಪಿ ಒಮ್ಮೆ ಮುಕ್ತ ಪೂಜೆಗೆ ಅವಕಾಶ ಕೊಡಬೇಕೆನ್ನುವ ಸಂದರ್ಭದಲ್ಲಿ ಜಸ್ಟೀಸ್ ನಾಗಮೋಹನ್‍ದಾಸ್ ಸಮಿತಿಯನ್ನು ಮಧ್ಯೆ ತಂದು ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅನ್ಯಾಯದ ಕೆಲಸ ಮಾಡಿತು ಎಂದು ಹೇಳಿದರು.

ಸಮಯ ಬಂದಾಗ ಕೋರ್ಟ್‍ಗೆ ಮನವರಿಕೆ:
ನ್ಯಾಯ ಕೊಡಿಸುವ ವಿಚಾರ ನ್ಯಾಯಾಲಯದ ಮುಂದಿದೆ. ಲಾಕ್‍ಡೌನ್ ಹಿನ್ನೆಲೆಯಲ್ಲಿ ಆನ್‍ಲೈನ್‍ನಲ್ಲಿ ಮಾತ್ರ ತುರ್ತು ಪ್ರಕರಣಗಳನ್ನು ಪರಿಗಣಿಸಲಾಗುತ್ತಿದೆ. ಈ ಪ್ರಕರಣ ನ್ಯಾಯಾಲಯದ ಮುಂದೆ ವಿಚಾರಣೆಗೆ ಬಂದರೆ ನ್ಯಾಯಾಲಯಕ್ಕೆ ಮನವರಿಕೆ ಮಾಡುವ ಕೆಲಸವನ್ನು ಸರ್ಕಾರದಿಂದಲೂ ಮಾಡಲಾಗುತ್ತದೆ. ಸಂಘಟನೆಗಳು ಈಗಾಗಲೇ ವಕೀಲರನ್ನು ನೇಮಿಸಿ ಮನವರಿಕೆ ಮಾಡುವ ಕೆಲಸ ಮಾಡುತ್ತಿವೆ. ನ್ಯಾಯ ಸಿಗುತ್ತದೆ ಎನ್ನುವ ವಿಶ್ವಾಸವಿದೆ ಎಂದರು.

1964ರಲ್ಲೇ ಗೋಹತ್ಯೆ ನಿಷೇಧ ಕಾಯ್ದೆ ಜಾರಿ:
ಸಂವಿಧಾನದ ಬಗ್ಗೆ ಶ್ರದ್ಧೆ, ತಿಳಿವಳಿಕೆ ಇರುವವರು ಅವರು ಯಾರೂ ಗೋಹತ್ಯೆ ನಿಷೇಧ ಕಾಯ್ದೆಯನ್ನು ವಿರೋಧಿಸುವುದಿಲ್ಲ. ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರೇ ಸಂವಿಧಾನದಲ್ಲಿ ಗೋಹತ್ಯೆ ನಿಷೇಧದ ಬಗ್ಗೆ ಪ್ರಸ್ತಾಪಿಸಿದ್ದಾರೆ. 1964ರಲ್ಲೇ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ಬಂದಿದೆ. ಆ ಕಾಯ್ದೆಯನ್ನು ಇನ್ನಷ್ಟು ಬಲಪಡಿಸುವ ಕೆಲಸವನ್ನಷ್ಟೇ ಈಗ ಮಾಡಲಾಗಿದೆ. 1964ರಲ್ಲಿ ಜನಸಂಘವಾಗಲಿ, ಬಿಜೆಪಿಯಾಗಲಿ ಅಧಿಕಾರದಲ್ಲಿರಲಿಲ್ಲ. 1950-51ರಲ್ಲಿ ಸಂವಿಧಾನ ಅಸ್ತಿತ್ವಕ್ಕೆ ಬರುವ ಸಂದರ್ಭ ಡಾ.ಅಂಬೇಡ್ಕರ್ ಅವರಿಗೆ ಸಲಹೆ ಕೊಟ್ಟಿರುವುದು ಬಿಜೆಪಿಯಲ್ಲ, ಮೋದಿಯವರಲ್ಲ. ಈ ದೇಶದ ಸಂಸ್ಕøತಿ ಅವರ ಮನಸಿಗೆ ತಂದು ಸಂವಿಧಾನದಲ್ಲಿ ಉಲ್ಲೇಖಿಸುವಂತೆ ಮಾಡಿತು. ಈ ದೇಶದಲ್ಲಿರುವುದು ಪುರಾತನವಾದ ಸಂಸ್ಕøತಿ. ಗೋವಿನ ಬಗ್ಗೆ ಪೂಜ್ಯ ಭಾವನೆ ಮಾತ್ರವಲ್ಲ. ಅದು ಎಲ್ಲ ರೀತಿಯಿಂದಲೂ ದೇಶಕ್ಕೆ ಬಲ ತಂದುಕೊಟ್ಟಂತಹ ಸಂಕೇತ. ಗೋವಿನ ಜತೆಗೆ ಜೀವನ ಎಂದರು.

ಹಿಂದಿನ ಕಾಂಗ್ರೆಸ್‍ನಿಂದ ಕಾಯ್ದೆ ಸಮರ್ಥನೆ:
ಕಾಂಗ್ರೆಸ್ಸಿಗರು ಇತಿಹಾಸ ಮರೆತಿದ್ದಾರೆ. ಈಗಿರುವ ಕಾಂಗ್ರೆಸ್‍ಗೂ ಹಿಂದಿನ ಕಾಂಗ್ರೆಸ್‍ಗೂ ಯಾವ ಸಂಬಂಧವಿಲ್ಲ. ಈಗಿನವರಿಗೆ ಗೊತ್ತಿಲ್ಲ. ಜೋಡೆತ್ತು, ಹಸು-ಕರು ಅವರ ಪಕ್ಷದ ಗುರುತಾಗಿತ್ತು. ಯಾವ ಪಕ್ಷ ಜೋಡೆತ್ತು, ಹಸು-ಕರುವನ್ನು ತನ್ನ ಗುರುತಾಗಿಟ್ಟುಕೊಂಡಿತ್ತೋ ಆ ಪಕ್ಷ ಗೋಹತ್ಯೆ ನಿಷೇಧವನ್ನು ಸಮರ್ಥನೆ ಮಾಡಿತು. ಆಹಾರ ಸಂಸ್ಕøತಿಯ ಬಗ್ಗೆ ಮಾತನಾಡುತ್ತಾರೆ. ದೇಶದಲ್ಲಿ ಒಂದು ಸಂಸ್ಕøತಿ ಇದೆ. ಅವರ ಕುಲದೇವರಾದ ಬೀರೇಶ್ವರ ಯಾವತ್ತಾದರೂ ಗೋಹತ್ಯೆ ಸಮರ್ಥನೆಗೆ ನಿಲ್ಲುತ್ತಾರಾ? ಬೀರೇಶ್ವರನ ವಾಹನ ಏನು ಎಂದು ವಿಚಾರ ಮಾಡಲಿ. ಆಗ ಅವರ ಮೂಲ ಸಂಸ್ಕøತಿ ಯಾವುದು? ಓಟಿಗಾಗಿ ಹಿಡಿದುಕೊಂಡಿರುವ ವಿಚಾರ ಯಾವುದು ಎನ್ನುವುದು ಗೊತ್ತಾಗುತ್ತದೆ ಎಂದರು.

ಈ ಬಾರಿ ಕರೊನಾ ಕಾರಣಕ್ಕಾಗಿ ಕೆಲವು ನಿರ್ಬಂಧಗಳ ಹಿನ್ನೆಲೆಯಲ್ಲಿ ಸಾಂಪ್ರದಾಯಿಕ ಆಚರಣೆ ಇದ್ದು, ಹೆಚ್ಚು ಭಕ್ತರು ಸೇರುವುದಕ್ಕೆ ಒತ್ತು ಕೊಡದಿರಲು ಬಜರಂಗದಳ ನಿರ್ಣಯಿಸಿದೆ. ನಾನು ಕಳೆದ ಎರಡು ದಶಕಗಳಿಂದ ದತ್ತ ಮಾಲಾಧಾರಣೆ ಮಾಡಿ ವ್ರತಧಾರಿಯಾಗಿ ದತ್ತಪೀಠಕ್ಕೆ ಹೋಗುವಂತಹ ಪರಂಪರೆ ಇರುವಂತೆ ಈ ಬಾರಿ ಸಹ ದತ್ತ ಮಾಲಾಧಾರಣೆ ಮಾಡಿರುವುದಾಗಿ ಹೇಳಿದರು. ಕರೊನಾ ಮಹಾಮಾರಿ ಜಗತ್ತಿನಿಂದ ದೂರವಾಗಿ ಜನರಿಗೆ ಆರೋಗ್ಯ ದೊರಕಬೇಕು. ಭಾರತ ಹೆಚ್ಚು ಸಾಮರ್ಥ್ಯಶೀಲವಾಗಬೇಕು ಎನ್ನುವುದು ನಮ್ಮ ಆಶಯ ಎಂದರು.