ಮಾನ್ವಿ: ಬೆಟ್ಟದೂರು ಗ್ರಾಮದ ಗೋನವಾರ ಗುಡ್ಡ ಪ್ರದೇಶದ ಜಮೀನುಗಳಲ್ಲಿ ಶನಿವಾರ ರಾತ್ರಿ ಚಿರತೆಗಳು ಕಾಣಿಸಿಕೊಂಡಿವೆ.
ಚಿರತೆ ನೋಡಿದ ಗ್ರಾಮಸ್ಥರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಅರಣ್ಯಧಿಕಾರಿ ಬೂದೆಪ್ಪ ಹಾಗೂ ಸಿಬ್ಬಂದಿ ಭಾನುವಾರ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದಾಗ ಚಿರತೆಗಳ ಹೆಜ್ಜೆ ಗುರುತು ಕಂಡು ಬಂದಿವೆ. ಅರಣ್ಯ ಇಲಾಖೆ ಸಿಬ್ಬಂದಿ ಗುಡ್ಡ ಸೇರಿ ಸುತ್ತ ಮುತ್ತ ಪ್ರದೇಶಗಳಲ್ಲಿ ತೀವ್ರ ಹುಡುಕಾಟ ಕೈಗೊಂಡಿದ್ದಾರೆ.
ಬೆಟ್ಟದೂರು ಗ್ರಾಮದ ಮಹೇಶನಾಯಕ ಮಾತನಾಡಿ, ಗ್ರಾಮದ ಗುಡ್ಡದ ಹತ್ತಿರದಲ್ಲಿ 3 ಚಿರತೆಗಳು ಕಾಣಿಸಿಕೊಂಡಿದ್ದು, ಈ ಕುರಿತು ಅರಣ್ಯ ಇಲಾಖೆಗೆ ಮಾಹಿತಿ ನೀಡಿರುವುದಾಗಿ ತಿಳಿಸಿದರು.
ಗುಡ್ಡದ ಬದಿಯಲ್ಲಿನ ಹೊಲಗಳಲ್ಲಿ ರೈತರು ಬೆಳೆಗಳನ್ನು ಬೆಳೆದಿದ್ದು ಜಮೀನಿಗೆ ಹೋಗಲು ಭಯಪಡುತ್ತಿದ್ದಾರೆ. ಅದಷ್ಟು ಬೇಗ ಅರಣ್ಯ ಇಲಾಖೆ ಚಿರತೆಗಳನ್ನು ಹಿಡಯಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಕಳೆದ ವರ್ಷ ಇದೇ ಸ್ಥಳದಲ್ಲಿ ಚಿರತೆಗಳು ಕಂಡಿದ್ದರಿಂದ ಅರಣ್ಯ ಇಲಾಖೆ ಬೋನುಗಳನ್ನು ಅಳವಾಡಿಸಿ ಒಂದು ಮರಿ ಚಿರತೆ ಸೇರಿ ಒಟ್ಟು ಎರಡು ಚಿರತೆಗಳನ್ನು ಹಿಡಿದು ಬೇರೆಡೆ ಸಾಗಿಸಿದ್ದರು.