ಬೆಟ್ಟದಪುರ: ಸಮೀಪದ ಬೆಟ್ಟದತುಂಗ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೇಗಳಕೊಪ್ಪಲು ಗ್ರಾಮದಲ್ಲಿ ನಡೆದ ಕುಂದುಕೊರತೆ ಸಭೆಯಲ್ಲಿ ಪಶುಸಂಗೋಪನೆ ಹಾಗೂ ರೇಷ್ಮೆ ಸಚಿವ ಕೆ.ವೆಂಕಟೇಶ್ ಅವರು ಶುಕ್ರವಾರ ಸಾರ್ವಜನಿಕರ ಅಹವಾಲು ಆಲಿಸಿದರು.
ಜನರ ಸಮಸ್ಯೆ ಆಲಿಸಿ ಬಳಿಕ ಮಾತನಾಡಿ ಸಚಿವ ಕೆ.ವೆಂಕಟೇಶ್, ನಮ್ಮ ಆಡಳಿತ ಅವಧಿಯಲ್ಲಿ ಡಿ.ದೇವರಾಜು ಅರಸು ಅವರ ಹುಟ್ಟೂರಾದ ಬೆಟ್ಟದತುಂಗ ಗ್ರಾಮವನ್ನು ದತ್ತು ಗ್ರಾಮವನ್ನಾಗಿ ಸ್ವೀಕರಿಸಿ, ಹತ್ತು ಕೋಟಿ ರೂ. ಅನುದಾನ ನೀಡಲಾಗಿತ್ತು. ಆದರೆ ಆ ಅನುದಾನದಲ್ಲಿ ಇನ್ನೂ ಕೆಲಸಗಳು ಹಾಗೆ ಉಳಿದಿವೆ. ಅದರ ಸಂಪೂರ್ಣ ಮಾಹಿತಿಯನ್ನು ನನಗೆ ಒದಗಿಸಬೇಕೆಂದು ಅಧಿಕಾರಿಗಳಿಗೆ ತಾಕೀತು ಮಾಡಿದರು. ಅಲ್ಲದೆ ರಸ್ತೆ ಹಾಗೂ ಕೆರೆಗಳ ಅಭಿವೃದ್ಧಿ ವಿಚಾರದ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ಆಯಾಯ ಗ್ರಾಮಗಳಿಗೆ ಅನುಗುಣವಾಗಿ ಕೆಲಸ ಮಾಡಿಸಿ ಕೊಡುತ್ತೇವೆ ಎಂದು ಹೇಳಿದರು.
ಶ್ರೀ ಗವಿಸಿದ್ದೇಶ್ವರ ದೇವಸ್ಥಾನದ ಬೆಟ್ಟದ ರಸ್ತೆಯನ್ನು ಸಿಮೆಂಟ್ ರಸ್ತೆ ಮಾಡಿಕೊಡಬೇಕೆಂದು ಗ್ರಾಮಸ್ಥರು ಮನವಿ ಸಲ್ಲಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಗ್ರಾಮಸ್ಥರು ಹಣ ಹಾಕಿ ಬೆಟ್ಟಕ್ಕೆ ರಸ್ತೆ ಮಾಡಿದ್ದಾರೆ, ಇದಕ್ಕೆ ವೈಯುಕ್ತಿಕವಾಗಿ ಈಗಾಗಲೇ ಒಂದು ಲಕ್ಷ ರೂ. ಹಣವನ್ನು ನೀಡಿದ್ದೇನೆ. ನನ್ನ ಅಧಿಕಾರವಧಿ ಮುಗಿಯುವುದರೊಳಗೆ ಸಿಮೆಂಟ್ ರಸ್ತೆ ಮಾಡಿಸುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಆಶ್ರಯ ಸಮಿತಿ ಅಧ್ಯಕ್ಷ ನಿತಿನ್ ವೆಂಕಟೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ರಹಮಜ್ ಜಾನ್ ಬಾಬು, ಡಿ.ಟಿ.ಸ್ವಾಮಿ, ಮುಖಂಡರಾದ ಲೋಕೇಶ್‌ರಾಜೇ ಅರಸ್, ಚಿಕ್ಕೇಗೌಡ, ಲೋಕೇಶ್, ಗುಂಡಣ್ಣ, ವಸಂತರಾಜೇ ಅರಸ್, ತಹಸೀಲ್ದಾರ್ ಕುಂಇ ಅಹಮದ್, ತಾಪಂ ಇಒ ಸುನೀಲ್‌ಕುಮಾರ್ ಇತರರು ಇದ್ದರು.