ಜಿಲ್ಲೆ

ಕಾಂಗ್ರೆಸ್ ಸರ್ಕಾರದಿಂದ ದಲಿತರಿಗೆ ದ್ರೋಹ

ಹುಬ್ಬಳ್ಳಿ : ದಲಿತರ ಅಭಿವೃದ್ಧಿಗಾಗಿ ಇಟ್ಟಿದ್ದ 25,386 ಕೋಟಿ ರೂ. ಹಣವನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳಿಗೆ ಬಳಕೆ ಮಾಡುವ ಮೂಲಕ ದಲಿತರಿಗೆ ದ್ರೋಹ ಮಾಡಿದೆ ಎಂದು ವಿಧಾನ ಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಆರೋಪಿಸಿದ್ದಾರೆ.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಸ್ಲಿಂರ ಓಲೈಕೆ ಹಾಗೂ ದಲಿತರನ್ನು ದಾರಿ ತಪ್ಪಿಸುವ ಮೂಲಕ ಕಾಂಗ್ರೆಸ್ ಸರ್ಕಾರ ಮತಬ್ಯಾಂಕ್ ರಾಜಕಾರಣ ಮಾಡುತ್ತಿದೆ ಎಂದು ದೂರಿದರು.

ಬಿಜೆಪಿ ನೇತೃತ್ವದ ಎನ್​ಡಿಎ ಸರ್ಕಾರ ಸಂವಿಧಾನ ಬದಲಾವಣೆ ಮಾಡುತ್ತದೆ ಎಂಬ ಸುಳ್ಳು ಹೇಳಿಕೆಯನ್ನು ಕಾಂಗ್ರೆಸ್ ಮುಖಂಡರು ಮೇಲಿಂದ ಮೇಲೆ ಹೇಳುತ್ತಿದ್ದಾರೆ. ಆದರೆ, ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರೇ ಈ ಆರೋಪವನ್ನು ಅಲ್ಲಗಳೆದಿದ್ದಾರೆ. ಯಾವುದೇ ಕಾರಣಕ್ಕೂ ಸಂವಿಧಾನ ಬದಲಾವಣೆ ವಿಷಯ ಬಿಜೆಪಿ ಅಜೆಂಡಾದಲ್ಲಿ ಇಲ್ಲ ಎಂದಿದ್ದಾರೆ ಎಂದು ಸ್ಪಷ್ಟಪಡಿಸಿದರು.

ಸಂವಿಧಾನಕ್ಕೆ ಅವಮಾನ ಆಗಿರುವುದು ಕಾಂಗ್ರೆಸ್ ಅವಧಿಯಲ್ಲಿ. ಇಂದಿರಾ ಗಾಂಧಿ ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ತುರ್ತಪರಿಸ್ಥಿತಿ ಹೇರುವ ಮೂಲಕ ಸಂವಿಧಾನವನ್ನು ಅಮಾನತ್ತಿನಲ್ಲಿ ಇಟ್ಟಿದ್ದರು ಎಂದು ಆರೋಪಿಸಿದರು.

ಜಮ್ಮು ಮತ್ತು ಕಾಶ್ಮೀರಕ್ಕೆ 370ನೇ ಕಾಯ್ದೆ ನೀಡುವ ಮೂಲಕ ಅಲ್ಲಿ ಪ್ರತ್ಯೇಕ ಸಂವಿಧಾನವನ್ನೇ ಕಾಂಗ್ರೆಸ್​ನವರು ಜಾರಿಗೊಳಿಸಿದ್ದರು. ನರೇಂದ್ರ ಮೋದಿ ಪ್ರಧಾನಿಯಾದ ನಂತರ 370ನೇ ಕಾಯ್ದೆ ರದ್ದುಗೊಳಿಸಿ, ಅಲ್ಲಿನ ದಲಿತರಿಗೂ ಮೀಸಲಾತಿ ಒದಗಿಸಿದರು ಎಂದು ಹೇಳಿದರು.

ದಲಿತರು ಸಹ ಸುಶಿಕ್ಷಿತರಾಗಿದ್ದಾರೆ. ಅವರ ದಾರಿ ತಪ್ಪಿಸುವುದು ಸುಲಭದ ಮಾತಲ್ಲ. ಒಂದಿಷ್ಟು ಜನ ದಲಿತರು ಈಗಲೂ ಕಾಂಗ್ರೆಸ್ ಜತೆಗೆ ಇದ್ದಾರೆ. ಅವರಿಗೂ ಕೆಲವೇ ದಿನಗಳಲ್ಲಿ ಕಾಂಗ್ರೆಸ್ ಬಗ್ಗೆ ಸತ್ಯ ತಿಳಿಯುತ್ತದೆ. ಮುಸ್ಲಿಂರಿಗೂ ಕಾಂಗ್ರೆಸ್​ನ ಬೂಟಾಟಿಕೆ ಶೀಘ್ರ ಅರಿವಾಗುತ್ತದೆ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಮುಖಂಡರು ಮೇಲಿಂದ ಮೇಲೆ ನುಡಿದಂತೆ ನಡೆಯುವ ಸರ್ಕಾರ ಎಂದು ಬೆನ್ನು ಚಪ್ಪರಿಸಿಕೊಳ್ಳುತ್ತಾರೆ. ಆದರೆ, ಈ ಸರ್ಕಾರ ನುಡಿದಂತೆ ನಡೆದೇ ಇಲ್ಲ. ಗ್ಯಾರಂಟಿ ಯೋಜನೆಗಳನ್ನು ಸರಿಯಾಗಿ ಅನುಷ್ಠಾ ಮಾಡಿಲ್ಲ ಎಂದು ದೂರಿದರು.

ಪ್ರಧಾನಿ ಮೋದಿ ಹಾಗೂ ಗೃಹ ಸಚಿವ ಅಮಿತ್ ಷಾ ಅವರನ್ನು ತೆಗಳುವುದರಲ್ಲಿಯೇ ಕಾಲಹರಣ ಮಾಡುತ್ತಿರುವ ಕಾಂಗ್ರೆಸ್, ಯುಪಿಎ ಅವಧಿಯಲ್ಲಿ ಏನೆಲ್ಲ ಅಭಿವೃದ್ಧಿ ಮಾಡಿದೆ ಎಂಬುದರ ಬಗ್ಗೆ ಮನನ ಮಾಡಿಕೊಳ್ಳಲಿ. ಯುಪಿಎ ಅವಧಿಯಲ್ಲಿ ಲಕ್ಷಾಂತರ ಕೋಟಿ ರೂ.ಗಳ ಭ್ರಷ್ಟಾಚಾರ ಹಗರಣಗಳು ಬಯಲಿಗೆ ಬಂದಿದ್ದವು. ಆದರೆ, ಪ್ರಧಾನಿ ನರೇಂದ್ರ ಮೋದಿ ಆಡಳಿತದಲ್ಲಿ ಒಂದೇ ಒಂದು ಭ್ರಷ್ಟಾಚಾರ ನಡೆದ ಉದಾಹರಣೆ ಇಲ್ಲ ಎಂದು ಹೇಳಿದರು.

ಮಾಜಿ ಸಚಿವ ಎನ್. ಮಹೇಶ, ಎಸ್​ಸಿ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಂದ್ರ ಕೌತಾಳ, ಬಸವರಾಜ ಅಮ್ಮಿನಬಾವಿ, ಪರಶುರಾಮ ಪೂಜಾರಿ ಸುದ್ದಿಗೋಷ್ಠಿಯಲ್ಲಿ ಇದ್ದರು.