ತರೀಕೆರೆಯಲ್ಲಿ ನೈಋತ್ಯ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರದ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪ್ರಮುಖರು ಮತ್ತು ಕಾಯಕರ್ತರ ಸಭೆಯನ್ನು ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಾ. ಕೆ.ಪಿ.ಅಂಶುಮಂತ್ ಉದ್ಘಾಟಿಸಿದರು. ಕೆ.ಜಯಪ್ರಕಾಶ್ ಹೆಗ್ಡೆ, ಜಿ.ಎಚ್.ಶ್ರೀನಿವಾಸ್, ಎಚ್.ಯು.ಫಾರೂಕ್ ಇತರರಿದ್ದರು. 
ಜಿಲ್ಲೆ

ಪ್ರಬುದ್ಧರ ಆಯ್ಕೆಗೆ ಪಣತೊಡಿ

ಎಸ್.ಎನ್.ರವೀಂದ್ರ

ತರೀಕೆರೆ: ಎಂಎಲ್ಸಿ ಚುನಾವಣೆಯಲ್ಲಿ ಪ್ರಬುದ್ಧರ ಆಯ್ಕೆಗೆ ಕಾಂಗ್ರೆಸ್‌ನ ಪ್ರತಿಯೊಬ್ಬರೂ ಪಣತೊಡಬೇಕು ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ. ಕೆ.ಪಿ.ಅಂಶುಮಂತ್ ಹೇಳಿದರು.

ನೈಋತ್ಯ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರದ ಚುನಾವಣೆ ಹಿನ್ನೆಲೆಯಲ್ಲಿ ಶುಕ್ರವಾರ ಏರ್ಪಡಿಸಿದ್ದ ಕಾಂಗ್ರೆಸ್ ಪ್ರಮುಖರು ಮತ್ತು ಕಾಯಕರ್ತರ ಸಭೆಯಲ್ಲಿ ಮಾತನಾಡಿ, ಕಾರ್ಯಕರ್ತರು ಮತದಾರರನ್ನು ಸಂಪರ್ಕಿಸಿ ಕಾಂಗ್ರೆಸ್ ಅಭ್ಯರ್ಥಿಗಳ ಪರ ಮತಯಾಚಿಸಬೇಕು ಎಂದರು.
ಶಾಸಕ ಜಿ.ಎಚ್.ಶ್ರೀನಿವಾಸ್ ಮಾತನಾಡಿ, ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆ ಅನುಷ್ಠಾನಗೊಳಿಸುವ ಮೂಲಕ ಜನರ ನಂಬಿಕೆ ಉಳಿಸಿಕೊಂಡಿದೆ. ವಿಧಾನಪರಿಷತ್ ಚುನಾವಣೆಗೆ ಸಮರ್ಥರನ್ನೇ ಅಖಾಡಕ್ಕಿಳಿಸಿದ್ದು, ಗೆಲುವು ಸುಲಭವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮಾಜಿ ಸಂಸದ ಕೆ.ಜಯಪ್ರಕಾಶ್ ಹೆಗ್ಡೆ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಅಲೆ ಇದ್ದು, ಎಲ್ಲ ಚುನಾವಣೆಗಳಲ್ಲೂ ಪಕ್ಷ ಸ್ಪಷ್ಟ ಬಹುಮತ ಸಾಧಿಸಲಿದೆ. ಲೋಕಸಭೆ ಚುನಾವಣೆಯಲ್ಲಿ ಕಾರ್ಯಕರ್ತರು ಹಗಲಿರುಳೂ ಶ್ರಮಿಸಿದ್ದು, ಅವಕಾಶ ಸಿಕ್ಕಾಗ ಅವರ ಋಣ ತೀರಿಸುತ್ತೇನೆ ಎಂದು ಹೇಳಿದರು.
ತರೀಕೆರೆ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎಚ್.ಯು.ಫಾರೂಕ್, ಅಜ್ಜಂಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದಯಾನಂದ್, ಕೆಪಿಸಿಸಿ ಸದಸ್ಯರಾದ ಎಚ್.ವಿಶ್ವನಾಥ್, ಕೆ.ನಟರಾಜ್, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಕೆ.ಎಂ.ಸಂತೋಷ್, ಸಮಾಜ ಸೇವಕ ಎಚ್.ಎಂ.ಗೋಪಿಕೃಷ್ಣ, ಕಾಂಗ್ರೆಸ್ ನಗರ ವೀಕ್ಷಕರಾದ ಪಲ್ಲವಿ ಕೃಷ್ಣ, ಸುದೀಪ್ ಹೆಗ್ಡೆ, ಘಟಕ ಅಧ್ಯಕ್ಷ ಟಿ.ಎಸ್.ಪ್ರಕಾಶ್ ವರ್ಮ ಇತರರಿದ್ದರು.