ಜಿಲ್ಲೆ

ಕೆಂಪೇಗೌಡರಿಗೆ ಉತ್ತಮ ಶಿಕ್ಷಣ ಪ್ರಶಸ್ತಿ: ಪರಿಸರ ರೂರಲ್ ಡೆವಲಪ್ಮೆಂಟ್ ಸೊಸೈಟಿಯಿಂದ ಪ್ರದಾನ

ಮಂಡ್ಯ: ಮಕ್ಕಳು ಖಾಸಗಿ ಶಾಲೆ ಬಿಟ್ಟು ಸರ್ಕಾರಿ ಶಾಲೆಗೆ ದಾಖಲು ವಿದ್ಯಾಭ್ಯಾಸ ಮಾಡುವಂತೆ ಶ್ರಮಿಸಿ ಸರ್ಕಾರಿ ಶಾಲೆ ಉಳಿವಿಗಾಗಿ ಶ್ರಮಿಸಿರುವ ಪಾಂಡವಪುರ ತಾಲೂಕು ದೇವರಹಳ್ಳಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಮುಖ್ಯ ಶಿಕ್ಷಕ ಕೆಂಪೇಗೌಡರ ಸಾಧನೆ ಅನನ್ಯ ಎಂದು ಮಿಮ್ಸ್ ಪ್ರಾಧ್ಯಾಪಕ ಡಾ.ಚಂದ್ರೇಗೌಡ ಹೇಳಿದರು.

ನಗರದ ಮಿಮ್ಸ್ ಹೆರಿಗೆ ವಾರ್ಡ್ ಆವರಣದಲ್ಲಿರುವ ಮಮತೆಯ ಮಡಿಲು ನಿತ್ಯ ಅನ್ನದಾಸೋಹ ಕೇಂದ್ರದಲ್ಲಿ ಪರಿಸರ ರೂರಲ್ ಡೆವಲಪ್ಮೆಂಟ್ ಸೊಸೈಟಿ ವತಿಯಿಂದ ಶಿಕ್ಷಕರ ದಿನಾಚರಣೆ ಅಂಗವಾಗಿ ಕೆಂಪೇಗೌಡ ಅವರಿಗೆ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಅವರು, ದೇವನಹಳ್ಳಿ ಗ್ರಾಮದ ಸರ್ಕಾರಿ ಶಾಲೆ ಮುಚ್ಚುವ ಹಂತದಲ್ಲಿ ಶೂನ್ಯ ದಾಖಲಾತಿಯಾಗಿತ್ತು. ಕೆಂಪೇಗೌಡರು ಶಿಕ್ಷಕರಾಗಿ ಬಂದ ನಂತರ 30 ಮಕ್ಕಳು ಶಾಲೆಗೆ ದಾಖಲು ಆಗಿದ್ದಾರೆ. ಶಾಲೆಯ ಮಕ್ಕಳು ಆಕರ್ಷಣೀಯವಾಗಿರಲು ಹಲವು ಅಭಿವೃದ್ಧಿ ಕಾರ್ಯ ಮಾಡುವ ಮೂಲಕ ಆಟೋಟ, ಪರಿಸರ ಸಂರಕ್ಷಣೆ ಮಾಡಲು ಗಿಡಮರ ರಕ್ಷಣೆ, ವಿಜ್ಞಾನದ ಪೀಠೋಪಕರಣವನ್ನು ದಾನಿಗಳ ನೆರವು ಹಾಗೂ ವೈಯುಕ್ತಕವಾಗಿ ಮಾಡಿದ್ದಾರೆ ಎಂದು ತಿಳಿಸಿದರು.

ಪರಿಸರ ರೂರಲ್ ಡೆವಲಪ್ಮೆಂಟ್ ಸೊಸೈಟಿ ಅಧ್ಯಕ್ಷ ಮಂಗಲ ಎಂ.ಯೋಗೀಶ್ ಮಾತನಾಡಿ, ಸರ್ಕಾರಿ ಶಾಲೆ ಎಂದರೆ ಎಲ್ಲರೂ ಮೂಗು ಮುರಿಯುವ ಕಾಲವಿದೆ. ಮಾತ್ರವಲ್ಲದೆ ಸರ್ಕಾರಿ ಶಾಲೆಗೆ ದಾಖಲಿಸಿದರೆ ತಮ್ಮ ಪ್ರತಿಷ್ಠೆ ಕಡಿಮೆಯಾಗುತ್ತದೆ ಎನ್ನುವವರ ನಡುವೆಯೂ ಸರ್ಕಾರಿ ಶಾಲೆ ಎಂದರೆ ಏನೆಂದು ಕೆಂಪೇಗೌಡರು ತೋರಿಸಿಕೊಟ್ಟಿದ್ದಾರೆ ಎಂದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಲೀಲಾವತಿ ಹಾಜರಿದ್ದರು.