ಮಂಡ್ಯ: ಶಿಕ್ಷಕರ ದಿನಾಚರಣೆ ಹಿನ್ನೆಲೆಯಲ್ಲಿ 2022-23ನೇ ಸಾಲಿನ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಜಿಲ್ಲೆಯ ಮದ್ದೂರು ತಾಲೂಕು ಕೊಕ್ಕರೆ ಬೆಳ್ಳೂರು ಸರ್ಕಾರಿ ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಬಾಲಸುಬ್ರಮಣ್ಯ ಆಯ್ಕೆಯಾಗಿದ್ದಾರೆ.
2008ರಿಂದ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಇವರು, ಖೋಖೋ ಮತ್ತು ಕ್ರಿಕೆಟ್ ತರಬೇತುದಾರರಾಗಿ 21 ಬಾರಿ ಕರ್ನಾಟಕವನ್ನು ಪ್ರತಿನಿಧಿಸಿದ್ದಾರೆ. ಇದಲ್ಲದೆ ಇವರಿಂದ ತರಬೇತಿ ಪಡೆದಿರುವ ಪೈಕಿ 55 ವಿದ್ಯಾರ್ಥಿಗಳು ಖೋಖೋ ಹಾಗೂ ಥ್ರೋಬಾಲ್ ಸ್ಪರ್ಧೆಯಲ್ಲಿ 151 ಬಾರಿ ನ್ಯಾಷನಲ್‌ನಲ್ಲಿ ಸ್ಪರ್ಧಿಸಿ 100ಕ್ಕೂ ಹೆಚ್ಚು ಪದಕ ಗೆದ್ದಿದ್ದಾರೆ. 2015ರಲ್ಲಿ ತುಮಕೂರಿನಲ್ಲಿ ನಡೆದಿದ್ದ ನ್ಯಾಷನಲ್ ಖೋಖೋ ಟೂರ್ನಿಯಲ್ಲಿ ಶಾಲೆಯ ವಿದ್ಯಾರ್ಥಿನಿಯರು ಚಿನ್ನದ ಪದಕ ಬಹುಮಾನ ಪಡೆದಿದ್ದರು. ಇದು ಜಿಲ್ಲೆಯ ಮಟ್ಟಿಗೆ ಮೊದಲ ಶಾಲೆ ಎನ್ನುವ ಹೆಗ್ಗಳಿಕೆ ಹೊಂದಿದ್ದಾರೆ. ಅಂತೆಯೇ 2018-19ರಲ್ಲಿ ರಾಜಸ್ಥಾನದಲ್ಲಿ ನಡೆದಿದ್ದ ಟೂರ್ನಿಯಲ್ಲಿ 5ನೇ ಸ್ಥಾನ ಪಡೆದಿತ್ತು. ಇದಲ್ಲದೆ 2018-19ನೇ ಸಾಲಿನಲ್ಲಿ ಪೂನಾದಲ್ಲಿ ನಡೆದಿದ್ದ ಖೇಲೋ ಇಂಡಿಯಾದಲ್ಲಿ ಭಾಗವಹಿಸಿದ್ದ ಶಾಲೆಯ ತಂಡ ಖೋಖೋದಲ್ಲಿ ಐದನೇ ಸ್ಥಾನ ಪಡೆದಿತ್ತು. 2010-11ರಿಂದ 2019-2020 ನೇ ಸಾಲಿನವರೆಗೆ ನಿರಂತರವಾಗಿ ಶಾಲಾ ರಾಷ್ಟ್ರಮಟ್ಟದ ಕ್ರೀಡಾಕೂಟದಲ್ಲಿ ವಿವಿಧ ಆಟದಲ್ಲಿ ಬಹುಮಾನ ಗೆದ್ದಿರುವ ಇತಿಹಾಸವಿದೆ.
ಬಾಲಸುಬ್ರಮಣ್ಯ ಅವರಿಗೆ ತಲಾ 10 ಸಾವಿರ ರೂ ನಗದಿನ ಜತೆಗೆ ಪ್ರಶಸ್ತಿ ನೀಡಲಾಗುವುದು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಅಧೀನ ಕಾರ್ಯದರ್ಶಿ ಎಚ್.ಎಸ್.ಶಿವಕುಮಾರ್ ಆದೇಶದಲ್ಲಿ ತಿಳಿಸಿದ್ದಾರೆ.