ಶಿವಮೊಗ್ಗ: ಶಿವಮೊಗ್ಗದವರೇ ಆದ ಡಿ.ಎನ್.ರೂಪಾ ನಿರ್ಮಾಣದ ಎಂ.ಆನಂದರಾಜ್ ನಿರ್ದೇಶನದ ಬಹುನಿರೀಕ್ಷಿತ ಸಿನಿಮಾ ಶೆಫ್ ಚಿದಂಬರ ರಾಜ್ಯಾದ್ಯಂತ ಯಶಸ್ವಿಯತ್ತ ಪ್ರದರ್ಶನ ಕಾಣುತ್ತಿದೆ ಎಂದು ನಟ ಅನಿರುದ್ಧ್ ಹೇಳಿದರು.
ಈ ಚಿತ್ರವು ಒಂದು ಕೌತುಕ ಮತ್ತು ವಿನೂತನ ಪ್ರಯತ್ನವಾಗಿದೆ. ಕೊಲೆಗಳ ಸುತ್ತ ನಡೆಯುವ ಆ್ಯಕ್ಷನ್, ಥ್ರಿಲರ್ ಕಥಾಹಂದರ ಹೊಂದಿರುವ ಹಾಸ್ಯಮಯ ಚಿತ್ರ ಇದಾಗಿದ್ದು ಕೊಲೆಗಳ ಸುತ್ತ ಇರುವ ಚಿತ್ರವಾದರೂ ಇದೊಂದು ಹಾಸ್ಯದ ಸುತ್ತ ಇರುವ ಭಾವನೆಗಳನ್ನು ಬಿಂಬಿಸುವ ಸಂಪೂರ್ಣ ಮನರಂಜನೆ ನೀಡುತ್ತದೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ನಾಟ್ಯ, ಸಾಹಸ, ಉತ್ತಮ ಸಂಗೀತ, ಸಾಹಿತ್ಯವನ್ನು ಹೊಂದಿದ್ದು, ಪೂರ್ಣ ಪ್ರಮಾಣದ ಇಡೀ ಕುಟುಂಬ ಕುಳಿತು ನೋಡುವ ಚಿತ್ರವಾಗಿದೆ. ಈ ಚಿತ್ರದಲ್ಲಿ ನಿಧಿಸುಬ್ಬಯ್ಯ ಹಾಗೂ ರೆಚಲ್ ಡೇವಿಡ್ ಎಂಬ ಇಬ್ಬರು ನಾಯಕಿಯರಿದ್ದಾರೆ. ಚಿತ್ರಕ್ಕೆ ಋತ್ವಿಕ್ ಮುರಳೀಧರ್ ಸಂಗೀತ ನೀಡಿದ್ದು, ಉದಯ ಲೀಲಾ ಛಾಯಾಗ್ರಹಣ ಮಾಡಿದ್ದಾರೆ. ಶಿವಮೊಗ್ಗದ ಭಾರತ್ ಚಿತ್ರಮಂದಿರದಲ್ಲಿ ಚಿತ್ರ ಬಿಡುಗಡೆಯಾಗಿದೆ. ಶಿವಮೊಗ್ಗದ ಪ್ರೇಕ್ಷಕರು ಈ ಚಿತ್ರವನ್ನು ನೋಡಿ ಹರಸಬೇಕು ಎಂದರು. ನಿರ್ಮಾಪಕಿ ಡಿ.ಎನ್.ರೂಪಾ, ಶ್ರೀಗಣೇಶ್, ಮಾಧವಿ ಸುದ್ದಿಗೋಷ್ಠಿಯಲ್ಲಿದ್ದರು.