ಜಿಲ್ಲೆ

ಸಿಬ್ಬಂದಿ ಕೊರತೆಯೇ ಬೆಸ್ಕಾಂ ಸಮಸ್ಯೆ

ಸಮರ್ಪಕ ಕಾರ್ಯನಿರ್ವಹಣೆಗೆ ಅಡ್ಡಿ- ಮಂಜೂರಾದ 1708 ಹುದ್ದೆಗಳ ಪೈಕಿ 809 ಖಾಲಿ

ಎನ್. ವೆಂಕಟೇಶ್, ಚಿಕ್ಕಬಳ್ಳಾಪುರ

ಜಿಲ್ಲೆಯ ಬೆಸ್ಕಾಂನಲ್ಲಿ ಮಂಜೂರಾದ 1708 ಹುದ್ದೆಗಳ ಪೈಕಿ 809 ಹುದ್ದೆಗಳು ಖಾಲಿ ಇದ್ದು ಶೇ.53ರಷ್ಟು ಸಿಬ್ಬಂದಿ ಮಾತ್ರ ಕಾರ್ಯ ನಿರ್ವಹಿಸುತ್ತಿದ್ದಾರೆ.
ಸರ್ಕಾರದ ವಿವಿಧ ಯೋಜನೆಗಳ ಅನುಷ್ಠಾನ, ಕಾಮಗಾರಿಗಳ ನಿರ್ವಹಣೆ ಮತ್ತು ಸಮಸ್ಯೆಗಳ ಪರಿಹಾರದ ಮೂಲಕ ಸಮರ್ಪಕ ವಿದ್ಯುತ್ ಪೂರೈಕೆಗೆ ಶ್ರಮಿಸುವ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ದೊಡ್ಡ ಸಮಸ್ಯೆಯಾಗಿದೆ. ಇರುವ ಸಿಬ್ಬಂದಿ ಹೆಚ್ಚುವರಿ ಜವಾಬ್ದಾರಿ ಹೊರುವುದರೊಂದಿಗೆ ಕರ್ತವ್ಯ ನಿರ್ವಹಿಸಬೇಕಾಗಿದೆ.
ಜಿಲ್ಲೆಯ ಗೌರಿಬಿದನೂರು, ಚಿಕ್ಕಬಳ್ಳಾಪುರ, ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರಗಳನ್ನೊಳಗೊಂಡಂತೆ ಚಿಕ್ಕಬಳ್ಳಾಪುರ ವಿಭಾಗ ಮತ್ತು ಚಿಂತಾಮಣಿ, ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರಗಳನ್ನೊಳಗೊಂಡಂತೆ ಚಿಂತಾಮಣಿ ವಿಭಾಗದಲ್ಲಿ (ಎರಡು ವಿಭಾಗದಲ್ಲಿ) ಬೆಸ್ಕಾಂ ಜವಾಬ್ದಾರಿ ಹಂಚಿಕೊಂಡಿದೆ. ಇಲ್ಲಿ 39 ಶಾಖಾ ಕಚೇರಿಗಳು ಮತ್ತು 45 ಉಪಕೇಂದ್ರಗಳಿದ್ದು 478 ವಿದ್ಯುತ್ ಮಾರ್ಗಗಳಿವೆ. ಬರೋಬ್ಬರಿ 42997 ವಿದ್ಯುತ್ ಪರಿವರ್ತಕಗಳಿವೆ. ಕೃಷಿ, ನಿರಂತರ ಜ್ಯೋತಿ, ಕುಡಿಯುವ ನೀರು, ಕೈಗಾರಿಕೆ, ನಗರ, ಮಿಶ್ರಿತ ಹೊರೆ ಮಾರ್ಗಗಳ ನಿರ್ವಹಣೆ, ಹಾಗೆಯೇ 4,97,228 ವಿದ್ಯುತ್ ಗ್ರಾಹಕರನ್ನು ನಿಭಾಯಿಸಬೇಕಾಗಿದೆ.


ಶೇ.47ರಷ್ಟು ನೇಮಕಾತಿಯಾಗಿಲ್ಲ

ಯಾವುದೇ ಇಲಾಖೆ ಸುಗಮವಾಗಿ ಕಾರ್ಯ ನಿರ್ವಹಿಸಬೇಕಾದರೆ ಸಮರ್ಪಕ ಮಾನವ ಸಂಪನ್ಮೂಲ ಮತ್ತು ಮೂಲಸೌಕರ್ಯದ ಅಗತ್ಯವಿದೆ. ಆದರೆ, ಬಹುತೇಕ ಇಲಾಖೆಗಳ ಮಾದರಿಯಲ್ಲಿ ಬೆಸ್ಕಾಂನಲ್ಲೂ ಸಿಬ್ಬಂದಿ ಕೊರತೆಯೇ ದೊಡ್ಡ ಸಮಸ್ಯೆಯಾಗಿದೆ.
ಸಹಾಯಕ ಕಾರ್ಯ ನಿರ್ವಾಹಕ, ಸಹಾಯಕ, ಕಿರಿಯ ಇಂಜಿನಿಯರ್, ಮೆಕಾನಿಕ್, ಮೇಲ್ವಿಚಾರಕರು, ಆಪರೇಟರ್, ಕಾವಲುಗಾರರು, ಉಗ್ರಾಣ ಪರಿಚಾರಕರು, ಪವರ್‌ಮ್ಯಾನ್, ಗ್ರೂಪ್ ಡಿ ಸೇರಿ ವಿವಿಧ ಹುದ್ದೆಗಳು ಖಾಲಿ ಇವೆ. 1708 ಹುದ್ದೆಗಳು ಮಂಜೂರಾಗಿದ್ದು 899 ಹುದ್ದೆಗಳು ಮಾತ್ರ ಭರ್ತಿಯಾಗಿದ್ದು, ಶೇ.47ರಷ್ಟು ಹುದ್ದೆಗಳಿಗೆ ನೇಮಕಾತಿಯಾಗಿಲ್ಲ.


ಸಿಬ್ಬಂದಿಗೆ ಹೆಚ್ಚಿದ ಒತ್ತಡ
ಸದಾ ಒತ್ತಡದಲ್ಲಿ ಕಾರ್ಯ ನಿರ್ವಹಿಸುವ ಇಲಾಖೆಗಳಲ್ಲಿ ಬೆಸ್ಕಾಂ ಕೂಡ ಒಂದು. ವಿವಿಧ ಯೋಜನೆ ಮತ್ತು ಕಾಮಗಾರಿಗಳ ಅನುಷ್ಠಾನದ ನಡುವೆ ವಿದ್ಯುತ್ ಅವಘಡಗಳಿಗೆ ಕಡಿವಾಣ, ಸಮರ್ಪಕ ವಿದ್ಯುತ್ ಪೂರೈಕೆ, ಗ್ರಾಹಕರ ಸಮಸ್ಯೆಗಳ ಪರಿಹಾರಕ್ಕೆ ಒತ್ತು ನೀಡಬೇಕು. ಇದಕ್ಕೆ ಅಗತ್ಯಕ್ಕೆ ತಕ್ಕಂತೆ ಸಿಬ್ಬಂದಿ ಬೇಕು. ಇಲ್ಲದಿದ್ದಲ್ಲಿ ಪರಿಣಾಮಕಾರಿ ಕೆಲಸ ನಿರ್ವಹಿಸಲು ಸಾಧ್ಯವಾಗುವುದಿಲ್ಲ. ಇದರಿಂದ ನಿರಂತರ ಒತ್ತಡಕ್ಕೆ ಸಿಲುಕಬೇಕಾದ ಪರಿಸ್ಥಿತಿ ಎದುರಾಗುತ್ತಿರುತ್ತದೆ.

ವಿವಿಧ ಹುದ್ದೆಗಳ ನೇಮಕ, ಖಾಲಿ ಇರುವ ವಿವರ
ದರ್ಜೆ ಮಂಜೂರಾತಿ ನೇಮಕ ಖಾಲಿ
ಗ್ರೂಪ್ ಎ 21 16 5
ಗ್ರೂಪ್ ಬಿ 61 41 20
ಗ್ರೂಪ್ ಸಿ 600 416 184
ಗ್ರೂಪ್ ಡಿ 1016 418 598
ಎರವಲು ಸೇವೆ 10 8 2


ಬೆಸ್ಕಾಂ ಮಾತ್ರವಲ್ಲ, ಆರೋಗ್ಯ, ಶಿಕ್ಷಣ, ಗ್ರಾಮೀಣಾಭಿವೃದ್ಧಿ ಸೇರಿ ವಿವಿಧ ಇಲಾಖೆಗಳಲ್ಲಿ ಸಿಬ್ಬಂದಿ ಕೊರತೆ ಇದೆ. ಕಾಲಕಾಲಕ್ಕೆ ಹುದ್ದೆಗಳನ್ನು ಭರ್ತಿಗೊಳಿಸಿದಾಗ ಉತ್ತಮ ಕಾರ್ಯ ನಿರ್ವಹಣೆ ಸಾಧ್ಯವಾಗುತ್ತದೆ. ಆದರೆ, ಇದಕ್ಕೆ ಸೂಕ್ತ ಕ್ರಮ ಕೈಗೊಳ್ಳದಿರುವುದರಿಂದ ಸಮಸ್ಯೆಗಳನ್ನು ಎದುರಿಸುವಂತಾಗಿದೆ.
- ಹೆಸರು ಹೇಳಲು ಇಚ್ಛಿಸದ ಬೆಸ್ಕಾಂ ಸಿಬ್ಬಂದಿ, ಚಿಕ್ಕಬಳ್ಳಾಪುರ
1