| ಸೋರಲಮಾವು ಶ್ರೀಹರ್ಷ ತುಮಕೂರು
ಅಸಮರ್ಪಕ ವಿದ್ಯುತ್ ಪೂರೈಕೆ ಖಂಡಿಸಿ ಕಳೆದ 20 ವರ್ಷದಿಂದ ಮನೆಗಳ ವಿದ್ಯುತ್ ಬಿಲ್ ಪಾವತಿಸದೇ ಚಳವಳಿ ಮುನ್ನಡೆಸಿರುವ ಅಪರೂಪದ ಪ್ರಕರಣಕ್ಕೆ ತಿಪಟೂರು ತಾಲೂಕಿನ ತಿಮ್ಮಲಾಪುರ, ಬಸವನಹಳ್ಳಿ ಹಾಗೂ ಚಿಕ್ಕನಾಯಕನಹಳ್ಳಿ ತಾಲೂಕಿನ ಲಕ್ಮಗೊಂಡನಹಳ್ಳಿಯ 140ಕ್ಕೂ ಹೆಚ್ಚು ರೈತ ಕುಟುಂಬಗಳು ಸಾಕ್ಷಿಯಾಗಿವೆ.
2002ರಿಂದಲೂ ವಿದ್ಯುತ್ ಬಿಲ್ ಪಾವತಿಸದೇ ಬಾಕಿ ಉಳಿಸಿಕೊಂಡಿದ್ದು, ಚಳವಳಿ ಮುಂದುವರಿದಿದೆ. ಪ್ರಸ್ತುತ 1.05 ಕೋಟಿ ರೂ. ವಿದ್ಯುತ್ ಬಿಲ್ ಬಾಕಿಯಿದ್ದು ಅದನ್ನು ಕಟ್ಟಿಸಿಕೊಳ್ಳುವುದು ಬೆಸ್ಕಾಂಗೆ ಸವಾಲಾಗಿದೆ. ರಾಜ್ಯ ರೈತ ಸಂಘ ರೈತರ ಮನೆಗಳ ವಿದ್ಯುತ್ ಬಿಲ್ ಕಟ್ಟದಂತೆ ಕರೆ ನೀಡಿದ್ದ ‘ಕರ ನಿರಾಕರಣ ಚಳವಳಿ’ 20 ವರ್ಷ ಪೂರೈಸಿದೆ.
ಅಂದು ಗ್ರಾಮೀಣ ಭಾಗದಲ್ಲಿ ದಿನಕ್ಕೆ ಕೇವಲ 90 ನಿಮಿಷ ವಿದ್ಯುತ್ ಪೂರೈಕೆಯಾಗುತ್ತಿದ್ದರಿಂದ ಬೆಳೆ ಬೆಳೆಯಲಾಗದೆ ಕಂಗಾಲಾಗಿದ್ದ ರೈತರು ರಾಜ್ಯದಲ್ಲೆಡೆ ಚಳವಳಿ ಆರಂಭಿಸಿದ್ದರು. ರೈತ ಸಂಘದ ಚಳವಳಿಗೆ ಹೆಸರಾಗಿದ್ದು, ತಿಪಟೂರು ಹಾಗೂ ಚಿಕ್ಕನಾಯಕನಹಳ್ಳಿ ತಾಲೂಕಿನ ಹಳ್ಳಿಗಳ ರೈತರು ಇಂದಿಗೂ ಅದನ್ನು ಮುಂದುವರಿಸಿರುವುದರಿಂದ ಪ್ರಸ್ತುತ ಸಂಧಾನಕ್ಕೆ ಬೆಸ್ಕಾಂ ಮುಂದಾಗಿದೆ.
ತಿಮ್ಮಲಾಪುರದಲ್ಲಿ 65 ಲಕ್ಷ ರೂಪಾಯಿ, ಲಕ್ಮಗೊಂಡನಹಳ್ಳಿಯಲ್ಲಿ 40 ಲಕ್ಷ ರೂಪಾಯಿ ಹಾಗೂ ಬಸವನಹಳ್ಳಿಯಲ್ಲಿ 5 ಲಕ್ಷ ರೂಪಾಯಿ ವಿದ್ಯುತ್‌ಬಿಲ್ ಬಾಕಿಯಿದೆ. ಪ್ರಸ್ತುತ ಎಲ್ಲ ಗ್ರಾಮದಲ್ಲಿಯೂ ಸಮರ್ಪಕ ವಿದ್ಯುತ್ ಪೂರೈಕೆಯಾಗುತ್ತಿದ್ದು ಚಳವಳಿ ಕೈಬಿಟ್ಟು ಬಾಕಿಯ ಜತೆಗೆ ವಿದ್ಯುತ್ ಬಿಲ್ ಪಾವತಿಸಬೇಕು ಎಂದು ಬೆಸ್ಕಾಂ ಅಧಿಕಾರಿಗಳು ರೈತರ ಮನವೊಲಿಕೆಗೆ ಮುಂದಾಗಿದೆ.
ಈಗಾಗಲೇ ಗ್ರಾಮಕ್ಕೆ ತೆರಳಿ ರೈತರ ಜತೆ ಮಾತನಾಡಿರುವ ಬೆಸ್ಕಾಂ ಇಲಾಖೆ ಅಧಿಕಾರಿಗಳ ಪ್ರಸ್ತಾಪ ಒಪ್ಪಿರುವ ರೈತರೂ ಬಾಕಿ ಮೊತ್ತವನ್ನು ಮನ್ನಾ ಮಾಡಬೇಕು ಎಂಬ ಬೇಡಿಕೆ ಇಟ್ಟಿದ್ದಾರೆ. ಸ್ಥಳೀಯ ಶಾಸಕ, ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ನೇತೃತ್ವದಲ್ಲಿ ಸಂಧಾನ ಸಭೆ ನಡೆಯಲಿದ್ದು, ಕ್ಯಾಬಿನೆಟ್‌ನಲ್ಲಿಟ್ಟು ಬಾಕಿ ಮನ್ನಾ ಮಾಡುವ ಚಿಂತನೆ ನಡೆದಿದೆ ಎನ್ನಲಾಗಿದೆ.
2002ರಲ್ಲಿ ಎಸ್.ಎಂ.ಕೃಷ್ಣ ಅವರು ಸಿಎಂ ಆಗಿದ್ದಾಗ ರಾಜ್ಯದೆಲ್ಲೆಡೆ ವಿದ್ಯುತ್ ಸಮಸ್ಯೆ ಎದುರಾಗಿದ್ದಾಗ ಅದನ್ನು ಪ್ರತಿಭಟಿಸಿ, ಸಮರ್ಪಕ ವಿದ್ಯುತ್ ಪೂರೈಕೆಗೆ ಆಗ್ರಹಿಸಿ ಆರಂಭಿಸಿದ್ದ ‘ಕರ ನಿರಾಕರಣೆ ಚಳವಳಿ’ ಕಾರಣಕ್ಕೆ ಇಂದಿಗೂ ವಿದ್ಯುತ್ ಬಿಲ್ ಪಾವತಿಸಿಲ್ಲ. ಚಳವಳಿ ಗೌರವಿಸಿ ಸರ್ಕಾರ ಹಿಂದಿನ ಬಿಲ್ ಮನ್ನಾ ಮಾಡಿದರೆ ಮುಂದೆ ಬಿಲ್ ಪಾವತಿಸಲು ರೈತರು ಒಪ್ಪಿಗೆ ಸೂಚಿಸಿದ್ದು, ಶೀಘ್ರದಲ್ಲಿಯೇ ಸಚಿವ ಬಿ.ಸಿ.ನಾಗೇಶ್ ನೇತೃತ್ವದಲ್ಲಿ ಸಭೆ ನಡೆಯಲಿದೆ. ತಿಮ್ಮಲಾಪುರ ದೇವರಾಜು, ರೈತ ಸಂಘದ ಮುಖಂಡ ಸಾಕಷ್ಟು ವರ್ಷದಿಂದ ರೈತರು ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿದ್ದಾರೆ. ಚಳವಳಿ ಗೌರವಿಸಿ ಬೆಸ್ಕಾಂ ಕೂಡ ಸೇವೆಯನ್ನು ನೀಡುತ್ತಿದೆ. ಪ್ರಸ್ತುತ ವಿದ್ಯುತ್ ಸಮಸ್ಯೆ ಬಗೆಹರಿದಿದ್ದು ರೈತರು ಬಿಲ್ ಪಾವತಿಸಬೇಕು, ನಮ್ಮ ಹಂತದಲ್ಲಿ ಬಿಲ್ ಮನ್ನಾಗೊಳಿಸಲು ಅವಕಾಶವಿಲ್ಲ. ಹಾಗಾಗಿ, ಗ್ರಾಮಗಳಿಗೆ ಭೇಟಿ ನೀಡಿ ಬಿಲ್ ಪಾವತಿಸಲು ಮನವಿ ಮಾಡಿದ್ದೇವೆ, ಸಮಸ್ಯೆ ಬಗೆಹರಿಯುವ ವಿಶ್ವಾಸವಿದೆ. ಮನೋಹರ್ ಬೆಸ್ಕಾಂ ಎಇಇ, ತಿಪಟೂರು