ಜಿಲ್ಲೆ

ಆಪ್​ನಲ್ಲಿ ‘ಬೆಪ್ಪುತಕ್ಕಡಿ ಬೋಳೇಶಂಕರ’

ಹುಬ್ಬಳ್ಳಿ: ಯಶವಂತ ಸರದೇಶಪಾಂಡೆ ಅವರ ‘ಗುರು ಇನ್ಸ್​ಟಿಟ್ಯೂಟ್ ಹುಬ್ಬಳ್ಳಿ’ ರಂಗಭೂಮಿಗೆ ಹೊಸ ರೂಪ ಕೊಡಲು ಸಜ್ಜಾಗಿದೆ. ಜಾನಪದವನ್ನು ರಂಗಭೂಮಿ ಮೂಲಕ ಮತ್ತಷ್ಟು ಜನರಿಗೆ ತಲುಪಿಸಲು ಉದ್ದೇಶಿಸಿದೆ. ನಾವೆಲ್ಲಿ ಲಿಗ್​ನೆಟ್ ಕಾಪೋರೇಷನ್(ಎನ್​ಎಲ್​ಸಿ) ಕೈ ಜೋಡಿಸಿದ್ದು, ಬಹು ಮಾಧ್ಯಮ ಹಾಗೂ ತಂತ್ರಜ್ಞಾನವನ್ನು ಬಳಸಿಕೊಳ್ಳಲು ನಿರ್ಧರಿಸಲಾಗಿದೆ.

ಪ್ರಥಮವಾಗಿ ಜ್ಞಾನಪೀಠ ಪುರಸ್ಕೃತ ಡಾ. ಚಂದ್ರಶೇಖರ ಕಂಬಾರ ಅವರ ‘ಬೆಪ್ಪುತಕ್ಕಡಿ ಬೋಳೇಶಂಕರ’ ಜಾನಪದ ನಾಟಕವನ್ನು ಆಯ್ದುಕೊಳ್ಳಲಾಗಿದೆ. ರಂಗ ಪ್ರಯೋಗ ಕಂಡಿದ್ದರೂ ಆಧುನಿಕ ತಂತ್ರಜ್ಞಾನದ ಮೂಲಕ ಪ್ರೇಕ್ಷಕರನ್ನು ಹೆಚ್ಚಿಸುವ ಉದ್ದೇಶ ಹೊಂದಲಾಗಿದೆ. ಅದಕ್ಕಾಗಿಯೇ ಗುರು ಇನ್ಸ್​ಟಿಟ್ಯೂಟ್ ಹುಬ್ಬಳ್ಳಿಯ ವಿಜಯ ರಂಗದಲ್ಲಿ ನಾಟಕ ಪ್ರಯೋಗ, ರಿಹರ್ಸಲ್ ಎಲ್ಲವೂ ನಡೆದಿದ್ದು, ಪ್ರಗುಣಿ ಒಟಿಟಿ ಪ್ಲಾಟ್​ಫಾಮ್ರ್ ಮೂಲಕ ಡಿಸೆಂಬರ್ 8ರ ನಂತರ ‘ಆಪ್’ ಮೂಲಕ ಜನರಿಗೆ ತಲುಪಿಸಲು ನಿರ್ಧರಿಸಲಾಗಿದೆ.

‘ನೋಡು’ ಟೆಕ್ಸ್ಟ್ ಐಡಿಯಾ ಒಂದನ್ನು ಆಯ್ದುಕೊಳ್ಳಲಾಗಿದೆ. ಅಂದರೆ ಆಪ್ ಮೂಲಕ ಎಲ್ಲರೂ ಇಂಥ ಜಾನಪದ ಕಲೆ, ನಾಟಕವನ್ನು ನೋಡಲಿ ಎಂಬುದು ಇದರ ಒಳಾರ್ಥ. ಇದು ಪಿಯುಸಿ ವಿದ್ಯಾರ್ಥಿಗಳಿಗೆ ಪಠ್ಯ ಇರುವುದರಿಂದ ‘ನೋಡು’ಗರ ಸಂಖ್ಯೆ ಹೆಚ್ಚಲಿದೆ. ವರ್ಷಕ್ಕೆ 10 ಸಾವಿರ ಜನರು ನೋಡಿದರೂ ಪ್ರೇಕ್ಷಕರ ಸಂಖ್ಯೆ ಮತ್ತಷ್ಟು ವೃದ್ಧಿಯಾಗಲಿದೆ. ಹು-ಧಾ ಕಲಾವಿದರು ಹಾಗೂ ರೋಟರಿ ಸರಸ್ವತಿ ಶಾಲೆ ಮಕ್ಕಳು ನಾಟಕದ ಪಾತ್ರಧಾರಿಗಳಾಗಿದ್ದಾರೆ.

ಕಲಾವಿದರು ಇವರು...

ಲಕ್ಷ್ಮಣ ನರಸಾಪುರ, ಚೌಡಪ್ಪ, ವಿನಯ್ ಯು.ಜೆ., ಪ್ರತೀಕ್ ಕುರಹಟ್ಟಿ, ಪ್ರಿಯಾ ಕುಲಕರ್ಣಿ, ರಶ್ಮಿ, ಶೋಭಾ ಹೆಗಡೆ, ಪ್ರದೀಪ ಮುಧೋಳ, ಮಲ್ಲಿಕಾರ್ಜುನ ಹಿರೇಮಠ ವಿವಿಧ ಪಾತ್ರಗಳನ್ನು ಮಾಡುತ್ತಿದ್ದಾರೆ. ಸಂತೋಷ ಮಹಾಲೆ ಮೇಕಪ್, ಶ್ರೀನಿವಾಸ ಜೋಶಿ ಸಂಗೀತ, ಸಂಜನಾ ಕುಲಕರ್ಣಿ, ಅಮೋದಿನಿ ಮಹಾಲೆ, ಗೋಪಾಲ ಜೋಶಿ, ನವೀನ್ ಮೇಳ, ಕೃಷ್ಣ ಮೂರ್ತಿ, ಸೋಹಿಲ್ ತಬಲಾ, ನಾಗರಾಜ ಪಾಟೀಲ, ಜೀವನ ಫರ್ನಾಂಡಿಸ್ ಲೈಟಿಂಗ್ ಮತ್ತು ತಾಂತ್ರಿಕ ನಿರ್ವಹಣೆ ಮಾಡುತ್ತಿದ್ದಾರೆ. ಹಳೆಯ ಮತ್ತು ಹೊಸ ಕಲಾವಿದರನ್ನೇ ಬಳಸಿಕೊಂಡು ನಾಟಕ ಪ್ರಯೋಗ ನಡೆಯುತ್ತಿದೆ. ಅ. 15ರಿಂದ ಆರಂಭವಾಗಿದ್ದು, ನ. 30ರವರೆಗೆ ನಡೆಯಲಿದೆ. ಪ್ರಮೋದ್ ಶಿಗ್ಗಾಂವ್ ನಿರ್ದೇಶಕರಾಗಿದ್ದಾರೆ.

ಆಪ್ ಡೌನ್​ಲೋಡ್ ಹೀಗೆ

ಗೂಗಲ್ ಪ್ಲೇ ಸ್ಟೋರ್​ಗೆ ಹೋಗಿ ಪ್ರಗುಣಿ ಎಂದು ಟೈಪ್ ಮಾಡಬೇಕು. ಆಗ ಆಪ್ ಬರುತ್ತದೆ. ಅದನ್ನು ಡೌನ್​ಲೋಡ್ ಮಾಡಿಕೊಂಡು ಡಿ. 8ರ ನಂತರ ನಾಟಕವನ್ನು ವೀಕ್ಷಿಸಬಹುದು. ಈ ಆಪ್ ಕನ್ನಡ ಕಂಪನ್ನು ವಿಶ್ವದೆಲ್ಲೆಡೆ ಹರಡಲು ಸಜ್ಜಾಗಿದೆ. ಈಗಾಗಲೇ 95ಕ್ಕೂ ಹೆಚ್ಚು ಕಿರುಚಿತ್ರ, ಜಾನಪದ, ಯಕ್ಷಗಾನ ಹೀಗೆ ಸಾಂಸ್ಕೃತಿಕ ಕಲೆಗಳನ್ನು ಪರಿಚಯಿಸುತ್ತಿದೆ.

ಕರೊನಾ ಸಂಕಷ್ಟದಲ್ಲಿ ಕಲಾವಿದರು ಬಹಳಷ್ಟು ಕಷ್ಟಪಟ್ಟಿದ್ದೇವೆ. ರಂಗಭೂಮಿಗೆ ತಂತ್ರಜ್ಞಾನ ಬಳಕೆ ಮಾಡಿಕೊಂಡು ಜಗತ್ತಿಗೆ ಪರಿಚಯಿಸಬೇಕು ಎಂಬ ಉದ್ದೇಶ ತಲೆಯಲ್ಲಿ ಬಂತು. ಹಾಗಾಗಿ ಕಂಬಾರರ ಜಾನಪದ ನಾಟಕವನ್ನು ಆಯ್ಕೆ ಮಾಡಿಕೊಂಡು ಪ್ರಯೋಗ ಮಾಡುತ್ತೇವೆ. ವೀಕ್ಷಕರಿಗೆ ಇಷ್ಟವಾಗುತ್ತದೆ ಎಂಬ ವಿಶ್ವಾಸವಿದೆ.-ಯಶವಂತ ಸರದೇಶಪಾಂಡೆ, ಗುರು ಇನ್ಸ್​ಟಿಟ್ಯೂಟ್ ಹುಬ್ಬಳ್ಳಿ ಸಂಸ್ಥಾಪಕ
ಬೇಸರ ಕಳೆಯಲು ಜನರು ಸಾಂಸ್ಕೃತಿಕ ಲೋಕಕ್ಕೆ ಮರಳಲೇಬೇಕು. ರಂಗಭೂಮಿಯನ್ನು ಸೃಜನಾತ್ಮಕವಾಗಿ ಜನರಿಗೆ ತಲುಪಿಸಲು ಒಂದು ಅವಕಾಶ ಸಿಕ್ಕಿದೆ. ಎಲ್ಲ ರೀತಿಯಲ್ಲಿ ಈ ಕಲೆಯನ್ನು ಜೀವಂತವಾಗಿಡುತ್ತೇವೆ.-ಪ್ರಮೋದ ಶಿಗ್ಗಾಂವ್, ಬೆಪ್ಪುತಕ್ಕಡಿ ಬೋಳೇಶಂಕರ ನಾಟಕ ನಿರ್ದೇಶಕ
ಕನ್ನಡದ ಮೊದಲ ಆಪ್ ಪ್ರಗುಣಿ. ಈಗಾಗಲೇ ಕಿರು ಚಿತ್ರೋತ್ಸವ ನಡೆದಿದೆ. ನೋಡುಗರಿಗೂ ಪ್ರಶಸ್ತಿ ನೀಡಲಾಗುತ್ತಿದೆ. ಇಂಥ ಆಪ್ ಮೂಲಕ ಡಿ. 8ರ ನಂತರ ಬೆಪ್ಪುತಕ್ಕಡಿ ಬೋಳೇಶಂಕರ ನಾಟಕವನ್ನು ಎಲ್ಲರೂ ನೋಡಬಹುದು.-ಗುರುಪ್ರಸಾದ ಮುದ್ರಾಡಿ, ಸಹ ಸಂಸ್ಥಾಪಕ, ಪ್ರಗುಣಿ ಒಟಿಟಿ ಪ್ಲಾಟ್​ಫಾಮ್ರ್ ಬೆಂಗಳೂರು

EndFragment