RAICHUR 
ಜಿಲ್ಲೆ

ನಾಡಪ್ರಭು ಕೆಂಪೇಗೌಡರ ಆದರ್ಶಗಳನ್ನು ಪಾಲನೆ ಮಾಡಲು ಬಿಇಓ ಸಲಹೆ

ರಾಯಚೂರು ಇಂದಿನ ಪೀಳಿಗೆಯು ನಾಡಪ್ರಭು ಕೆಂಪೇಗೌಡರು ಹಾಕಿಕೊಟ್ಟಿರುವ ಹಾದಿಯಲ್ಲೇ ನಡೆದು, ಅವರ ಆದರ್ಶಗಳನ್ನು ಪಾಲನೆ ಮಾಡಬೇಕೆಂದು ಬಿಇಓ ಈರಣ್ಣ ಕೋಸಗಿ ಹೇಳಿದರು.

ನಗರದ ಪಂಡಿತ ಜಂಬಲದಿನ್ನಿ ರಂಗಮಂದಿರದಲ್ಲಿ ಶುಕ್ರವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ನಾಡಪ್ರಭು ಕೆಂಪೇಗೌಡ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ನಾಡಪ್ರಭು ಕೆಂಪೇಗೌಡರ ಜನ್ಮದಿನವು ಕನ್ನಡ ನಾಡಿನ ಪಾಲಿಗೆ ಒಂದು ಶುಭದಿನ. ಬೆಂಗಳೂರಿನಂಥ ಮಹಾನಗರಕ್ಕೆ ತಳಪಾಯ ಹಾಕಿದ ನಾಡಪ್ರಭುಗಳ ಜನ್ಮದಿನವಿದು. ಇದನ್ನು ಸರ್ಕಾರವು ವಿಜೃಂಭಣೆಯಿಂದ ಆಚರಿಸುತ್ತಿದ್ದು, ಈ ಮೂಲಕ ಬೆಂಗಳೂರಿನ ಜನಕನ್ನು ಸ್ಮರಿಸುತ್ತಿದೆ. ಈ ಮೂಲಕ, ಕೆಂಪೇಗೌಡರ ವೈಭವದ ಪರಂಪರೆಯನ್ನು ಹೊಸ ತಲೆಮಾರುಗಳಿಗೆ ವರ್ಗಾಯಿಸುವ ಕೆಲಸವೂ ಆಗುತ್ತಿದೆ ಎಂದರು.

ಹಿರಿಯ ಸಾಹಿತಿ ವೀರಹನುಮಾನ್ ಉಪನ್ಯಾಸ ನೀಡಿ, ಬೆಂಗಳೂರು ಇಂದು ಬಹುದೊಡ್ಡ ಶಿಕ್ಷಣ ತಾಣವಾಗಿದೆ. ಸಾವಿರಾರು ಜನರ ಪಾಲಿಗೆ ಸೂರಾಗಿದೆ. ವಿದೇಶೀಯರ ಪಾಲಿಗೆ ಅಚ್ಚುಮೆಚ್ಚಿನ ಹೂಡಿಕೆ, ಕೈಗಾರಿಕೆ, ಆಡಳಿತ, ಸಂಸ್ಕೃತಿ, ಶಾಂತಿ ಸೇರಿದಂತೆ ಇತರೆ ಕ್ಷೇತ್ರದಲ್ಲಿ ಬೆಂಗಳೂರು ಹೆಸರಾಗಿದೆ. ಕೆಂಪೇಗೌಡರು ಬೆಂಗಳೂರನ್ನು ತುಂಬಾ ವೈಜ್ಞಾನಿಕವಾದ ಒಂದು ನಗರವನ್ನಾಗಿ ಬೆಳೆಸಬೇಕೆಂಬ ಮಹಾದಾಸೆ ಹೊತ್ತಿದ್ದರು. ಜನಜೀವನ ಮತ್ತು ನಾಗರಿಕತೆಗಳ ವಿಕಸನಕ್ಕೆ ನೀರಿನ ಆಸರೆ ಇರಬೇಕು. ಕೆಂಪೇಗೌಡರು ಬೆಂಗಳೂರಿನ ತುಂಬೆಲ್ಲ ಕೆರೆಗಳನ್ನು ಕಟ್ಟುತ್ತ, ಇದನ್ನು ಸಾವಿರ ಕೆರೆಗಳ ನಾಡನ್ನಾಗಿ ಮಾಡಿದರು. ಇದಕ್ಕೆ ಉದಾಹರಣೆಯಾಗಿ ಇಂದಿಗೂ ಆನೇಕ ಕೆರೆಗಳನ್ನು ನಾವು ನೋಡಬಹುದಾಗಿದೆ ಎಂದರು.

 

ನಂತರ ಎಂ ಜೆ ಡ್ಯಾನ್ಸ್ ಫಿಟ್ನೆಸ್ ಅಕಾಡೆಮಿ ವತಿಯಿಂದ ಕೆಂಪೇಗೌಡರಿಗೆ ಸಂಬಂಧಿಸಿದ ಸಾಂಗ್‌ಗೆ ವಿದ್ಯಾರ್ಥಿಗಳು ನೃತ್ಯ ಮಾಡಿ ಪ್ರೇಕ್ಷಕರ ಗಮನ ಸೆಳೆದರು.

ಈ ಸಂದರ್ಭದಲ್ಲಿ ರಾಯಚೂರು ಮಹಾನಗರ ಪಾಲಿಕೆಯ ಅಧ್ಯಕ್ಷೆ ನರಸಮ್ಮ ಮಾಡಗಿರಿ ಅನೇಕರು ಇದ್ದರು.