ಜಿಲ್ಲೆ

ಬೆಣ್ಣಿ ಹಳ್ಳದ ಹೂಳು ನಿಲ್ಲದ ರೈತರ ಗೋಳು

Dharwada - Basavaraj Idli

ಹುಬ್ಬಳ್ಳಿ: ಮಗ ಉಂಡರೆ ಕೇಡಲ್ಲ, ಮಳೆ ಬಂದರೆ ಕೇಡಲ್ಲ ಎಂಬುದು ನಾಣ್ಣುಡಿ. ಆದರೆ, ಹೆಚ್ಚು ಮಳೆ ಬಂದರೆ ಬೆಣ್ಣಿ ಹಳ್ಳ ವ್ಯಾಪ್ತಿಯ ರೈತರ ಎದೆ ಢವಢವ ಎನ್ನುತ್ತದೆ. ಎಲ್ಲಿ ನೆರೆ ಬಂದು ಬಿತ್ತಿದ ಬೆಳೆ, ಮನೆ, ಮಠ ಕಳೆದುಕೊಳ್ಳುತ್ತೆವೆಯೋ ಎಂಬ ಭಯ ಆವರಿಸುತ್ತದೆ. ಇದು ಕುಂದಗೋಳ ಹಾಗೂ ನವಲಗುಂದ ಭಾಗದ ಜನರ ಪ್ರತಿ ವರ್ಷದ ಆತಂಕ.

ಬೆಣ್ಣಿ ಹಳ್ಳದ ದಂಡೆಯ ಮೇಲಿರುವ ಶಿರಗುಪ್ಪಿ, ಇಂಗಳಹಳ್ಳಿ, ನಲವಡಿ, ಮಣಕವಾಡ, ಶಿಸ್ವಿನಹಳ್ಳಿ, ಬೆನ್ನೂರ, ದುಂದೂರ, ಬಲ್ಲರವಾಡ ಮುಂತಾದ ಗ್ರಾಮಗಳ ರೈತರು ಈ ವರ್ಷವೂ ಅಧಿಕ ಮಳೆಯಾಗಲಿದೆ ಎಂಬ ಹವಾಮಾನ ಇಲಾಖೆಯ ಮುನ್ಸೂಚನೆ ಕೇಳಿ ಈಗಲೇ ಚಿಂತಿತರಾಗಿದ್ದಾರೆ.

ಸಮಸ್ಯೆ ಏನು?:
ಶಿಗ್ಗಾಂವಿ, ಕುಂದಗೋಳ ತಾಲೂಕುಗಳಲ್ಲಿ ಮಳೆ ಸುರಿದರೆ ಉಪಹಳ್ಳಗಳಾದ ಎರ್ನಹಳ್ಳ, ರಾಡಿಹಳ್ಳಗಳು ಬೆಣ್ಣಿ ಹಳ್ಳಕ್ಕೆ ಕೂಡಿ ಭರ್ತಿಯಾಗಿ ಕಿ.ಮೀಟರ್ ಗಟ್ಟಲೆ ವಿಶಾಲವಾಗಿ ಹರಿದು ನೂರಾರು ಎಕರೆ ಭೂಮಿಯಲ್ಲಿ ನವಲಗುಂದ ಕಡೆಗೆ ಹೋಗುತ್ತದೆ. ಅಲ್ಲಿ ತುಪ್ಪರಿಹಳ್ಳವೂ ಕೂಡುವುದರಿಂದ ಇನ್ನಷ್ಟು ಅಗಲವಾಗುವ ನದಿಯು ವಿರಾಟ ರೂಪ ಪ್ರದರ್ಶಿಸುತ್ತದೆ.

ಅನೇಕ ಸಂದರ್ಭದಲ್ಲಿ ದನ ಕರುಗಳು, ಕುರಿಗಳು ಹಳ್ಳದ ಸೆಳವಿಗೆ ಸಿಲುಕಿ ಕೊಚ್ಚಿ ಹೋಗುತ್ತವೆ. ಸಾಕಷ್ಟು ಹಾನಿಯನ್ನು ರೈತರಿಗೆ ಮಾಡುತ್ತ ಹೋಗುತ್ತದೆ.

ಮೂಲ ಹಳ್ಳದಲ್ಲಿ ಪೀಕಜಾಲಿ ಬೆಳೆದಿದ್ದರಿಂದ ದುಂದೂರ, ಬೆನ್ನೂರ ಕಡೆ ಸ್ವಲ್ಪ ಇಳಿಜಾರು ಇರುವುದು ನೀರು ವೇಗವಾಗಿ ಹರಿದು ಬರುತ್ತದೆ. ದುಂದೂರ ಹತ್ತಿರ ರೈಲ್ವೆ ಸೇತುವೆಯಿಂದ ಬಲ್ಲರವಾಡ ವರೆಗೆ ಹಳ್ಳದ ನೀರು ಅದರ ಮೂಲದಲ್ಲಿ ಹರಿಯದೇ ಹೊರಚೆಲ್ಲಿ ಜಮೀನುಗಳಿಗೆ ನುಗ್ಗುತ್ತದೆ. ಭೂಮಿಯ ಮೇಲ್ಪದರಿನ ಮಣ್ಣು ಕೊರೆದುಕೊಂಡು ಹೋಗುತ್ತದೆ. ನೂರಾರು ಎಕರೆ ಭೂಮಿಯನ್ನು ಹಾಳು ಮಾಡುತ್ತದೆ.

ಇನ್ನಷ್ಟು ವರ್ಷಗಳಲ್ಲಿ ಹಳ್ಳವು ಮೂಲ ಮಾರ್ಗವನ್ನು ಸಂಪೂರ್ಣ ಬದಲಿಸಿ ಗ್ರಾಮಗಳತ್ತ ಸರಿಯುವ ಸಾಧ್ಯತೆ ಇದೆ. ದಂಡೆಯ ಮೇಲಿನ ಜಮೀನುಗಳಿಗೆ ಪ್ರತಿ ವರ್ಷ ರೈತರು ಬದುಗಳನ್ನು ಹಾಕಿಸುತ್ತಿದ್ದರೂ ಅವು ರಭಸಕ್ಕೆ ಕೊಚ್ಚಿ ಹೋಗುತ್ತವೆ.

ಹಳ್ಳದ ಹೂಳನ್ನು ಮಳೆ ಆರಂಭವಾಗುವ ಕೆಲ ದಿನ ಮುನ್ನ ತೆಗೆಯಲು ಹೋಗುತ್ತಾರೆ. ಅಷ್ಟರಲ್ಲಿ ಮಳೆ ಬಂದು ಮತ್ತೆ ಯಥಾಸ್ಥಿತಿ ಮುಂದುವರಿಯುತ್ತದೆ. ಬಹಳಷ್ಟು ಮೊದಲೇ ಹೂಳು ತೆಗೆಯುವುದು ಅವಶ್ಯ. ಜಾಲಿ ಗಿಡಗಳು ಹುಲುಸಾಗಿ ಬೆಳೆದು ಹಳ್ಳದ ಹರಿವು ಎಲ್ಲಿದೆ ಎಂಬುದೇ ಗೊತ್ತಾಗದಂತಾಗಿದೆ.

ಏನು ಮಾಡಬೇಕು:
ಹಳ್ಳದಲ್ಲಿ ಆಳವಾಗಿ ಹೂಳು ತೆಗೆದು ಎಡ ಬಲ ದಂಡೆಗಳಿಗೆ ಕಲ್ಲಿನ ಚಿಪ್ಪುಗಳನ್ನು ಹೊಂದಿಸಬೇಕು. ಹಳ್ಳವು ಉಕ್ಕಿ ಹರಿಯದೇ ಕಾಲುವೆಯಲ್ಲಿ ಹರಿಯುವಂತೆ ಮೂಲ ಮಾರ್ಗದಲ್ಲಿ ನೀರು ಹರಿದು ಹೋದರೆ ಭೂಮಿ ಕೊರೆತ ಕಡಿಮೆಯಾಗಿ ಹಾನಿ ತಪ್ಪುತ್ತದೆ. ಈ ಭಾಗದ ಶಾಸಕರು ಕೂಡಲೇ ಎಚ್ಚೆತ್ತುಕೊಂಡು ಸಂಭಾವ್ಯ ಹಾನಿ, ಅವಡ ತಪ್ಪಿಸಲು ಯೋಜನೆ ರೂಪಿಸಿ ತಕ್ಷಣ ಕಾರ್ಯಗತಗೊಳಿಸಬೇಕು ಎಂದು ಬೆನ್ನೂರಿನ ಸಿಎ ಪರ್ವತಗೌಡರ ಆಗ್ರಹಿಸಿದ್ದಾರೆ.