ಪಾಂಡೇಶ್ವರ ಗ್ರಾಮ ಪಂಚಾಯಿತ ವ್ಯಾಪ್ತಿಯಲ್ಲಿ 350 ಕೋಟಿ ರೂ. ವೆಚ್ಚದಲ್ಲಿ ಬೆಣ್ಣೆಕುದ್ರು ಸೀತಾನದಿಗೆ ಅಡ್ಡವಾಗಿ ನಿರ್ಮಾಣಗೊಳ್ಳುತ್ತಿರುವ ಡ್ಯಾಂ ಪ್ರದೇಶಕ್ಕೆ ಶಾಸಕ ಕಿರಣ್‌ಕುಮಾರ್ ಕೊಡ್ಗಿ ಸೋಮವಾರ ಭೇಟಿ ನೀಡಿ ಪರಿಶೀಲಿಸಿದರು 
ಜಿಲ್ಲೆ

ಶಾಸಕರಿಂದ ಬೆಣ್ಣೆಕುದ್ರು ಡ್ಯಾಂ ಕಾಮಗಾರಿ ವೀಕ್ಷಣೆ

ಇಂದಿರಾ ಎನ್ ಕೆ

ವಿಜಯವಾಣಿ ಸುದ್ದಿಜಾಲ ಕೋಟ

ಸಾಸ್ತಾನದ ಪಾಂಡೇಶ್ವರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 350 ಕೋಟಿ ರೂ. ವೆಚ್ಚದಲ್ಲಿ ಬೆಣ್ಣೆಕುದ್ರು ಸೀತಾನದಿಗೆ ಅಡ್ಡಲಾಗಿ ಸಿಹಿ ನೀರಿಗಾಗಿ ನಿರ್ಮಾಣಗೊಳ್ಳುತ್ತಿರುವ ಡ್ಯಾಂ ಪ್ರದೇಶಕ್ಕೆ ಶಾಸಕ ಕಿರಣ್ ಕುಮಾರ್ ಕೊಡ್ಗಿ ಸೋಮವಾರ ಭೇಟಿ ನೀಡಿ ಪರಿಶೀಲಿಸಿದರು.

ಈ ವೇಳೆ ಪಾಂಡೇಶ್ವರ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ವೈ.ಬಿ.ರಾಘವೇಂದ್ರ ಶಾಸಕರ ಸಮ್ಮುಖದಲ್ಲಿ ನೀರಾವರಿ ಇಲಾಖೆಯನ್ನು ತರಾಟೆ ತೆಗೆದುಕೊಂಡಿದ್ದು, ಈ ಯೋಜನೆಯ ಬಗ್ಗೆ ಪ್ರಾರಂಭದಲ್ಲಿ ಸ್ಥಳೀಯಾಡಳಿತ ಗ್ರಾಮಸಭೆ ಮೂಲಕ ಆಕ್ಷೇಪಣೆ ಸಲ್ಲಿಸಿ ಪತ್ರದ ಮೂಲಕ ಮಾಹಿತಿ ರವಾನಿಸಿದೆ. ಅದರ ನೀಲಿನಕಾಶೆ ಅಥವಾ ಸಮರ್ಪಕ ಮಾಹಿತಿ ನೀಡದೆ ಯೋಜನೆಯನ್ನು ತರಾತುರಿಯಲ್ಲಿ ಆರಂಭಿಸಲಾಗಿದೆ. ಗ್ರಾಮದಲ್ಲಿ ಕೃತಕ ನೆರೆಭೀತಿ ಎದುರಾಗಿದೆ ಎಂದರು.

ಪಂಚಾಯಿತಿ ಪ್ರತಿನಿಧಿ ಪ್ರತಾಪ್ ಶೆಟ್ಟಿ ಸಹಿತ ಗ್ರಾಮಸ್ಥರು ಶಾಸಕರಿಗೆ ಈ ಕುರಿತು ಮಾಹಿತಿ ನೀಡಿದ್ದು, ಯೋಜನೆಯಿಂದ ಗ್ರಾಮಕ್ಕೆ ಹಾನಿಯ ಭೀತಿ ಎದುರಾಗಿದೆ. ಇದಕ್ಕಾಗಿ ಬೆಣ್ಣೆಕುದ್ರು ಭಾಗಗಕ್ಕೆ ಅಳವಡಿಸಲಾದ ತಡೆದಂಡೆಯನ್ನು ನಮ್ಮ ಈ ಭಾಗದಲ್ಲಿ ಪೂರ್ಣಪ್ರಮಾಣದಲ್ಲಿ ಅಳವಡಿಸಿ ಗ್ರಾಮದ ಕೃಷಿ ಭೂಮಿಗೆ ನೀರು ನುಗ್ಗದಂತೆ ಕ್ರಮ ವಹಿಸಿ ಎಂದು ಶಾಸಕರಿಗೆ ಮತ್ತು ಗುತ್ತಿಗೆದಾರರಿಗೆ ಮನವಿ ಮಾಡಿದರು.

ಸಣ್ಣನೀರಾವರಿ ಇಲಾಖೆಯ ಇಂಜಿನಿಯರ್ ಅರುಣ್, ಗುತ್ತಿಗೆದಾರ ಕಂಪನಿಯ ಪರವಾಗಿ ಗುರುಮೂರ್ತಿ, ಶಿವ ಕರ್ಕೇರ,ಪಾಂಡೇಶ್ವರ ಪಂಚಾಯಿತಿ ಅಧ್ಯಕ್ಷೆ ಸುಶೀಲಾ ಎಸ್.ಪೂಜಾರಿ, ಪಂಚಾಯಿತಿ ಪ್ರತಿನಿಧಿಗಳು, ಗ್ರಾಮಸ್ಥರು, ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.

ತಡೆದಂಡೆ ನಿರ್ಮಾಣಕ್ಕೆ ಯೋಜನೆ

ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಿರ್ಮಾಣವಾಗುತ್ತಿರುವ ವೆಂಟೆಡ್ ಡ್ಯಾಂನಿಂದ ಗ್ರಾಮಕ್ಕೆ ಯಾವುದೇ ರೀತಿಯ ಸಮಸ್ಯೆಯಾಗದಂತೆ ಹಾಗೂ ಸೂಲ್‌ಕುದ್ರು, ಮಾಬುಕಳ ಸೇತುವೆಯವರೆಗೆ ತಡೆದಂಡೆ ನಿರ್ಮಿಸಲು ಬೇಕಾದ ಯೋಜನೆ ಶೀಘ್ರ ಅನುಷ್ಠಾನಗೊಳಿಸಬೇಕು. ಯೋಜನೆ ಬಗ್ಗೆ ಗ್ರಾಮ ಪಂಚಾಯಿತಿಗೆ ಸಮರ್ಪಕ ಮಾಹಿತಿ ನೀಡಿ ಎಂದು ಸಣ್ಣ ನೀರಾವರಿ ಇಲಾಖೆ ಹಾಗೂ ಗುತ್ತಿಗೆದಾರರಿಗೆ ಶಾಸಕರು ಸೂಚನೆ ನೀಡಿದರು.