ಜಿಲ್ಲೆ

ತುಂಬಿ ಹರಿಯುತ್ತಿದೆ ಬೆಣ್ಣೆಹಳ್ಳ

ವೀರೇಶ ಸೌದ್ರಿ

ರೋಣ: ಧಾರವಾಡ ಜಿಲ್ಲೆಯ ಕುಂದಗೋಳ ಹಾಗೂ ಹುಬ್ಬಳ್ಳಿ ಗ್ರಾಮೀಣ ಭಾಗದಲ್ಲಿ ಬುಧವಾರ ರಾತ್ರಿ ಸುರಿದ ಮಳೆಯಿಂದ ರೋಣ ತಾಲೂಕಿನ ಬೆಣ್ಣೆ ಹಳ್ಳ ಭರ್ತಿಯಾಗಿದೆ. ಇದರಿಂದ ಯಾವಗಲ್ಲ ಬಳಿ ಅಪಾಯ ಮಟ್ಟ ಮೀರಿ ಹರಿಯುತ್ತಿದ್ದು, ರೋಣ- ನರಗುಂದ ಮಾರ್ಗ ಬಂದ್ ಆಗಿದೆ. ಇದರಿಂದ ವಾಹನಗಳು ನವಲಗುಂದ ಮೂಲಕ ನರಗುಂದಕ್ಕೆ ತೆರಳುತ್ತಿವೆ.

ತಾಲೂಕಿನ ಯಾವಗಲ್, ಮೆಣಸಗಿ, ಯಾ.ಸ. ಹಡಗಲಿ ಭಾಗದ ಬಹುತೇಕ ಸೇತುವೆಗಳು ಮುಳುಗಡೆಯಾಗಿದ್ದು, ಬೆಣ್ಣೆ ಹಳ್ಳದ ಸುತ್ತಮುತ್ತಲಿನ ಗ್ರಾಮಸ್ಥರು ಆತಂಕದಲ್ಲಿ ಕಾಲ ಕಳೆಯುವಂತಾಗಿದೆ.

ತಾಲೂಕಿನ ಯಾ.ಸ. ಹಡಗಲಿ ಗ್ರಾಮವೂ ಮುಳುಗಡೆ ಭೀತಿಯಲ್ಲಿದೆ. ಗ್ರಾಮದ ಸುತ್ತಲೂ ಜಲದಿಗ್ಬಂಧನ ಉಂಟಾಗಿದೆ. ಇನ್ನು ಮೆಣಸಗಿ, ಬೆಳವಣಕಿ ಗ್ರಾಮಗಳಲ್ಲಿ ಹಳ್ಳದ ನೀರು ಸಮಸ್ಯೆ ಸೃಷ್ಟಿಸಿದೆ.

ಅಂಗನವಾಡಿಗೆ ನುಗ್ಗಿದ ನೀರು

ಬೆಣ್ಣೆ ಹಳ್ಳ ಭರ್ತಿಯಾಗಿ ಯಾವಗಲ್ಲ ಗ್ರಾಮದ ಅಂಗನವಾಡಿ ಕೇಂದ್ರಕ್ಕೆ ನೀರು ನುಗ್ಗಿದೆ. ಇದರಿಂದ ಗುರುವಾರ ಅಂಗನವಾಡಿಗೆ ರಜೆ ಘೋಷಿಸಿ ಸಿಡಿಪಿಒ ಆದೇಶ ಹೊರಡಿಸಿದ್ದಾರೆ.

ಜಮೀನು ಜಲಾವೃತ

ಬೆಣ್ಣೆ ಹಳ್ಳ ಅಚ್ಚುಕಟ್ಟು ಪ್ರದೇಶದ ಜಮೀನುಗಳಲ್ಲಿ ಬಿತ್ತನೆ ಮಾಡಿದ್ದ ಹೆಸರು ಹಾಗೂ ಉಳ್ಳಾಗಡ್ಡಿ ಬೆಳೆ ಜಲಾವೃತವಾಗಿವೆ. ಸಾಲ ಮಾಡಿ ಬಿತ್ತನೆ ಮಾಡಿದ್ದ ರೈತರು ಈಗ ದಿಕ್ಕು ತೋಚದಂತಾಗಿದ್ದಾರೆ.

ತಹಸೀಲ್ದಾರ್, ಇಒ ಭೇಟಿ

ಮಳೆಯಿಂದ ಹಾನಿಯಾದ ಜಮೀನುಗಳಿಗೆ ತಹಸೀಲ್ದಾರ್ ನಾಗರಾಜ ಕೆ. ಹಾಗೂ ತಾಪಂ ಇಒ ಚಂದ್ರಶೇಖರ ಕಂದಕೂರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹಾನಿಯ ಅಂದಾಜು ಮಾಡುವಂತೆ ಕಂದಾಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಮನೆಗಳಿಗೆ ಹಾನಿ

ಸತತ ಮಳೆ ಹಾಗೂ ಬೆಣ್ಣೆ ಹಳ್ಳದ ನೀರು ನುಗ್ಗಿದ್ದರಿಂದ ಯಾವಗಲ್ಲ ಗ್ರಾಮದ ಮೂರು ಮನೆಗಳಿಗೆ ಹಾನಿಯಾಗಿದೆ ಎಂದು ಪಿಡಿಒ ಐ.ಎಫ್. ಬುಡ್ಲೇಖಾನ ತಿಳಿಸಿದ್ದಾರೆ.

ಮುನ್ನೆಚ್ಚರಿಕೆ ವಹಿಸಲು ಸೂಚನೆ

ಜಿಲ್ಲೆಯಲ್ಲಿ ಭಾರಿ ಮಳೆ ಸಂಭವವಿರುವುದರಿಂದ ಬೆಣ್ಣೆ ಹಳ್ಳ ವ್ಯಾಪ್ತಿಯ ಜನರು ಎಚ್ಚರಿಕೆಯಿಂದ ಇರಬೇಕು. ಜತೆಗೆ ಜಿಲ್ಲಾಡಳಿತ ನೆರೆ ನಿರ್ವಹಣೆಗೆ ಎಲ್ಲ ಸಿದ್ಧತೆ ಮಾಡಿಕೊಳ್ಳಬೇಕು. ಅಧಿಕಾರಿಗಳು ಕೇಂದ್ರ ಸ್ಥಾನ ಬಿಟ್ಟು ಹೊರ ಹೋಗದಂತೆ ಶಾಸಕ ಸಿ.ಸಿ. ಪಾಟೀಲ ಸೂಚನೆ ನೀಡಿದ್ದಾರೆ.