ಬೆಳವಣಿಕಿ(ತಾ.ರೋಣ): ಬುಧವಾರ ಸಂಜೆ ಸುರಿದ ಮೃಗಶಿರ ಮಳೆಯಿಂದಾಗಿ ಸಮೀಪದ ಯಾವಗಲ್ಲ ಬಳಿ ಹರಿಯುವ ಬೆಣ್ಣೆ ಹಳ್ಳದ ಸೇತುವೆ ಸಂಪೂರ್ಣ ಜಲಾವೃತವಾಗಿದೆ.
ಬೆಣ್ಣೆಹಳ್ಳದ ದಂಡೆಗುಂಟ ಇರುವ ಸಾವಿರಾರು ಎಕರೆಯಲ್ಲಿ ಬಿತ್ತನೆ ಮಾಡಿರುವ ಹೆಸರು, ಗೋವಿನಜೋಳ, ಹತ್ತಿ, ಶೇಂಗಾ, ಅಲಸಂದಿ, ಉಳ್ಳಾಗಡ್ಡಿ, ಮೆಣಸಿನಕಾಯಿ ಮುಂತಾದ ಪೈರುಗಳಿಗೆ ಹಾನಿಯುಂಟಾಗಿದೆ. ಹಳ್ಳದ ದಂಡೆಯಲ್ಲಿರುವ ರೈತರ ಪಂಪಸೆಟ್ಗಳು ನೀರಿನಲ್ಲಿ ಕೊಚ್ಚಿ ಹೋಗಿವೆ.
ಬೆಳವಣಕಿ, ಕೌಜಗೇರಿ, ಹಡಗಲಿ, ಹದ್ಲಿ ಗ್ರಾಮದ ಹಳ್ಳದ ದಂಡೆಯಲ್ಲಿರುವ ಎಲ್ಲ ಭೂಮಿಗಳಿಗೆ ನೀರು ನುಗ್ಗಿ ಬಿತ್ತಿದ ಬೆಳೆಗಳು ನೀರಿನಲ್ಲಿ ಕೊಚ್ಚಿ ಹೋಗಿವೆ. ರೈತರು ಹೆಚ್ಚು ಖರ್ಚು ಮಾಡಿ ಬಿತ್ತನೆ ಮಾಡಿದ್ದರು ಎಂದು ರೈತ ಹೋರಾಟಗಾರರಾದ ವೀರಪ್ಪ ಕುಸುಗಲ್ಲ, ಶರಣಪ್ಪ ಹದ್ಲಿ, ಮಲ್ಲಣ್ಣ ದಾದ್ಮಿ, ಶಿವಾನಂದ ಅಳಗವಾಡಿ, ಹನಮಂತಗೌಡ ಅಡೂರ, ಇತರ ರೈತರು ತಮ್ಮ ಅಳಲು ತೋಡಿಕೊಂಡರು. ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರೀಶಿಲನೆ ಮಾಡಿದರು.
ಯಾವಗಲ್ ಗ್ರಾಮದ ಬಳಿಯ ಬೆಣ್ಣೆಹಳ್ಳದ ಸೇತುವೆ ಹೈವೇ ರಸ್ತೆಗೆ ಅಡ್ಡಲಾಗಿ ಕಟ್ಟಲಾಗಿದೆ. ಸುಮಾರು 60 ವರ್ಷಗಳಷ್ಟು ಹಳೆಯದಾಗಿದ್ದು, ಪ್ರತಿ ವರ್ಷ ಮಳೆಗಾಲದಲ್ಲಿ ರೋಣ-ನರಗುಂದ ಮಾರ್ಗವಾಗಿ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಗುತ್ತಿದೆ. ಸರ್ಕಾರವು ಹೊಸದಾದ ಸೇತುವೆ ನಿರ್ಮಾಣ ಮಾಡಬೇಕು. | ಮುತ್ತಪ್ಪ ಕುರಿ ರೈತಸೇನಾ, ರೋಣ ತಾಲೂಕಾಧ್ಯಕ್ಷ