ವಿಜಯವಾಣಿ ಸುದಿಜಾಲ ಗಂಗೊಳ್ಳಿ
ಗುಜ್ಜಾಡಿ ಗ್ರಾಮದ ಬೆಣ್ಗೆರೆ ಶ್ರಿ ನಾಗದೇವಸ್ಥಾನದಲ್ಲಿ ನಾಗಮಂಡಲೋತ್ಸವದ ಸುವರ್ಣ ಮಹೋತ್ಸವ ಪ್ರಯುಕ್ತ ಶ್ರೀ ನಾಗದೇವರ ಜೀರ್ಣಾಷ್ಟಬಂಧ ಪುರಸರ ಪುನಃ ಪ್ರತಿಷ್ಠಾಪನೆ ಮಹೋತ್ಸವ, ಬ್ರಹ್ಮಕಲಶೋತ್ಸವ ಮತ್ತು ಅಷ್ಟಪವಿತ್ರ ನಾಗಮಂಡಲೋತ್ಸವ ಬೆಣ್ಗೆರೆ ಶ್ರೀ ನಾಗ ದೇವಸ್ಥಾನ ವಠಾರದಲ್ಲಿ ಮಾ.25ರಿಂದ 31ರವರೆಗೆ ನಡೆಯಲಿದೆ.
ಮಾ.25ರಂದು ಗಣಪತಿ ಪೂಜೆಯೊಂದಿಗೆ ಧಾರ್ಮಿಕ ವಿಧಿವಿಧಾನಗಳು ಪ್ರಾರಂಭಗೊಳ್ಳಲಿದ್ದು, 26ರಂದು ಬೆಳಗ್ಗೆ 6.15ಕ್ಕೆ ಅಷ್ಟಬಂಧ ಪುರಸರ ಶ್ರೀ ನಾಗದೇವರ ಪ್ರತಿಷ್ಠಾಪನೆ, ಜೀವಕುಂಭಾಭಿಷೇಕ, ಪ್ರತಿಷ್ಠಾಪನೆ ಕಲಶಾಭಿಷೇಕ, ಕಲಶಾಧಿವಾಸ ಹೋಮ, ತತ್ವಹೋಮ,ಶ್ರೀ ನಾಗದೇವರಿಗೆ ಬೆಳ್ಳಿ ಪ್ರಭಾವಳಿ ಮತ್ತಿಪೀಠ ಸಮರ್ಪಣೆ ನೆರವೇರಲಿದೆ. 11ಕ್ಕೆ ದಕ್ಷಿಣಾಮ್ನಾಯ ಶೃಂಗೇರಿ ಶ್ರೀ ಶಾರದಾ ಪೀಠಾಧೀಶ್ವರ ವಿಧುಶೇಖರ ಭಾರತಿ ಮಹಾಸ್ವಾಮೀಜಿ ಉಪಸ್ಥಿತಿಯಲ್ಲಿ ಬ್ರಹ್ಮಕಲಶಾಭಿಷೇಕ, ಮಹಾಪೂಜೆ ನಡೆಯಲಿದೆ. ಸಂಜೆ ರಂಗಪೂಜೆ ಮತ್ತಿತರ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ.
29ರಂದು ಸಂಜೆ 4ಕ್ಕೆ ತ್ರಾಸಿ, ಗಂಗೊಳ್ಳಿ, ಗುಜ್ಜಾಡಿ ಮಾರ್ಗವಾಗಿ ಹೊರೆಕಾಣಿಕೆ ಮೆರವಣಿಗೆ ಕಾರ್ಯಕ್ರಮ ನಡೆಯಲಿದೆ. 31ರಂದು ಬೆಳಗ್ಗೆ ಅಷ್ಟ ಪವಿತ್ರ ನಾಗಮಂಡಲೋತ್ಸವದ ಧಾರ್ಮಿಕ ವಿಧಿವಿಧಾನಗಳು ಆರಂಭಗೊಳ್ಳಲಿದ್ದು, ಚತುರ್ವೇದ ಪಾರಾಯಣ, ಬ್ರಹ್ಮಕಲಶ ಸ್ಥಾಪನೆ, ಆಯುತ ಸಂಖ್ಯಾ ತಿಲಹೋಮ, ಪವಮಾನ ಹೋಮ, ಸರ್ಪಸೂಕ್ತ ಹೋಮ, ಸುಬ್ರಹ್ಮಣ್ಯ ಹೋಮ, ಪ್ರಧಾನ ಅಧಿವಾಸ ಹೋಮ, ನಾಗದೇವರ ಸಂದರ್ಶನ, ಪಲ್ಲಪೂಜೆ ನೆರವೇರಲಿದೆ. ಸಂಜೆ 7ಕ್ಕೆ ಹಾಲಿಟ್ಟು ಸೇವೆ, 8.30ಕ್ಕೆ ಅಷ್ಟಪವಿತ್ರ ನಾಗ ಮಂಡಲೋತ್ಸವ ಜರುಗಲಿದೆ.
31ರಂದು ಸಂಜೆ 4.30ರಿಂದ ಧಾರ್ಮಿಕ ಸಭಾ ಕಾರ್ಯಕ್ರಮ ಆರಂಭಗೊಳ್ಳಲಿದ್ದು, ದೇವಳ ಅಧ್ಯಕ್ಷ ಉಮೇಶ ಎಲ್.ಮೇಸ್ತ ಅಧ್ಯಕ್ಷತೆ ವಹಿಸಲಿದ್ದಾರೆ. ಶ್ರೀ ಶಾರದಾ ಪೀಠಂನ ಪ್ರಾಂತೀಯ ಧರ್ಮಾಧಿಕಾರಿ ಲೋಕೇಶ ಅಡಿಗ ಶುಭಾಶಂಸನೆ ಮಾಡಲಿದ್ದಾರೆ. ಸಂಸದರಾದ ಬಿ.ವೈ.ರಾಘವೇಂದ್ರ, ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಗುರುರಾಜ್ ಗಂಟಿಹೊಳೆ, ಮಾಜಿ ಶಾಸಕರಾದ ಬಿ.ಎಂ.ಸುಕುಮಾರ್ ಶೆಟ್ಟಿ, ಕೆ.ಗೋಪಾಲ ಪೂಜಾರಿ, ಮತ್ಸೊೃೀದ್ಯಮಿ ಆನಂದ ಸಿ.ಕುಂದರ್, ಎಂ.ದೇವರಾಯ ಶೇರುಗಾರ್, ಗುಜ್ಜಾಡಿ ಗ್ರಾಪಂ ಅಧ್ಯಕ್ಷ ತಮ್ಮಯ್ಯ ದೇವಾಡಿಗ, ಕೃಷ್ಣಮೂರ್ತಿ ಆಚಾರ್ಯ, ರಾಮಚಂದ್ರ ಶಿರೂರ್‌ಕರ್ ಮೊದಲಾದವರು ಪಾಲ್ಗೊಳ್ಳಲಿದ್ದಾರೆ.