ಜಿಲ್ಲೆ

ಮಾದಕ ದ್ರವ್ಯ ಮುಕ್ತ ಬೆಂಗರೆ ಸಂಕಲ್ಪ, ಆಗಸ್ಟ್ 18 ರಂದು ಪೊಲೀಸ್ ಆಯುಕ್ತರೊಂದಿಗೆ ನೇರ ಸಂವಾದ

ಸುದ್ದಿಗೋಷ್ಠಿಯಲ್ಲಿ ಸಂಘಟಕರು ಮಾದಕ ದ್ರವ್ಯ ವ್ಯಸನದ ಕುರಿತು ಭಿತ್ತಿಫಲಕ ಅನಾವರಣಗೊಳಿಸಿದರು.

Mangaluru - Prakash MC Manjeshwar

ಮಂಗಳೂರು: ನಗರದ ಬೆಂಗರೆ ಗ್ರಾಮವನ್ನು ಮಾದಕ ದ್ರವ್ಯ ಮುಕ್ತ ಮಾದರಿ ಗ್ರಾಮವಾಗಿ ರೂಪಿಸುವ ಸಂಕಲ್ಪವನ್ನು ಬೆಂಗರೆ ನಾಗರಿಕ ಹಿತರಕ್ಷಣಾ ಸಮಿತಿ ಕೈಗೊಂಡಿದೆ. ಇದರ ಭಾಗವಾಗಿ ಆಗಸ್ಟ್ 18 ರಂದು ಸಂಜೆ 4.30 ಕ್ಕೆ ಕಸಬಾ ಬೆಂಗರೆ ಕಡವಿನ ಬಳಿ ಇರುವ ಮುಹಿಯುದ್ದೀನ್ ಜುಮಾ ಮಸೀದಿಯ ಮುಂಭಾಗದಲ್ಲಿ ಪೊಲೀಸ್ ಆಯುಕ್ತ ಕುಲದೀಪ್ ಕುಮಾರ್ ಆರ್.ಜೈನ್ ಅವರೊಂದಿಗೆ ಗ್ರಾಮಸ್ಥರ ನೇರ ಸಂವಾದ ಆಯೋಜಿಸಲಾಗಿದೆ.
 ಗ್ರಾಮದಲ್ಲಿ ಡ್ರಗ್ಸ್ ವ್ಯಸನಿ, ಪೆಡ್ಲರ್‌ಗಳ ಹಾವಳಿ ಯಿಂದ ಅಪರಾಧ ಕೃತ್ಯಗಳು ಹೆಚ್ಚುತ್ತಿವೆ. ಅಪರಾಧ ಕೃತ್ಯದಲ್ಲಿ ತೊಡಗುವವರು ಮಾನಸಿಕ ಅಸ್ವಸ್ಥರು ಎಂದು ವೈದ್ಯರಿಂದ ಪ್ರಮಾಣಪತ್ರ ಪಡೆದು ಗಂಭೀರ ಪ್ರಮಾಣದ ಶಿಕ್ಷೆಯಿಂದ ಪಾರಾಗುತ್ತಿದ್ದಾರೆ. ಈ ಬಗ್ಗೆ ಪೊಲೀಸರು ಕೂಡ ಜಾಗೃತರಾಗಬೇಕು. ಅಪರಾಧಿಗಳು ಸುಳ್ಳು ವೈದ್ಯಕೀಯ ಪ್ರಮಾಣಪತ್ರ ಹೇಗೆ ಪಡೆಯುತ್ತಾರೆ ಎನ್ನುವ ಕುರಿತು ಕೂಡ ತನಿಖೆ ನಡೆಯಬೇಕು ಎಂದು ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಜಮಾಅತ್ ಕಮಿಟಿ ಅಧ್ಯಕ್ಷ ಬಿಲಾಲ್ ಮೊದೀನ್ ತಿಳಿಸಿದರು.
ಪಾಲಿಕೆ ಸದಸ್ಯ ಮುನೀಬ್ ಬೆಂಗ್ರೆ, ನಾಗರಿಕ ಹಿತರಕ್ಷಣಾ ಸಮಿತಿ ಉಪಾಧ್ಯಕ್ಷ ಬಿ.ಎ.ಇಬ್ರಾಹಿಂ, ಜೊತೆ ಕಾರ್ಯದರ್ಶಿ ನದೀಬ್ ಸಾಹೆಬ್, ಮೊಹಮ್ಮದ್ ಶರೀಫ್ ದಾರಿಮಿ ಉಪಸ್ಥಿತರಿದ್ದರು.