ದಾಬಸ್ಪೇಟೆ : ಗ್ರಾಮೀಣ ಪ್ರದೇಶದ ಪ್ರಮುಖ ಆದಾಯ ಮೂಲ ಹೈನುಗಾರಿಕೆ. ಉತ್ತಮ ತಳಿಯ ರಾಸುಗಳನ್ನು ಸಾಕುವುದರಿಂದ ಹೈನುಗಾರರಿಗೆ ಲಾಭವಾಗಲಿದೆ ಎಂದು ಬಮುಲ್ ನಿವೃತ್ತ ಉಪ ವ್ಯವಸ್ಥಾಪಕ (ಕೃತಕ ಗರ್ಭಧಾರಣೆ) ಡಾ.ವೆಂಕಟಸ್ವಾಮಿ ರೆಡ್ಡಿ ತಿಳಿಸಿದರು.
ಬೆಂಗಳೂರು ಹಾಲು ಒಕ್ಕೂಟ ಹಾಗೂ ನೆಲಮಂಗಲ ತಾಲೂಕಿನ ಸೋಂಪುರ ಹೋಬಳಿಯ ಚನ್ನೋಹಳ್ಳಿ ಡೇರಿ ಸಹಯೋಗದಲ್ಲಿ ಬುಧವಾರ ಆಯೋಜಿಸಿದ್ದ ಬರಡು ರಾಸುಗಳ ಆರೋಗ್ಯ ತಪಾಸಣೆಯಲ್ಲಿ ಮಾತನಾಡಿದರು.
ಹಾಲಿನ ಉತ್ಪಾದನೆ ಮತ್ತು ಗುಣಮಟ್ಟ ಹೆಚ್ಚಿಸಲು ಹಸುಗಳಿಗೆ ಪ್ರೋಟಿನ್ಯುಕ್ತ ಆಹಾರ ನೀಡಬೇಕು. ಹಾಲಿನ ಪ್ಯಾಟ್ ಪ್ರಮಾಣ ಹೆಚ್ಚುವುದರಿಂದ ಆದಾಯವೂ ಹೆಚ್ಚಲಿದೆ. ಉತ್ತಮ ಹಾಲು ಉತ್ಪಾದನೆಗಾಗಿ ಹಸುಗಳಿಗೆ ಕೃತಕ ಗರ್ಭಧಾರಣೆ ತಂತ್ರಜ್ಞಾನ ಪರಿಚಯಿಸಿದ ಕೀರ್ತಿ ರಾಜ್ಯದ್ದು, ಅದನ್ನು ಹೈನುಗಾರಿಕೆಯಲ್ಲಿ ತೊಡಗಿರುವವರು ಬಳಸಿಕೊಳ್ಳಬೇಕು ಎಂದರು.
ಈ ವೇಳೆ 40ಕ್ಕೂ ಹೆಚ್ಚು ರಾಸುಗಳನ್ನು ಪರಿಶೀಲಿಸಿ, ಚಿಕಿತ್ಸೆ ಹಾಗೂ ಔಷಧ ನೀಡಿ, ಹೈನುಗಾರರಿಗೆ ಅಗತ್ಯ ಮಾಹಿತಿ ಒದಗಿಸಲಾಯಿತು.
ಬಮುಲ್ ನೆಲಮಂಗಲ ಶಿಬಿರದ ಉಪ ವ್ಯವಸ್ಥಾಪಕ ಡಾ.ಆದರ್ಶ್, ಡಾ.ಸಾಗರ್, ಚನ್ನೋಹಳ್ಳಿ ಡೇರಿ ಅಧ್ಯಕ್ಷ ಗಂಗಾಧರ್, ಕೃತಕ ಗರ್ಭಧಾರಣೆ ಮಾಡುವ ಪ್ರಭು, ರಾಜಣ್ಣ, ಸಿಬ್ಬಂದಿ ಇದ್ದರು.