ವಿಜಯವಾಣಿ ಸುದ್ದಿಜಾಲ ಚನ್ನರಾಯಪಟ್ಟಣ
ಪ್ರಸ್ತುತ ದಿನಗಳಲ್ಲಿ ಅಪರಾಧ ಪ್ರಕರಣಗಳ ಸ್ವರೂಪ ಬದಲಾಗುತ್ತಿದ್ದು, ಪೊಲೀಸರು ತನಿಖೆಯಲ್ಲಿ ಆಧುನಿಕ ತಂತ್ರಜ್ಞಾನ ಹಾಗೂ ಕಾನೂನಿನ ಸೂಕ್ಷ್ಮಗಳನ್ನು ಅಳವಡಿಸಿಕೊಳ್ಳುವುದು ಅತ್ಯಗತ್ಯ ಎಂದು ಬೆಂಗಳೂರು ನಗರ ಪೊಲೀಸ್ ಇಲಾಖೆಯ ದೇವನಹಳ್ಳಿ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಹರ್ಷ ತಿಳಿಸಿದರು.
ಹೋಬಳಿಯ ಚಾಣಕ್ಯ ವಿಶ್ವವಿದ್ಯಾಲಯ ಆವರಣದಲ್ಲಿ ಗುರುವಾರ ಪೊಲೀಸ್ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಅಪರಾಧ ಪ್ರಕರಣಗಳ ಕುರಿತಾದ ಕಾರ್ಯಾಗಾರದಲ್ಲಿ ಮಾತನಾಡಿದರು. ಶೈಕ್ಷಣಿಕ ಸಂಸ್ಥೆಗಳು ಮತ್ತು ಪೊಲೀಸ್ ಇಲಾಖೆಯ ನಡುವಿನ ಸಹಕಾರವನ್ನು ಬಲಪಡಿಸುವುದು, ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ವೃತ್ತಿಪರ ಸಾಮರ್ಥ್ಯವನ್ನು ಹೆಚ್ಚಿಸುವುದು ಹಾಗೂ ತನಿಖಾ ಪ್ರಕ್ರಿಯೆಯಲ್ಲಿ ಕಾನೂನುಬದ್ಧ ಮತ್ತು ವೈಜ್ಞಾನಿಕ ವಿಧಾನಗಳ ಬಳಕೆಯನ್ನು ಉತ್ತೇಜಿಸುವುದು ಈ ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದೆ. ಈ ತರಬೇತಿ ಕಾರ್ಯಾಗಾರವು ತನಿಖಾಧಿಕಾರಿಗಳ ವೃತ್ತಿಪರ ಕೌಶಲವನ್ನು ಹೆಚ್ಚಿಸಲು ಮತ್ತು ಪ್ರಕರಣಗಳನ್ನು ತ್ವರಿತವಾಗಿ ಹಾಗೂ ನಿಖರವಾಗಿ ಇತ್ಯರ್ಥಪಡಿಸಲು ಸಹಕಾರಿಯಾಗಲಿದೆ ಎಂದರು. ಉಚ್ಚ ನ್ಯಾಯಾಲಯದ ನಿರ್ದೇಶನದ ಹಿನ್ನೆಲೆಯಲ್ಲಿ ತನಿಖಾಧಿಕಾರಿಗಳಿಗೆ ತನಿಖಾ ವಿಧಾನಗಳು, ವರದಕ್ಷಿಣೆ ನಿಷೇಧ ಕಾಯ್ದೆ ಹಾಗೂ ವರದಕ್ಷಿಣೆ ಸಾವು ಪ್ರಕರಣಗಳ ತನಿಖೆಗೆ ಸಂಬಂಧಿಸಿದಂತೆ ಅಗತ್ಯ ತರಬೇತಿ ಮತ್ತು ಮಾರ್ಗದರ್ಶನ ನೀಡುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು ಎಂದು ತಿಳಿಸಿದರು.
ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು:
ಕುಲಪತಿ ಪ್ರೋ.ಯಶವಂತ್ ಡೋಂಗ್ರೆ ಮಾತನಾಡಿ ವಿಶ್ವವಿದ್ಯಾಲಯಗಳು ಕೇವಲ ಶೈಕ್ಷಣಿಕ ಚಟುವಟಿಕೆಗಳಿಗೆ ಸೀಮಿತವಾಗದೆ, ಸಮಾಜದ ವಿವಿಧ ಕ್ಷೇತ್ರಗಳೊಂದಿಗೆ ಕೈಜೋಡಿಸಿ ಸಮಾಜಮುಖಿ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದು ತಿಳಿಸಿದರು. ಪೊಲೀಸ್ ಇಲಾಖೆಯೊಂದಿಗೆ ಇಂತಹ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸುವುದರಿಂದ ಶೈಕ್ಷಣಿಕ ಜ್ಞಾನ ಮತ್ತು ಪ್ರಾಯೋಗಿಕ ಅನುಭವಗಳ ನಡುವೆ ಉತ್ತಮ ಸಂಪರ್ಕ ಬೆಳೆಸಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ವಿಶೇಷ ಉಪನ್ಯಾಸ:
ವರದಕ್ಷಿಣೆ ಸಾವು ಕುರಿತು ವಿಶೇಷ ಉಪನ್ಯಾಸ ನೀಡಿದರು. ಇಂಥ ಪ್ರಕರಣಗಳಿಗೆ ಸಂಬಂಧಿಸಿದ ಕಾನೂನು ನಿಬಂಧನೆಗಳು, ತನಿಖಾಧಿಕಾರಿಗಳು ಅನುಸರಿಸಬೇಕಾದ ಕಾನೂನು ಪ್ರಕ್ರಿಯೆಗಳು, ಸಾಕ್ಷ್ಯಾಧಾರಗಳ ಮಹತ್ವ ಹಾಗೂ ಪ್ರಕರಣಗಳ ತನಿಖೆಯಲ್ಲಿ ವಹಿಸಬೇಕಾದ ಜವಾಬ್ದಾರಿಗಳ ಕುರಿತು ವಕೀಲ ಶಫೀರ್ ಮಾಹಿತಿ ನೀಡಿದರು.
ವಿಧಿವಿಜ್ಞಾನದ ಮಹತ್ವ:
ಸಂಪನ್ಮೂಲ ವ್ಯಕ್ತಿ ಡಾ. ತರುಣ್ ಯೆರಿಸ್ವಾಮಿ ತನಿಖೆಯಲ್ಲಿ ವಿಧಿವಿಜ್ಞಾನದ ಮಹತ್ವ, ವೈಜ್ಞಾನಿಕ ಪರೀಕ್ಷೆಗಳು ಮತ್ತು ಸಾಕ್ಷ್ಯಗಳನ್ನು ನ್ಯಾಯಾಲಯದಲ್ಲಿ ಸಾಬೀತುಪಡಿಸುವ ಕುರಿತು ತರಬೇತಿ ನೀಡಿದರು. ಬೆಂಗಳೂರು ನಗರ ಪೊಲೀಸ್ ಇಲಾಖೆಯ ಈಶಾನ್ಯ ವಿಭಾಗ ಮತ್ತು ಚಾಣಕ್ಯ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಪೊಲೀಸ್ ತನಿಖಾ ತರಬೇತಿ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ ಎಂದರು.