ಶಿವರಾಜ ಎಂ. ಬೆಂಗಳೂರು ಗ್ರಾಮಾಂತರ
ರಾಜ್ಯ ರಾಜಧಾನಿ ಬೆಂಗಳೂರಿನ ಗಡಿಹಂಚಿಕೊಂಡಿರುವ ಗ್ರಾಮಾಂತರ ಜಿಲ್ಲೆಯ ರೈತರಿಗೆ ಭೂಸ್ವಾಧಿನ ಗುಮ್ಮ ಬೆಂಬಿಡದ ಕಾಡುತ್ತಿದೆ. ಉಸ್ತುವಾರಿ ಸಚಿವರು ಭೂಸ್ವಾಧಿನಕ್ಕೆ ಅವಕಾಶ ನೀಡುವುದಿಲ್ಲ ಎಂದು ಭರವಸೆ ನೀಡುತ್ತಿದ್ದರೂ ಅಧಿಕಾರಿವರ್ಗ ಅಧಿಸೂಚನೆ ನೆಪದಲ್ಲಿ ಭೂಸ್ವಾಧಿನ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡಿರುವುದು ರೈತಾಪಿ ಜನರ ನಿದ್ರೆಗೆಡಿಸಿದೆ.
ಜಿಲ್ಲಾ ಕೇಂದ್ರ ಯಾವುದಾಗಬೇಕು ಎಂಬ ಹಗ್ಗಾಜಗ್ಗಾಟದಲ್ಲಿರುವ ದೊಡ್ಡಬಳ್ಳಾಪುರ&ದೇವನಹಳ್ಳಿ ಅವಳಿ ತಾಲೂಕು ವ್ಯಾಪ್ತಿಯಲ್ಲೇ ಹೆಚ್ಚಿನ ಪ್ರಮಾಣದಲ್ಲಿ ಭೂಸ್ವಾಧಿನ ಆತಂಕ ಎದುರಾಗಿದೆ. ದೇವನಹಳ್ಳಿ ಹಾಗೂ ದೊಡ್ಡಬಳ್ಳಾಪುರ ತಾಲೂಕುಗಳ ಐದು ಗ್ರಾಮಗಳಲ್ಲಿ ಸುಮಾರು 1200 ಎಕರೆ ಜಮೀನು ಸ್ವಾಧಿನಪಡಿಸಿಕೊಳ್ಳಲು ಸರ್ಕಾರ ಹವಣಿಸುತ್ತಿರುವುದು ರೈತಾಪಿ ಜನರ ಆಕ್ರೋಶಕ್ಕೆ ಕಾರಣವಾಗಿದೆ.ಮೊದಲ ಹಂತವಾಗಿ ಸೊಣ್ಣಮಾರನಹಳ್ಳಿ, ದಂಡುದಾಸಕೊಡಿಗೆಹಳ್ಳಿಗೆ ಅಧಿಸೂಚನೆ ಹೊರಡಿಸಿದ್ದು, ದೇವನಹಳ್ಳಿ ತಾಲೂಕಿನ ಕೊಯಿರಾ, ಮಾಯಸಂದ್ರ, ಮೀಸಗಾನಹಳ್ಳಿಯಲ್ಲಿಯೂ ಭೂಸ್ವಾಧಿನವಾಗಲಿದೆ ಎಂಬ ಪ್ರಸ್ತಾಪ ಕೇಳಿಬರುತ್ತಿದೆ. ಈ ಹಿನ್ನೆಲೆಯಲ್ಲಿ ಈ ಎರಡೂ ತಾಲೂಕಿನ ರೈತ ಮುಖಂಡರು ಸರ್ಕಾರ ಕ್ರಮದ ವಿರುದ್ಧ ಕೆರಳಿದ್ದು, ಭೂಸ್ವಾಧಿನ ವಿರೋಧಿಸಿ ದೊಡ್ಡಮಟ್ಟದಲ್ಲಿ ಹೋರಾಟ ಆರಂಭಿಸಲು ಸಿದ್ದತೆ ನಡೆಸಿದ್ದಾರೆ.
ಖಾಸಗಿ ಕೃಷಿಭೂಮಿಗೂ ಕುತ್ತು:
ಸೊಣ್ಣಮಾರನಹಳ್ಳಿಯಲ್ಲಿ ಸುಮಾರು 223 ಎಕರೆ ಹಾಗೂ ದಂಡುದಾಸನಕೊಡಿಗೆಹಳ್ಳಿ ವ್ಯಾಪ್ತಿಯಲ್ಲಿ ಸುಮಾರು 145 ಎಕರೆ ಜಮೀನಿಗೆ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಇದರಲ್ಲಿ ಸರ್ಕಾರಿ ಜಮೀನಿನೊಂದಿಗೆ ಈ ಭಾಗದ ಖಾಸಗಿ ಕೃಷಿಭೂಮಿಯೂ ಸೇರಿದೆ. ಇದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ. ಸರ್ಕಾರ ಭೂಸ್ವಾಧಿನಕ್ಕೆ ಗುರುತಿಸಿರುವ ಜಮೀನುಗಳು ಸಂಪೂರ್ಣವಾಗಿ ಕೃಷಿ ಭೂಮಿಯಾಗಿದ್ದರು ತಲತಲಾಂತರಗಳಿಂದ ರೈತರು ಈ ಭಾಗದಲ್ಲಿ ಕೃಷಿ ಚಟುವಟಿಕೆಗಳಲ್ಲಿ ತೊಡಗಿದ್ದಾರೆ. ರಾಗಿ, ಜೋಳ ಸೇರಿ ತೋಟಗಾರಿಕೆ ಬೆಳೆಗಳನ್ನು ಬೆಳೆಯಲಾಗುತ್ತಿದೆ. ಇದರ ಜತೆಗೆ ದೊಡ್ಡಮಟ್ಟದಲ್ಲಿ ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡಿರುವ ಈ ಭಾಗದ ರೈತರಿಗೆ ಸರ್ಕಾರ ಭೂಸ್ವಾಧಿನದ ಹೆಸರಿನಲ್ಲಿ ದೊಡ್ಡ ಬರೆ ಹಾಕುತ್ತಿದೆ ಎಂಬ ಆಕ್ರೋಶ ವ್ಯಕ್ತವಾಗಿದೆ.
ನೀರಿನ ಮೂಲಗಳಿಗೂ ಧಕ್ಕೆ:
ಬಯಲುಸೀಮೆ ಗ್ರಾಮಾಂತರ ಜಿಲ್ಲೆಯಲ್ಲಿ ನದಿಮೂಲಗಳಿಲ್ಲದೆ ಕೇವಲ ಕೊಳವೆಬಾವಿ ಹಾಗೂ ಮಳೆಯಾಶ್ರಯದಲ್ಲಿ ಕೃಷಿ ಚಟುವಟಿಕೆ ನಡೆಯುತ್ತಿದೆ. ಉತ್ತಮ ಮಳೆಯಾಗಿ ಕೆರೆಕುಂಟೆಗಳು ಭರ್ತಿಯಾದರೆ ಕೊಳವೆಬಾವಿಗಳಲ್ಲಿ ಅಂತರ್ಜಲ ಮಟ್ಟ ಸುಧಾರಿಸುತ್ತದೆ ಇದರಿಂದ ಉತ್ತಮ ವ್ಯವಸ್ಯಾಯ ನಡೆಸಿಕೊಂಡು ಬರಲಾಗುತ್ತಿದೆ. ಆದರೆ ಸರ್ಕಾರ ಕೈಗಾರಿಕಾ ವಲಯ ವಿಸ್ತರಣೆ ನೆಪದಲ್ಲಿ ಅರ್ಕಾವತಿ ನದಿ ಜಲಾನಯನ ಪ್ರದೇಶದ ವ್ಯಾಪ್ತಿಯಲ್ಲಿರುವ ಈ ಗ್ರಾಮಗಳ ಮೇಲೆ ಕಣ್ಣುಹಾಕಿರುವುದರಿಂದ ಜಲಮೂಲಗಳಿಗೂ ಧಕ್ಕೆಯಾಗುತ್ತದೆ ಎಂಬುದು ಈ ಭಾಗದ ಜನರ ಆಕ್ಷೇಪಕ್ಕೆ ಪ್ರಮುಖ ಕಾರಣಗಳಲ್ಲೊಂದಾಗಿದೆ.
ಅ.12 ರ ಅಧಿಸೂಚನೆ ಆತಂಕ:
ಇನ್ನು ದೊಡ್ಡಬಳ್ಳಾಪುರ ತಾಲೂಕು ಸೊಣ್ಣಮಾರನಹಳ್ಳಿ ಹಾಗೂ ದಂಡುದಾಸನಕೊಡಿಗೆಹಳ್ಳಿ ವ್ಯಾಪ್ತಿಯಲ್ಲಿ ಸುಮಾರು 369 ಎಕರೆಯಷ್ಟು ಜಮೀನನನ್ನು ಸ್ವಾಧಿನಪಡಿಸಿಕೊಳ್ಳಲು ಅ.12ರಂದು ಪ್ರಾಥಮಿಕ ಅಧಿಸೂಚನೆ ಹೊರಡಿಸಿರುವ ಬಗ್ಗೆ ಈ ಭಾಗದ ರೈತರು ಆಕ್ರೋಶಗೊಂಡಿದ್ದು, ಯಾವುದೇ ಕಾರಣಕ್ಕೂ ಭೂಸ್ವಾಧಿನಕ್ಕೆ ಅವಕಾಶ ಕೊಡುವುದಿಲ್ಲ ಎಂದು ಪಟ್ಟುಹಿಡಿಯುವ ಜತೆಗೆ ದೊಡ್ಡಮಟ್ಟದ ಹೋರಾಟಕ್ಕೂ ವೇದಿಕೆ ಸಜ್ಜಗೊಳಿಸುತ್ತಿದ್ದಾರೆ. ಇತ್ತೀಚಿಗೆ ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ವೆಂಕಟರಮಣಯ್ಯ ನೇತೃತ್ವದಲ್ಲಿ ದೊಡ್ಡಬಳ್ಳಾಪುರ ಹಾಗೂ ದೇವನಹಳ್ಳಿ ಭಾಗದ ರೈತ ಮುಖಂಡರು ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದೆ. ಭೂಸ್ವಾಧಿನ ಪ್ರಕ್ರಿಯೆ ಮುಂದುವರೆದರೆ ಉಗ್ರ ಹೋರಾಟ ಆರಂಭಿಸುವ ಎಚ್ಚರಿಕೆಯನ್ನೂ ನೀಡಿದೆ.
ದೊಡ್ಡಬೆಳವಂಗಲ ಹೋರಾಟ:
ಇದೇ ದೊಡ್ಡಬಳ್ಳಾಪುರ ತಾಲೂಕು ದೊಡ್ಡಬೆಳವಂಗಲ ವ್ಯಾಪ್ತಿಯಲ್ಲಿ ಭೂಸ್ವಾಧಿನ ವಿರೋಧಿಸಿ ಧರಣಿ ಆರಂಭಿಸಿರುವ ಐದು ಗ್ರಾಮಗಳ ರೈತರು ಸರ್ಕಾರದ ಮೇಲೆ ಒತ್ತಡ ಹೇರುತ್ತಲೇ ಬಂದಿದ್ದಾರೆ. 150 ದಿನ ಪೂರೈಸಿರುವ ಅರ್ನಿದಿಷ್ಠಾವಧಿ ಧರಣಿ ಮುಂದುವರೆದಿದ್ದು, ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕುತ್ತಲೇ ಇದ್ದಾರೆ. ದೇವನಹಳ್ಳಿಯ ಚನ್ನರಾಯಪಟ್ಟಣ ಮಾದರಿಯಲ್ಲಿ ಹೋರಾಟ ನಡೆಸಿ ಸರ್ಕಾರ ನಿರ್ಧಾರದಿಂದ ಹಿಂದೆ ಸರಿಯುವಂತೆ ಮಾಡಬೇಕು ಎಂಬುದು ಈ ಭಾಗದ ರೈತಪರ ಹೋರಾಟಗಾರರ ಅಚಲ ನಿರ್ಧಾರವಾಗಿದೆ.
ಈ ಹಿಂದೆಯೇ ಸರ್ಕಾರಕ್ಕೆ ಪತ್ರ ಬರೆದು ಭೂಸ್ವಾಧಿನ ಪ್ರಕ್ರಿಯೆ ಕೈಬಿಡುವಂತೆ ಮನವಿ ಮಾಡಲಾಗಿದೆ. ಆದರೂ ಕೆಲವು ಅಧಿಕಾರಿಗಳು ಪ್ರಕ್ರಿಯೆ ಮುಂದುವರೆಸಿದ್ದಾರೆ ಎಂಬುದರ ಬಗ್ಗೆ ರೈತ ಮುಖಂಡರು ದೂರು ನೀಡಿದ್ದಾರೆ. ರೈತರ ವಿರೋಧದ ನಡುವೆಯೂ ಭೂಸ್ವಾಧಿನ ಪ್ರಕ್ರಿಯೆ ಮುಂದುವರೆಸಿದರೆ ಅದು ಅಕ್ಷಮ್ಯವಾಗಲಿದೆ. ರೈತರ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
> ಕೆ.ಎಚ್.ಮುನಿಯಪ್ಪ, ಜಿಲ್ಲಾ ಉಸ್ತುವಾರಿ ಸಚಿವ