ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಹಿಂದಿನ ಸರ್ಕಾರಿ ನೇಮಕಾತಿ ಪರೀಕ್ಷೆಗಳಲ್ಲಿ 100 ಅಂಕಗಳ ಸಾಮಾನ್ಯ ಕನ್ನಡ ಪತ್ರಿಕೆಯು ಅಭ್ಯರ್ಥಿಗಳ ಭಾಷಾ ಜ್ಞಾನ, ವ್ಯಾಕರಣ ಮತ್ತು ಆಡಳಿತಾತ್ಮಕವಾಗಿ ಕನ್ನಡ ಬಳಸುವ ಸಾಮರ್ಥ್ಯವನ್ನು ಅಳೆಯುವ ಪ್ರಮುಖ ಮಾನದಂಡವಾಗಿತ್ತು. ಇದೀಗ ಈ ಪತ್ರಿಕೆಯನ್ನು ಕೈಬಿಟ್ಟಿರುವುದರಿಂದ ಆಡಳಿತ ಭಾಷೆಯಾಗಿ ಕನ್ನಡದ ಕಲಿಕೆ ಮತ್ತು ಬಳಕೆಗೆ ಹಿನ್ನಡೆಯಾಗಲಿದೆ ಜತೆಗೆ ಕನ್ನಡ ಮಾಧ್ಯಮದಲ್ಲಿ ವಿದ್ಯಾಭ್ಯಾಸ ಮಾಡಿದ ಅಭ್ಯರ್ಥಿಗಳಿಗೆ ಅನ್ಯಾಯ ಮಾಡಿದಂತಾಗಿದೆ ಎಂದು ಕನ್ನಡ ಪಕ್ಷದ ರಾಜ್ಯ ಉಪಾಧ್ಯಕ್ಷ ಸಂಜೀವ್ ನಾಯ್ಕ್ ಆಕ್ಷೇಪ ವ್ಯಕ್ತಪಡಿಸಿದರು.
ದೇವನಹಳ್ಳಿಯ ಜಿಲ್ಲಾಡಳಿತಭವನದಲ್ಲಿನ ಡಿಸಿ ಕಚೇರಿಯಲ್ಲಿ ಕನ್ನಡ ಪಕ್ಷದ ವತಿಯಿಂದ ಜಿಲ್ಲಾಧಿಕಾರಿ ಡಾ.ಕೆ.ಎನ್.ಅನುರಾಧ ಮೂಲಕ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ಮನವಿ ಸಲ್ಲಿಸಿ ಮಾತನಾಡಿದರು. ಎಸ್ಡಿಎ, ಎಫ್ಡಿಎ ಹಾಗೂ ಅಬಕಾರಿ ಗಾರ್ಡ್ ನೇಮಕಾತಿ ಪರೀಕ್ಷೆಗಳಲ್ಲಿ ಈ ಹಿಂದೆ ಇದ್ದ 100 ಅಂಕಗಳ ಸಾಮಾನ್ಯ ಕನ್ನಡ ಪ್ರಶ್ನೆ ಪತ್ರಿಕೆಯನ್ನು ಮರುಸೇರ್ಪಡೆ ಮಾಡಬೇಕು ಎಂದು ಒತ್ತಾಯಿಸಿದರು. ಅಬಕಾರಿ ಗಾರ್ಡ್ ನೇಮಕಾತಿ ಪರೀಕ್ಷೆಯಲ್ಲಿಯೂ ಸಾಮಾನ್ಯ ಕನ್ನಡ ಪತ್ರಿಕೆ ಕೈಬಿಟ್ಟು ಸಾಮಾನ್ಯ ಜ್ಞಾನ ಪತ್ರಿಕೆ ಮಾತ್ರ ಉಳಿಸಿಕೊಂಡಿರುವುದು ಕನ್ನಡ ಭಾಷೆ ಹಾಗೂ ಕನ್ನಡ ಮಾಧ್ಯಮದಲ್ಲಿ ವಿದ್ಯಾಭ್ಯಾಸ ಮಾಡಿದ ಅಭ್ಯರ್ಥಿಗಳಿಗೆ ಅನ್ಯಾಯ ಮಾಡಿದಂತಾಗಿದೆ. ಇದರಿಂದ ಗ್ರಾಮೀಣ ಭಾಗದ ಅಭ್ಯರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಹಿನ್ನಡೆ ಅನುಭವಿಸುವ ಆತಂಕವಿದೆ ಎಂದು ತಿಳಿಸಿದರು. ಕನ್ನಡವನ್ನು ಪದವಿ ಹಂತದಲ್ಲಿ ಪ್ರಮುಖ ವಿಷಯವಾಗಿ ಅಭ್ಯಾಸ ಮಾಡಿರುವ ಅಭ್ಯರ್ಥಿಗಳಿಗೆ ಸಾಮಾನ್ಯ ಕನ್ನಡ ಪತ್ರಿಕೆ ಸರ್ಕಾರಿ ಉದ್ಯೋಗ ಪಡೆಯಲು ಉತ್ತಮ ಅವಕಾಶ ಕಲ್ಪಿಸಿತ್ತು. ಈ ಪತ್ರಿಕೆಯನ್ನು ತೆಗೆದುಹಾಕುವುದರಿಂದ ಕನ್ನಡ ಪದವೀಧರರ ಉದ್ಯೋಗಾವಕಾಶಗಳಿಗೆ ಧಕ್ಕೆಯಾಗಲಿದೆ. ಅಲ್ಲದೆ, ಮುಂದಿನ ದಿನಗಳಲ್ಲಿ ಉನ್ನತ ಶಿಕ್ಷಣದಲ್ಲಿ ಕನ್ನಡ ವಿಷಯವನ್ನು ಆಯ್ಕೆ ಮಾಡಿಕೊಳ್ಳುವ ವಿದ್ಯಾರ್ಥಿಗಳ ಸಂಖ್ಯೆಯೂ ಕಡಿಮೆಯಾಗುವ ಸಾಧ್ಯತೆಯಿದೆ ಎಂದು ದೂರಿದರು.
ವಿದ್ಯಾರ್ಥಿಗಳ ಮೇಲೆ ಪ್ರತಿಕೂಲ ಪರಿಣಾಮ:
ರಾಜ್ಯ ಪಠ್ಯಕ್ರಮದ ಶಾಲೆಗಳಲ್ಲಿ ವಿದ್ಯಾಭ್ಯಾಸ ಮಾಡಿದ ವಿದ್ಯಾರ್ಥಿಗಳಿಗೆ ಸಾಮಾನ್ಯ ಕನ್ನಡ ಪತ್ರಿಕೆ ಅನುಕೂಲಕರವಾಗಿತ್ತು. ಇದೀಗ ಅದನ್ನು ಕೈಬಿಟ್ಟಿರುವುದರಿಂದ ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳು ಹಾಗೂ ಕನ್ನಡ ಮಾಧ್ಯಮದ ಅಭ್ಯರ್ಥಿಗಳ ಸ್ಪರ್ಧಾತ್ಮಕ ಸಾಮರ್ಥ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ ಎಂದು ಸಂಜೀವ್ ನಾಯ್ಕ್ ಹೇಳಿದರು. ಸರ್ಕಾರಿ ಕಚೇರಿಗಳಲ್ಲಿ ಕಡತಗಳ ನಿರ್ವಹಣೆ, ಸಾರ್ವಜನಿಕರೊಂದಿಗೆ ಸಂವಹನ ಹಾಗೂ ಆಡಳಿತಾತ್ಮಕ ವ್ಯವಹಾರಗಳಲ್ಲಿ ಶುದ್ಧ ಮತ್ತು ವ್ಯಾವಹಾರಿಕ ಕನ್ನಡದ ಬಳಕೆ ಅತ್ಯಗತ್ಯವಾಗಿದೆ. ಕೇವಲ ಸಂವಹನ ಪತ್ರಿಕೆಯ ಮೂಲಕ ಅಭ್ಯರ್ಥಿಗಳ ಆಳವಾದ ಭಾಷಾಜ್ಞಾನ ಮತ್ತು ವ್ಯಾಕರಣದ ಅರಿವನ್ನು ಸಮರ್ಪಕವಾಗಿ ಪರೀಕ್ಷಿಸಲು ಸಾಧ್ಯವಿಲ್ಲ. ಆದ್ದರಿಂದ ಸರ್ಕಾರಿ ಹುದ್ದೆಗಳಿಗೆ ಕನ್ನಡ ಭಾಷೆಯಲ್ಲಿ ಉತ್ತಮ ಜ್ಞಾನ ಹೊಂದಿರುವ ಅಭ್ಯರ್ಥಿಗಳ ಆಯ್ಕೆಗೆ ಆದ್ಯತೆ ನೀಡಬೇಕು ಎಂದು ಒತ್ತಾಯಿಸಿದರು.
ಹಿಂದಿನ ಮಾದರಿ ಅನುಸರಿಸಬೇಕು:
ಮುಂಬರುವ ಎಲ್ಲ ಸರ್ಕಾರಿ ನೇಮಕಾತಿ ಪರೀಕ್ಷೆಗಳಲ್ಲಿ ಕೇವಲ ಸಂವಹನ ಪತ್ರಿಕೆಗೆ ಸೀಮಿತವಾಗದೆ, ಹಿಂದಿನ ಪರೀಕ್ಷಾ ಮಾದರಿಯಂತೆ 100 ಅಂಕಗಳ ಸಾಮಾನ್ಯ ಕನ್ನಡ ಪ್ರಶ್ನೆ ಪತ್ರಿಕೆಯನ್ನು ಕಡ್ಡಾಯವಾಗಿ ಮರುಸೇರ್ಪಡೆ ಮಾಡಬೇಕು. ಇಲ್ಲವೇ ಸಂವಹನ ಪತ್ರಿಕೆಯ ಜತೆಯಲ್ಲಿಯೇ ಪ್ರತ್ಯೇಕ ಸಾಮಾನ್ಯ ಕನ್ನಡ ಪತ್ರಿಕೆಯನ್ನು ಅಳವಡಿಸಬೇಕು ಎಂದು ಕಾರ್ಯದರ್ಶಿ ಡಿ.ಪಿ.ಆಂಜನೇಯ ಒತ್ತಾಯಿಸಿದರು. ಕನ್ನಡ ಭಾಷೆೆಯ ರಕ್ಷಣೆ, ಆಡಳಿತದಲ್ಲಿ ಕನ್ನಡದ ಸಮರ್ಪಕ ಅನುಷ್ಠ್ಠಾನ ಹಾಗೂ ಗ್ರಾಮೀಣ ಅಭ್ಯರ್ಥಿಗಳ ಉದ್ಯೋಗಾವಕಾಶಗಳ ಹಿತದೃಷ್ಟಿಯಿಂದ ಈ ಬೇಡಿಕೆಯನ್ನು ಗಂಭೀರವಾಗಿ ಪರಿಗಣಿಸಬೇಕು. ಇಲ್ಲದಿದ್ದರೆ ಕನ್ನಡ ನಾಡು, ನುಡಿಯ ಹಿತದೃಷ್ಟಿಯಿಂದ ಬೀದಿ ಹೋರಾಟದ ಜತೆಗೆ ಕಾನೂನು ಹೋರಾಟವನ್ನೂ ನಡೆಸುವುದು ಅನಿವಾರ್ಯವಾಗಲಿದೆ ಎಂದು ಎಚ್ಚರಿಕೆ ನೀಡಿದರು.