ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ದೇವನಹಳ್ಳಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ವಿದೇಶಗಳಿಗೆ ತೆರಳುವ ಪ್ರಯಾಣಿಕರಿಗೂ ಡಿಜಿ ಯಾತ್ರಾ ಸೌಲಭ್ಯ ಕಲ್ಪಿಸಲು ಪ್ರಾಯೋಗಿಕ ಪರೀಕ್ಷೆ ಪ್ರಾರಂಭಿಸಲಾಗಿದೆ. ನ.1ರಿಂದ ಪೂರ್ಣ ಪ್ರಮಾಣದಲ್ಲಿ ಸೇವೆ ಅರಂಭವಾಗಲಿದೆ ಎಂದು ಬಿಐಎಎಲ್ ಮುಖ್ಯ ತಾಂತ್ರಿಕ ಅಧಿಕಾರಿ ಜಾರ್ಜ್ ಫ್ಯಾಂಥೋಮ್ ತಿಳಿಸಿದ್ದಾರೆ.
ಡಿಜಿ ಯಾತ್ರಾ ಎನ್ನುವುದು ಭಾರತ ಸರ್ಕಾರದ ನಾಗರಿಕ ವಿಮಾನಯಾನ ಸಚಿವಾಲಯ ಮತ್ತು ಡಿಜಿ ಯಾತ್ರಾ ಫೌಂಡೇಶನ್ ನೇತೃತ್ವದಲ್ಲಿ ಪರಿಚಯಿಸಲಾದ ಕಾಗದರಹಿತ ಮತ್ತು ತೊಂದರೆರಹಿತ ವಿಮಾನ ಪ್ರಯಾಣಕ್ಕಿರುವ ಒಂದು ಡಿಜಿಟಲ್ ವೇದಿಕೆಯಾಗಿದೆ. ಇದು ಮುಖ ಗುರುತಿಸುವಿಕೆ ತಂತ್ರಜ್ಞಾನ ಆಧರಿಸಿದ್ದು, ವಿಮಾನ ನಿಲ್ದಾಣದ ಪ್ರವೇಶದಿಂದ ಹಿಡಿದು ಭದ್ರತಾ ತಪಾಸಣೆ ಮತ್ತು ಬೋರ್ಡಿಂಗ್ ವರೆಗಿನ ಪ್ರಕ್ರಿಯೆಗಳನ್ನು ಅತ್ಯಂತ ವೇಗವಾಗಿ ಮತ್ತು ಸರಳವಾಗಿ ಮಾಡುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಂತಾರಾಷ್ಟ್ರೀಯ ಪ್ರಯಾಣಕ್ಕೂ ವಿಸ್ತರಣೆ:
ದೇಶಿಯ ವಿಮಾನ ಪ್ರಯಾಣಿಕರಿಗೆ ಈಗಾಗಲೇ ಲಭ್ಯವಿರುವ ಈ ಸೌಲಭ್ಯವನ್ನು ಅಂತಾರಾಷ್ಟ್ರೀಯ ಪ್ರಯಾಣಕ್ಕೂ ವಿಸ್ತರಣೆ ಮಾಡಲಾಗಿದೆ. ಮೊದಲ ಹಂತದಲ್ಲಿ ಬೆಂಗಳೂರಿನಿಂದ ಲಂಡನ್, ಮಾಲೆ, ಹಾಗೂ ಕೌಲಾಲಂಪುರಕ್ಕೆ ತೆರಳುವ ವಿಮಾನಗಳ ಪ್ರಯಾಣಿಕರಿಗೆ ಡಿಜಿ ಯಾತ್ರಾ ಮೂಲಕ ಪ್ರಾಯೋಗಿಕ ಸೇವೆ ಒದಗಿಸಲಾಗುತ್ತಿದೆ ಎಂದು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿಯಮಿತ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ದೇಶೀಯ ವಿಮಾನಯಾನದಲ್ಲಿ ಡಿಜಿ ಯಾತ್ರಾ ಬಳಕೆ ಹೆಚ್ಚಾಗುತ್ತಿದ್ದು, ದೇಶದಾದ್ಯಂತ 2.65 ಕೋಟಿಗೂ ಹೆಚ್ಚು ಮಂದಿ ಈ ವೇದಿಕೆಯ ಬಳಕೆದಾರರಾಗಿದ್ದಾರೆ. ಇದೇ ಸೌಲಭ್ಯವನ್ನು ವಿದೇಶಿ ಪ್ರಯಾಣಿಕರಿಗೂ ವಿಸ್ತರಿಸುವ ಮೂಲಕ ವಿಮಾನ ನಿಲ್ದಾಣದ ಸೇವೆಯನ್ನು ಮತ್ತಷ್ಟು ಸುಧಾರಿಸಲು ಉದ್ದೇಶಿಸಲಾಗಿದೆ ಎಂದು ಬಿಐಎಎಲ್ ತಿಳಿಸಿದೆ.